ಬೆಂಗಳೂರು,ಸೆ.4-ತಾನು ಅಪೋಲೋ ಆಸ್ಪತ್ರೆಯಲ್ಲಿ ವೈದ್ಯನೆಂದು ಪರಿಚಯ ಮಾಡಿಕೊಂಡು ಜ್ಯುವೆಲ್ಲರಿ ಶಾಪ್ಗೆ ಬಂದ ಖದೀಮ ಚಿನ್ನಾಭರಣ ಕದ್ದೊಯ್ದು ಜಯನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಜಯನಗರದ 8ನೇ ಬ್ಲಾಕ್ನಲ್ಲಿನ ಕಮಕಲಾಲ್ ಚಿನ್ನದ ಅಂಗಡಿಯಲ್ಲಿ ಕಳ್ಳ ಕೈಚಳಕ ತೋರಿಸಿದ್ದ ರಾಹುಲ್ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಯಾಗಿದ್ದಾನೆ.
ಮೊದಲಿಗೆ ಅಂಗಡಿಯಲ್ಲಿ ಬೆಳ್ಳಿಯ ನಾಣ್ಯ ಖರೀದಿಸಿದ ಆರೋಪಿ ರಾಹುಲ್, ಬಳಿಕ ತನ್ನ ತಂಗಿ ಮದುವೆಗೆ ಚಿನ್ನ ಬೇಕು ಎಂದು ಹೇಳಿ 32 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 75 ಗ್ರಾಂ ತೂಕದ ಲಾಂಗ್ ಚೈನ್, 22 ಗ್ರಾಂ ತೂಕದ ಬ್ರಾಸ್ಲೆಟ್ ಕೊಂಡಿದ್ದ ಎಂದು ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಂತರ ತನ್ನ ಸಂಬಂಧಿ ಹಣ ತರುತ್ತಾರೆಂದು ನಂಬಿಸಿದ ಆರೋಪಿ ಸುಮಾರು 2 ಗಂಟೆ ಕಾಲ ಅಂಗಡಿಯಲ್ಲಿ ಕಾಲ ಕಳೆದಿದ್ದಾನೆ. ಆಗ ತಾನು ಕದಿಯಬಹುದಾದ ವಸ್ತುಗಳ ಬಗ್ಗೆ ಸ್ಕೆಚ್ ಹಾಕಿದ್ದಾನೆ. ನಂತರ ಬೆಳ್ಳಿಯ ಫೋಟೋ ಫ್ರೇಮ್ ಬೇಕು ಎಂದು ಕೇಳಿದ್ದ. ಅಂಗಡಿಯವರು ಫ್ರೇಮ್ ತರಲು ಒಳಗೆ ಹೋದಾಗ ರ್ಯಾಕ್ನಲ್ಲಿಟ್ಟ ಒಡವೆ ಬಾಕ್ಸ್ ಸಮೇತ ಪರಾರಿಯಾಗಿದ್ದ.
ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅದನ್ನು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ ಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.