ಹೊಸ ದೆಹಲಿ: ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಹಲವಾರು ಸಮಸ್ಯೆಗಳುಂಟಾಗುತ್ತಿವೆ.ಡಾಲರ್ ಎದುರು ರೂಪಾಯಿ ಮೌಲ್ಯ ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಕುಸಿತಗೊಂಡಿದೆ.ರೂಪಾಯಿ ಅಪಮೌಲ್ಯವಾಗುತ್ತಿರುವ ಪರಿಣಾಮ ಆಮದು ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗುತ್ತಿದೆ.
ಕಚ್ಚಾತೈಲ,ಸೆಮಿಕಂಡಕ್ಟರ್, ರಾಸಾಯನಿಕ ಕಚ್ಚಾ ಪದಾರ್ಥಗಳನ್ನು ಹೆಚ್ಚಿನ ಬೆಲೆ ನೀಡಿ ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಇದು ಉತ್ಪಾದನಾ ವಲಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ.
ಇವುಗಳೆಲ್ಲವುಗಳಿಗಿಂತ ರಸಗೊಬ್ಬರ ತಯಾರಿಕೆ ಮೇಲೆ ತುಂಬಾ ಗಂಭೀರ ಪರಿಣಾಮ ಬೀರಲಿದೆ.ಈಗಾಗಲೇ ರಷ್ಯಾ- ಯುಕ್ರೇನ್ ಯುದ್ಧದ ಪರಿಣಾಮವಾಗಿ ರಸಗೊಬ್ಬರ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
ರಾಜ್ಯದಲ್ಲಿ ಪೊಟ್ಯಾಷ್ ರಸಗೊಬ್ಬರ ದರ ದಿಢೀರೆಂದು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ದರ ಏರಿಕೆ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಗೊಬ್ಬರದ ಕೊರತೆಯು ಉಂಟಾಗಿದೆ. ಪೊಟ್ಯಾಷ್ ಗೊಬ್ಬರ ಸಿಗದೆ ಕಬ್ಬು, ಬಾಳೆ, ತೆಂಗು, ಕಲ್ಲಂಗಡಿ ಬೆಳೆಗಾರರು ಕಂಗಾಲಾಗಿದ್ದಾರೆ.
ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ಪ್ರತಿ 50 ಕೆ.ಜಿ. ಪೊಟ್ಯಾಷ್‍ಗೆ 950-1050 ರೂ. ಇದ್ದುದು ದಿಢೀರ್ 1700 ರೂ. ಗೆ ಏರಿಕೆಯಾಗಿದೆ ಇದು ರೈತರನ್ನು ಕಂಗೆಡಿಸಿದೆ. ಒಂದೆಡೆ ಕೃಷಿ ಇಲಾಖೆಯು ರಸಗೊಬ್ಬರದ ಕೊರತೆಯಿಲ್ಲ ಎನ್ನುತ್ತಿದೆ. ಆದರೆ ಮಾರಾಟಗಾರರು ಪೊಟ್ಯಾಷ್ ಸ್ಟಾಕ್ ಇಲ್ಲ. ಇದಕ್ಕೆ ಬದಲಿಯಾಗಿ ಎಸ್‍ಒಪಿ (ಫಾಸ್ಪರಸ್ ಆಫ್ ಸಲ್ಫೇಟ್) ಯನ್ನು ಬಳಸಿ ಎಂದು ರೈತರಿಗೆ ಸಲಹೆ ನೀಡುತ್ತಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಡಿಎಪಿ, ಪೊಟ್ಯಾಷ್ ಮೊದಲಾದ ರಸಗೊಬ್ಬರಗಳ ಬೆಲೆಯಲ್ಲಿ ಶೇ.30ರವರೆಗೆ ಏರಿಕೆ ಮಾಡಲಾಗಿತ್ತು. ಇದನ್ನು ಸುಧಾರಿಸಿಕೊಳ್ಳುವ ಮುನ್ನವೇ ಪೊಟ್ಯಾಷ್ ದರ ಏರಿಕೆ ಮಾಡಲಾಗಿದೆ. ವರ್ಷಕ್ಕೆ ಎರಡು ಮೂರು ಬಾರಿ ರಸಗೊಬ್ಬರಗಳ ದರ ಹೆಚ್ಚಿಸಿದರೆ ಅನ್ನದಾತರು ಏನು ಮಾಡಬೇಕು ಎಂದು ರೈತ ಮುಖಂಡರು ಪ್ರಶ್ನಿಸುತ್ತಿದ್ದಾರೆ.
ಇಳುವರಿಗೆ ಪೊಟ್ಯಾಷ್ ಬೇಕು :
ಕಬ್ಬು, ಬಾಳೆ, ತೆಂಗು, ಕಲ್ಲಂಗಡಿ, ಟೊಮ್ಯಾಟೊ ಸೇರಿದಂತೆ ನಾನಾ ಬೆಳೆಗಳಿಗೆ ಪೊಟ್ಯಾಷ್ ಬಳಸಿದರೆ ಉತ್ತಮ ಇಳುವರಿ ಬರಲಿದೆ. ಅದರಲ್ಲೂ ತೆಂಗು, ಬಾಳೆ, ಅಡಕೆ, ಮಾವು ಮತ್ತಿತರ ವಾಣಿಜ್ಯ ಬೆಳೆಗಳಿಗೆ ಸಕಾಲದಲ್ಲಿ ಪೊಟ್ಯಾಷ್ ಗೊಬ್ಬರ ಹಾಕದಿದ್ದರೆ ಗೊನೆಕಟ್ಟುವುದಿಲ್ಲ.ಗೊನೆ ಕಟ್ಟಿದರೂ ಉತ್ತಮ ಫಸಲು ಸಿಗುವುದಿಲ್ಲ ಹೀಗಾಗಿ ಪೊಟ್ಯಾಷ್ ಕೊಡಲೇಬೇಕು .
ಹೀಗಾಗಿ ಪೊಟ್ಯಾಷ್ ಗೆ ತುಂಬಾ ಬೇಡಿಕೆಯಿದೆ.ಈ ಬೇಡಿಕೆಯ ಪ್ರಮಾಣಕ್ಕೆ ಅನುಗುಣವಾಗಿ ಉತ್ಪಾದನೆ ಸಾಧ್ಯವಾಗುತ್ತಿಲ್ಲ ರೈತರು ದುಬಾರಿ ಬೆಲೆ ಕೊಟ್ಟು ಖರೀದಿಸೋಣ ಎಂದರೆ ಮಾರಾಟಗಾರರು ಪೊಟ್ಯಾಷ್ ಖಾಲಿಯಾಗಿದೆ ಎನ್ನುತ್ತಿದ್ದಾರೆ ಇದು ಈಗಿನ ಪರಿಸ್ಥಿತಿ.
ಆದರೆ ಇನ್ನು ಮುಂದೆ ಪರಿಸ್ಥಿತಿ ಮತ್ತಷ್ಟು ಕಠಿಣವಾಗಲಿದೆ ಪ್ರತಿ ಐವತ್ತು ಕಿಲೋ ಪೊಟ್ಯಾಷ್ ಬೆಲೆ ಎರಡು ಸಾವಿರ ರೂಪಾಯಿ ದಾಟಲಿದೆ ಎಂದು ಅಂದಾಜಿಸಲಾಗಿದೆ ಇದಕ್ಕೆ ಪ್ರಮುಖ ಕಾರಣ ಕಚ್ಚಾ ಉತ್ಪನ್ನಗಳ ಕೊರತೆ ಹಾಗೂ ರೂಪಾಯಿ ಅಪಮೌಲ್ಯ.
ಭಾರತ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥ ವ್ಯವಸ್ಥೆ ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆಯುತ್ತಿದೆಯಾದರೂ ಅಷ್ಟೇ ದೊಡ್ಡ ಪ್ರಮಾಣದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಾ ಸಾಗಿದೆ ಇದರ ಪರಿಣಾಮವಾಗಿ ಅಮದು ವಲಯ ಹೆಚ್ಚಿನ ವಂತಿಗೆ ತೆರಬೇಕಾದ ಪರಿಸ್ಥಿತಿಗೆ ತಲುಪಿದೆ ಹೀಗಾಗಿ ಉತ್ಪಾದನಾ ವಲಯದ ವೆಚ್ಚದ ಪ್ರಮಾಣ ಗಣನೀಯವಾಗಿ ಹೆಚ್ಚಳಚಾಗುತ್ತಿದ್ದು,ರೈತಾಪಿ ವರ್ಗ ಸಂಕಷ್ಟದ ದಿನಗಳನ್ನು ಎದುರಿಸುವಂತಾಗಿದೆ.
ಪೊಟ್ಯಾಷ್ ಆಮದು ಬೆಲೆ ಹೆಚ್ಚಳವಾಗಿದೆ ಎಂದು ಗೊಬ್ಬರ ತಯಾರಕರು ಬೆಲೆ ಹೆಚ್ಚಳ ಮಾಡುತ್ತಾರೆ ಬೆಳೆಗಳಿಗೆ ಇದನ್ನು ಕೊಡುವುದು ಅನಿವಾರ್ಯವಾದ್ದರಿಂದ ರೈತರು ದುಬಾರಿ ಬೆಲೆ ಕೊಟ್ಟು ಖರೀದಿಸಲೇಬೇಕು ಹಾಗಂತ ರೈತರು ತಾನು ಅಧಿಕ ಬೆಲೆ ನೀಡಿ ಪೊಟ್ಯಾಷ್ ಖರೀದಿಸಿ ಬೆಳೆಗಳಿಗೆ ಹಾಕಿದ್ದೇನೆ ಇದಕ್ಕೆ ಅನುಗುಣವಾಗಿ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡಿದ್ದೇನೆ ಎಂದು ಹೇಳಲು ಬರುವುದಿಲ್ಲ. ಎಲ್ಲಾ ಉತ್ಪಾದಕರು ತಮ್ಮ ಉತ್ಪಾದನಾ ವೆಚ್ಚ,ಲಾಭಾಂಶ ಲೆಕ್ಕ ಹಾಕಿ ಧರ ನಿಗಧಿ ಮಾಡುವುದು ವಾಡಿಕೆ. ಆದರೆ ಕೃಷಿ ಕ್ಷೇತ್ರ ಮಾತ್ರ ಇದಕ್ಕೆ ಅಪವಾದ. ರೈತ ತಾನು ಎಷ್ಟೇ ವೆಚ್ಚ ಮಾಡಿ ಉತ್ಪಾದಿಸಿದರೂ ಅದನ್ನು ಲೆಕ್ಕಹಾಕಿ ಧರ ನಿಗದಿ ಮಾಡಲು ಸಾಧ್ಯವಿಲ್ಲ ಹೀಗಾಗಿ ಕೃಷಿ ಮತ್ತಷ್ಟು ದುಬಾರಿಯಾಗಿ ರೈತ ಸಂಕಷ್ಟದ ದಿನಗಳನ್ನು ಎದುರಿಸಬೇಕಾಗಲಿದೆ.