ಬೆಂಗಳೂರು, ಅ.26 -ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆಯಲು ಮಾಜಿ ಶಾಸಕರೊಬ್ಬರ ಪತ್ನಿಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸಿಕ್ಕಿಬಿದ್ದಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.
ನೆಲಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅವರ ಪತ್ನಿ ಡಾ. ಸುಜಾ ಕೆ.ಶ್ರೀಧರ್ ಎನ್ನುವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸಿಕ್ಕಿಬಿದ್ದಿದ್ದಾರೆ.
ಡಾ. ಸುಜಾ ಕೆ.ಶ್ರೀಧರ್ ಅವರು ಪರಿಶಿಷ್ಟ ಜಾತಿಯ ದ್ರಾವಿಡ ಜಾತಿಯ ಸುಳ್ಳು ಪ್ರಮಾಣ ಪತ್ರ ಪಡೆದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆದುಕೊಂಡಿದ್ದರು. ಇದೇ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಜಿ.ಎನ್. ಶಕುಂತಲಾ ಅವರಿಗೆ ದೊರೆತಿದ್ದ ಬಡ್ತಿಗೆ ಮಾಜಿ ಶಾಸಕರು ತಮ್ಮ ರಾಜಕೀಯ ಪ್ರಭಾವ ಬಳಸಿ ತಮ್ಮ ಪತ್ನಿ ಡಾ. ಸುಜಾ ಕೆ.ಶ್ರೀಧರ್ ಅವರಿಗೆ ಕೊಡಿಸಿದ್ದರು.
ಇನ್ನು ಈ ಬಗ್ಗೆ ನ್ಯಾಯ ಕೊಡಿಸಬೇಕೆಂದು ಇದೇ ಕಾಲೇಜು ಉಪನ್ಯಾಸಕಿ ಡಾ. ಶಕುಂತಲಾ, ಸುಳ್ಳು ಪ್ರಮಾಣ ಪತ್ರ ನೀಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಅಧೀಕ್ಷಕ ಎಚ್.ಡಿ.ಆನಂದ್ ಕುಮಾರ್ ಅವರಿಗೆ ದೂರು ನೀಡಿದ್ದರು.
ಡಾ.ಸುಜಾ.ಕೆ.ಶ್ರೀಧರ್ ಕೇರಳ ಮೂಲದವರು. ಸದ್ಯ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ ಡಾ.ಸುಜಾ ಕೆ ಶ್ರೀಧರ್ ಕೇರಳದ ಎಳವ ಜಾತಿಗೆ ಸೇರಿದ್ದು, ತಂದೆಯ ಜಾತಿ ಮಾತ್ರ ಮಗಳಿಗೆ ಬರುತ್ತದೆಂದು ದೂರುನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಈ ದೂರು ಆಧರಿಸಿ ನಾಗರಿಕ ಹಕ್ಕುಗಳ ಜಾರಿ ನಿರ್ದೆಶಾನಾಲಯದಿಂದ ನೆಲಮಂಗಲ ತಹಶೀಲ್ದಾರ್, ಸುಳ್ಳು ಜಾತಿ ಪ್ರಮಾಣ ಪತ್ರ ನೀಡಲು ಶಿಫಾರಸ್ಸು ಮಾಡಿದ ಕಂದಾಯ ನಿರೀಕ್ಷಕ,ಮತ್ತು ಗ್ರಾಮ ಲೆಕ್ಕಿಗನ ಮೇಲೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.