ಬೆಂಗಳೂರು, ಸೆ.23- ಉದ್ಯಮಿ ಗೋವಿಂದ ಪೂಜಾರಿಗೆ ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುವ ಕೋಟ್ಯಾಂತರ ವಂಚನೆ ಪ್ರಕರಣದ ಮೂರನೇ ಆರೋಪಿ ಹಿರೇಹಡಗಲಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ ಇನ್ನೊಂದು ವಂಚನೆ ಕೃತ್ಯ ಬಯಲಾಗಿದೆ.
ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಯೊಬ್ಬರಿಂದ 1 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂದು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯ್ತಿ ಪಿಡಿಒ ಆಗಿದ್ದ ಸಂಜಯ್ ಚಡವಾಳ ಅವರಿಗೆ ಹಾಲಶ್ರೀ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಜಯ್ ಅವರು ಹಾಲಶ್ರೀ ಅವರ ಜನಪ್ರಿಯತೆ, ಬಿಜೆಪಿ ನಾಯಕರ ಒಡನಾಟ ಕಂಡು ಅವರ ಮೂಲಕ ಟಿಕೆಟ್ ಪಡೆಯಬಹುದು ಎಂದು ನಂಬಿ ಮಾತುಕತೆ ನಡೆಸಿದ ವೇಳೆ ಒಂದು ಕೋಟಿ ರೂ.ಗೆ ಡೀಲ್ ಆಗಿತ್ತು. ಸಂಜಯ್ ಒಂದು ಕೋಟಿ ರೂ. ಹಣವನ್ನು ಹಾಲಶ್ರೀ ಅವರಿಗೆ ನೀಡಿದ್ದರು.
ಆದರೆ, ಶಿರಹಟ್ಟಿ ಟಿಕೆಟ್ ಕೊಡಿಸುವಲ್ಲಿ ಹಾಲಶ್ರೀ ವಿಫಲರಾಗಿದ್ದರು. ಅದಾದ ಬಳಿಕ ಸಂಜಯ್ ಹಣ ವಾಪಸ್ ಕೊಡಬೇಕು ಎಂದು ಹಾಲಶ್ರೀ ಬೆನ್ನು ಬಿದ್ದಿದ್ದು ಆದರೆ, ಹಾಲಶ್ರೀ ದಿನ ದೂಡುತ್ತಲೇ ಇದ್ದರು. ಈ ನಡುವೆ, ಗೋವಿಂದ ಪೂಜಾರಿ ಪ್ರಕರಣ ಬೆಳಕಿಗೆ ಬಂದಿತ್ತು. ಸೆಪ್ಟೆಂಬರ್ 8ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಹಾಲಶ್ರೀ ತಮ್ಮ ಇನ್ನಷ್ಟು ಅಕ್ರಮಗಳು ಬಯಲಿಗೆ ಬರುವುದು ಬೇಡ ಎಂದು ಸಂಜಯ್ ಅವರಿಗೆ ಕರೆ ಮಾಡಿ ಹಣ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರು.
ಸಂಜಯ್ ಅವರು ಒಂದೆರಡು ದಿನ ಬಿಟ್ಟು ಹಣಕ್ಕಾಗಿ ಮಠಕ್ಕೆ ತೆರಳಿದರೆ ಅಷ್ಟು ಹೊತ್ತಿಗೆ ಹಾಲಶ್ರೀ ಮಠದಿಂದಲೇ ನಾಪತ್ತೆಯಾಗಿದ್ದರು. ಈ ವೇಳೆ ಸಂಜಯ್ ಅವರು ಹಾಲಶ್ರೀ ಚಾಲಕನ ಸಂಪರ್ಕ ಮಾಡಿದ್ದರು ಆಗ ಚಾಲಕ ಹಿರೇಹಡಗಲಿ ಮಠದಿಂದ ಮೈಸೂರಿನತ್ತ ತೆರಳಿ ಆಗಿತ್ತು.
ಈ ನಡುವೆ, ಹಾಲಶ್ರೀ ಕಾರು ಚಾಲಕ ಸಿಸಿಬಿ ಬಲೆಗೆ ಬಿದ್ದಿದ್ದ. ಈ ನಡುವೆ ಕಾರು ಚಾಲಕ ಮತ್ತು ಪಿಡಿಒ ಸಂಜಯ್ ನಡೆದಿರುವ ಮಾತುಕತೆ, ಫೋನ್ ಕಾಲ್ ಬೆನ್ನು ಹತ್ತಿ ಪಿಡಿಒ ಸಂಜಯ್‌ನನ್ನು ವಿಚಾರಣೆ ನಡೆಸಿದ್ದರು. ಆಗ ಹಾಲಶ್ರೀಯ ಇನ್ನೊಂದು ಹಗರಣ ಬೆಳಕಿಗೆ ಬಂದಿದೆ. ಸಿಸಿಬಿ ವಿಚಾರಣೆಯ ಬಳಿಕ ಸಂಜಯ್ ಈಗ ಮುಂಡರಗಿ ಠಾಣೆಗೆ ದೂರು ನೀಡಿದ್ದಾರೆ.
ಸಂಜಯ್ ಚವಡಾಳ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದವರು. ಎಸ್ ಸಿ (ಮಾದಿಗ) ಸಮುದಾಯಕ್ಕೆ ಸೇರಿದವರು. ಎಸ್ ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸಂಜಯ್ ಅರುಂಧತಿ ಫೌಂಡೇಷನ್ ಹೆಸರಲ್ಲಿ ಸಾಮಾಜಿಕ ಸೇವೆ ಮಾಡುತ್ತಿದ್ದು ಕರ್ತವ್ಯ ಲೋಪದಲ್ಲಿ ಅಮಾನತುಗೊಂಡಿದ್ದಾರೆ.
ಸೆಪ್ಟೆಂಬರ್ 19ರಂದು ಮಧ್ಯರಾತ್ರಿ ಠಾಣೆ ಬಂದು ಸಂಜಯ್ ದೂರು ನೀಡಿದ್ದು ಅದರಲ್ಲಿ ಚುನಾವಣೆ ಮುಂಚಿತವಾಗಿ 1 ಕೋಟಿ ರೂಪಾಯಿ ಹಣವನ್ನು ಶ್ರೀಗಳಿಗೆ ನೀಡಿದ್ದಾಗಿ ಹೇಳಿದ್ದಾರೆ. ಮೂರು ಕಂತುಗಳಲ್ಲಿ ಹಣ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಸೂಕ್ತ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಕೇವಲ ಎನ್ ಸಿಆರ್ ದಾಖಲಿಸಿ ಕಳುಹಿಸಿರುವ ಮುಂಡರಗಿ ಪೊಲೀಸರು, ದಾಖಲೆ ತೆಗೆದುಕೊಂಡು ಬರುವಂತೆ ಸೂಚಿಸಿದ್ದಾರೆ.
ಹಾಲಶ್ರೀಯಿಂದ ತನಗೂ ಕೋಟಿ ರೂ ವಂಚನೆ ಆಗಿರುವ ಬಗ್ಗೆ ಸಿಸಿಬಿ ವಿಚಾರಣೆಯಲ್ಲಿ ಹೇಳಿಕೊಂಡಿರುವ ಸಂಜಯ್ ಶಿರಹಟ್ಟಿ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಜನರ ಮುಂದೆ ಬಿಂಬಿಸಿಕೊಂಡಿದ್ದರು. ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ಹೇಳಿಕೊಂಡಿದ್ದರು.