ಬೆಂಗಳೂರು ಸೆ 22: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ಕೆಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗಳಿಗೆ ಇದೀಗ ತೆರೆ ಬಿದ್ದಿದೆ.
ಉಭಯ ಪಕ್ಷಗಳ ನಾಯಕರು ದೆಹಲಿಯಲ್ಲಿ ಮಾತುಕತೆ ನಡೆಸಿದರು. ಇದರ ಬಳಿಕ ಕರ್ನಾಟಕದ ಜಾತ್ಯತೀತ ಜನತಾದಳ ಎನ್.ಡಿ.ಎ.ಮೈತ್ರಿ ಕೂಟದ ಭಾಗವಾಗಿರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಧಿಕೃತವಾಗಿ ಘೋಷಿಸಿದರು.
ದೆಹಲಿಯಲ್ಲಿ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ,ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿ .ಕುಮಾರಸ್ವಾಮಿ, ತಮ್ಮ ನಿಲುವನ್ನು ಅಧಿಕೃತವಾಗಿ ತಿಳಿಸಿದರು. ಈ ವೇಳೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಎಚ್ಡಿಕೆ ಪುತ್ರ ನಿಖಿಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಇದಾದ ನಂತರ ಪ್ರತಿಕ್ರಿಯಿಸಿದ ಜೆ.ಪಿ.ನಡ್ಡಾ ಅವರು, ಜೆಡಿಎಸ್ (JDS) ನಾಯಕ ಕುಮಾರಸ್ವಾಮಿ ಅವರನ್ನು ನಾನು ಹಾಗೂ ಅಮಿತ್ ಷಾ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಎನ್ಡಿಎ ಮೈತ್ರಿಕೂಟದ ಭಾಗವಾಗಿರಲು ಜೆಡಿಎಸ್ ನಿರ್ಧರಿಸಿರುವುದು ನಮಗೆ ಸಂತೋಷದ ವಿಷಯವಾಗಿದೆ. ಇದು ಎನ್ಡಿಎ ಹಾಗೂ ಪ್ರಧಾನಿ ಮೋದಿ ಅವರ ದೂರದೃಷ್ಟಿಯನ್ನು ಬಲಗೊಳಿಸಲು ನೆರವಾಗಲಿದೆ ಎಂದು ತಿಳಿಸಿದರು.
ಕುಮಾರಸ್ವಾಮಿ ಮಾತನಾಡಿ, ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ, JDS ಗೆಲ್ಲುವುದೇ ನಮ್ಮ ಗುರಿ. ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದೆ ಯಾವುದೇ ರೀತಿಯಲ್ಲೂ ಗೊಂದಲ ಇಲ್ಲದೆ ಮೈತ್ರಿ ನಡೆಯುತ್ತೆ. ಮೈತ್ರಿ ಸಂಬಂಧ ಚರ್ಚಿಸಲೆಂದೇ ಇಂದು ಬಿಜೆಪಿ ನಾಯಕರ ಭೇಟಿ ಮಾಡಿದ್ದೇವೆ ಎಂದು ಹೇಳಿದರು.
ಎಷ್ಟು ಸೀಟ್ ನಮಗೆ ಕೊಡುತ್ತಾರೆಂಬುದು ಮುಖ್ಯವಲ್ಲ.ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಅದಕ್ಕಾಗಿ ನಾವಿಬ್ಬರೂ ಒಟ್ಟಾಗಿ ದುಡಿಯುತ್ತೇವೆ ಎಂದು ತಿಳಿಸಿದರು.
ಸ್ವಾಗತ:
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಇದೊಂದು ಸ್ವಾಗತಾರ್ಹ ಬೆಳವಣಿಗೆ ಎರಡೂ ಪಕ್ಷಗಳ ಮೈತ್ರಿ ರಾಜ್ಯದಲ್ಲಿ ಹೊಸ ಅಧ್ಯಾಯ ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.
ಎನ್.ಡಿ.ಎ.ಮೈತ್ರಿ ಕೂಟದ ಭಾಗವಾಗಿ ಜೆಡಿ ಎಸ್ ಸೇರ್ಪಡೆ ಯಾಗಿರುವದರಿಂದ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿ ಮಾಡುವ ಸಂಕಲ್ಪಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯಡಿಯೂರಪ್ಪ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್ ಡಿಎ ದೇಶಾದ್ಯಂತ ಬೃಹತ್, ಬಲಶಾಲಿ ಮತ್ತು ಅತ್ಯಂತ ವಿಶ್ವಾಸಾರ್ಹ ರಾಜಕೀಯ ಒಕ್ಕೂಟವಾಗಿ ಬೆಳೆಯುತ್ತಲೇ ಇದೆ. ಎನ್ ಡಿ.ಎ ಕುಟುಂಬಕ್ಕೆ ಜೆಡಿ ಎಸ್ ಸೇರ್ಪಡೆಯನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನಾವು ಒಟ್ಟಾಗಿ ಬಲಿಷ್ಠ ಎನ್‌ಡಿಎ ಮತ್ತು ನವಭಾರತವನ್ನು ನಿರ್ಮಿಸುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಎಸ್ ತೆಗೆದು ಹಾಕಲಿ:
ಮತ್ತೊಂದೆಡೆ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಬಿಜೆಪಿ ಜೆಡಿಎಸ್ ಮೈತ್ರಿ ಅವರ ಪಕ್ಷಗಳಿಗೆ ಬಿಟ್ಟಿದ್ದು, ನಮಗೇನು ಇಲ್ಲ. ಆದರೆ ಜನತಾದಳದಲ್ಲಿ ಇರುವ ಎಸ್ ತೆಗೆದುಬಿಡಿ ಎಂದರು.
ಸೆಕ್ಯುಲರ್ ಎಂಬ ಪದ ಇಟ್ಟುಕೊಂಡು ಮೈತ್ರಿಗೆ ಹೋದರೆ ಅದು ಅಪಹಾಸ್ಯವಾಗುತ್ತದೆ. ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಮೇಲೆ ಯಾವ ಪರಿಣಾಮ ಬೀರಲ್ಲ ,ಎರಡು ಪಕ್ಷಗಳು ಮೊದಲು ಒಳಗೊಳಗಡೆ ಮೈತ್ರಿ ಮಾಡುತ್ತಿದ್ದರು, ನಾವು ಅದಕ್ಕೆ ಜೆಡಿಎಸ್ ನ್ನು ಬಿಜೆಪಿಯ ಬಿ.ಟೀಂ ಎಂದಿದ್ದೆವು. ಈಗ ಬಹಿರಂಗವಾಗಿ ಮೈತ್ರಿ ಮಾಡಿಕೊಂಡಿದ್ದಾರೆ ಇದರಲ್ಲಿ ವಿಶೇಷವೇನೂ ಇಲ್ಲ ಎಂದು ತಿರುಗೇಟು ನೀಡಿದರು