ಬೆಂಗಳೂರು, ನ.17- ಕೋಮು ಭಾವನೆ ಕೆರಳಿಸುವ ಮೂಲಕ ಶಾಂತಿ, ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ ಎಂಬ ಆರೋಪದಡಿ, ದಕ್ಷಿಣ ಕನ್ನಡ ಜಿಲ್ಲೆ ಭಜರಂಗದಳ ಘಟಕದ ಕೆಲವರಿಗೆ ಜಿಲ್ಲಾ ಪೊಲೀಸ್ ಗಡಿಪಾರಿನ ನೋಟೀಸ್ ಜಾರಿಗೊಳಿಸಿದೆ.
ಸರ್ಕಾರದ ಕ್ರಮಕ್ಕೆ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ಬೆನ್ನಲ್ಲೇ ಜಿಲ್ಲಾ ಪೊಲೀಸ್ ಕ್ರಮವನ್ನು ಸಮರ್ಥಿಸಿರುವ ಗೃಹ ಸಚಿವ ಡಾ. ಪರಮೇಶ್ವರ್ ರಾಜ್ಯದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಕೋಮು ಭಾವನೆ ಕೆರಳಿಸುವ ಮೂಲಕ ಶಾಂತಿ ಭಂಗಕ್ಕೆ ಯತ್ನಿಸಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಜರಂಗದಳದವರು (Bajrang Dal) ಕಾನೂನು ವ್ಯಾಪ್ತಿಯಲ್ಲಿದ್ದರೆ ನಾವು ಅವರ ಜೊತೆಯಲ್ಲಿ ಇರುತ್ತೇವೆ. ಅವರು ಕಾನೂನು ಮೀರಿದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ. ರಾಜ್ಯದಲ್ಲಿ ಶಾಂತಿ ಕಾಪಾಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನಸಾಮಾನ್ಯರಿಗೆ ಭರವಸೆ ನೀಡಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಇರುವುದೇ ಕಾನೂನು ಪರಿಪಾಲನೆ ಮಾಡಲಿಕ್ಕೆ,ಕಾನೂನು ಮೀರಿದರೆ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ.ಕಾನೂನನ್ನು ಯಾರೇ ಉಲ್ಲಂಘನೆ ಮಾಡಿದರೂ ಕಠಿಣ ಕ್ರಮ ಜರುಗಿಸಲಾಗುವುದು. ಇದರಲ್ಲಿ ವ್ಯಕ್ತಿಗತ ದ್ವೇಷ ಅಥವಾ ರಾಜಕೀಯ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾನೂನನ್ನು ಹೊರತು ಪಡಿಸಿ ಪೊಲೀಸ್ ಇಲಾಖೆ ಕೆಲಸ ಮಾಡಲಾಗುವುದಿಲ್ಲ. ಭಜರಂಗದಳವಾಗಲಿ, ಸಂಘ ಸಂಸ್ಥೆಯಾಗಲಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ನಮ್ಮ ಸಹಕಾರ ಇರುತ್ತದೆ. ಕಾನೂನು ಮೀರಿದರೆ ಏನು ಮಾಡಬೇಕು. ಪೊಲೀಸ್ ಇಲಾಖೆ ಇರುವುದೇ ಕಾನೂನು ಪಾಲನೆಗೆ ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಈ ಹಂತದಲ್ಲಿ ಯಾವುದೇ ವ್ಯಕ್ತಿಗತ ದ್ವೇಷ, ಮತ್ತೊಬ್ಬರನ್ನು ಹತ್ತಿಕ್ಕವ ಉದ್ದೇಶ ಅಥವಾ ರಾಜಕೀಯ ಕಾರಣಗಳು ಇರುವುದಿಲ್ಲ ಎಂದರು.