ಬೆಂಗಳೂರು, ಅ.28- ವನ್ಯಜೀವಿ ಅಪರಾಧ ಪ್ರಕರಣಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮತ್ತು ವನ್ಯಜೀವಿ ಅಪರಾಧ ಮತ್ತು ಅರಣ್ಯ ಅಪರಾಧಗಳ ಎಲ್ಲಾ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ಅರಣ್ಯ ಇಲಾಖೆಯು ಮಾಹಿತಿ ತಂತ್ರಜ್ಞಾನ ( ಐಟಿ) ಆಧಾರಿತ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ.
ವನ್ಯಜೀವಿ ಅಪರಾಧಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯು ಸಂಘಟಿತ ರೂಪದಲ್ಲಿ ಲಭ್ಯವಿಲ್ಲ ಮತ್ತು ಇಲಾಖೆಗೆ ನೇಮಕವಾಗುವ ಹೊಸ ಅಧಿಕಾರಿಯು ಅಪರಾಧದ ಇತಿಹಾಸವನ್ನು ತಿಳಿದುಕೊಳ್ಳುವುದು ಕಷ್ಟಕರವಾಗಿದೆ.ಹೀಗಾಗಿ
ಹಳೇ ಪ್ರಕರಣಗಳ ಕುರಿತು ಅಧ್ಯಯನ ಮಾಡಲು ಅಧಿಕಾರಿಗಳಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಇದನ್ನು ನಿವಾರಣೆ ಮಾಡಲು ಇಲಾಖೆಯು ವೈಲ್ಡ್‌ಲೈಫ್ ಟ್ರಸ್ಟ್ ಆಫ್ ಇಂಡಿಯಾ (ಡಬ್ಲ್ಯುಟಿಐ) ಅಭಿವೃದ್ಧಿಪಡಿಸಿದ ಹಾಸ್ಟೈಲ್ ಆಕ್ಟಿವಿಟಿ ವಾಚ್ ಕರ್ನಲ್ (ಹೆಚ್ ಎಡಬ್ಲ್ಯೂ ಕೆ) ಸಾಫ್ಟ್‌ವೇರ್ ಅನ್ನು ಅಳವಡಿಸಿಕೊಳ್ಳುತ್ತಿದೆ.
ಇಲಾಖೆಯ ಮೂಲಗಳ ಪ್ರಕಾರ, ಈ ಸಾಫ್ಟ್‌ವೇರ್ ಅರಣ್ಯ ಮತ್ತು ವನ್ಯಜೀವಿಗಳ ಪರಿಣಾಮಕಾರಿ ನಿರ್ವಹಣೆ ಮತ್ತು ಆಡಳಿತವನ್ನು ಖಚಿತಪಡಿಸುತ್ತದೆ. ಪ್ರಾಣಿಗಳ ಸಾವುಗಳನ್ನು ನಿರ್ವಹಿಸಲು ಮತ್ತು ಸ್ವಯಂಚಾಲಿತವಾಗಿ ಹುಡುಕಾಟ ವಾರಂಟ್‌ಗಳನ್ನು ನೀಡಲು ಸಾಧ್ಯವಾಗುತ್ತದೆ.
ಹೆಚ್ಎಡಬ್ಲೂಕೆ ಎಲ್ಲ ಅರಣ್ಯ ಮತ್ತು ವನ್ಯಜೀವಿ-ಸಂಬಂಧಿತ ಪ್ರಕರಣಗಳ ಅವಲೋಕನ ಮಾಡಲಿಧೆ. ದಾಖಲಾತಿ ಪ್ರಕ್ರಿಯೆಯಲ್ಲಿನ ಕಾರ್ಯವಿಧಾನದ ತಪ್ಪುಗಳನ್ನು ನಿವಾರಿಸುತ್ತದೆ.
ರಾಜ್ಯ ಗಡಿಯಿಂದ ನಡೆಯುತ್ತಿರುವ ಕಳ್ಳ ಸಾಗಾಣಿಕೆ ಮತ್ತು ಕಳ್ಳಸಾಗಾಣಿಕೆದಾರರನ್ನು ಹಿಡಿಯುವಲ್ಲಿ ಇದು ಸಹಾಯ ಮಾಡುತ್ತದೆ.
ವನ್ಯಜೀವಿಗಳ ಸಾವು, ಶಂಕಿತ ಅಪರಾಧ ಚಟುವಟಿಕೆಗಳು ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಾಹನಗಳ ಚಲನವಲನದ ಮಾಹಿತಿಯ ಬಗ್ಗೆ ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.
ರಾಜ್ಯಾದ್ಯಂತ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳಿಗೆ ಸಂಬಂಧಿಸಿದ ಡೇಟಾವನ್ನು ನೈಜ ಸಮಯದಲ್ಲಿ ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ಹೆಚ್ಎಡ್ಲೂಕೆ ವ್ಯವಸ್ಥೆಯು ಇಲಾಖೆಗೆ ಸಹಾಯ ಮಾಡುತ್ತದೆ. ಇದು ಅಪರಾಧ ನಿರ್ವಹಣೆಯಲ್ಲಿ ಇಲಾಖೆಯ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಸುಭಾಷ್ ಕೆ ಮಾಳಖೇಡೆ ಮಾಹಿತಿ ನೀಡಿದ್ದಾರೆ.