ಬೆಂಗಳೂರು,ಏ.2- ರಾಜ್ಯಪಾಲರ ಸಹಿ ಇರುವ ಒಕ್ಕಣೆಪತ್ರ ಹಾಗೂ ನಡವಳಿ ತೋರಿಸುವ ಮೂಲಕ ಉನ್ನತ ಹುದ್ದೆಯ ಆಶೆ ಹುಟ್ಟಿಸಿ ಬರೋಬ್ಬರಿ 4 ಕೋಟಿ 10 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಐನಾತಿ ವಂಚಕರನ್ನು ಬಲೆಗೆ ಕೆಡವುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ಯ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ 4.10 ಕೋಟಿ ರೂ ಪಡೆದುಕೊಂಡು ಮುಖ್ಯಮಂತ್ರಿ,ಹಾಗೂ ರಾಜ್ಯಪಾಲರ ನಕಲಿ ಸಹಿಯಿರುವ ಸರ್ಕಾರದ ಟಿಪ್ಪಣಿ ನಡವಳಿ ಪತ್ರಗಳನ್ನು ನೀಡಿದ್ದಲ್ಲದೆ,ಇದರ ಆಧಾರದಲ್ಲಿ ಸರ್ಕಾರದ ಗೆಜೆಟ್ ಅನ್ನು ಸಿದ್ದಪಡಿಸಿದ್ದಾರೆ.
ಗೆಜೆಟ್ ನಲ್ಲಿ ಕೆಪಿಎಸ್ ಸಿ ಸದಸ್ಯರಾಗಿ ನೇಮಕಗೊಂಡಿರುವ ಅಧಿಸೂಚನೆಯ ನಕಲು ತಯಾರಿಸಿದ್ದಾರೆ.ಈ ಮೂಲಕ ಐನಾತಿ ವಂಚನೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿ ಜಾಲದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇನ್ನೂ ಮೂವರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಾವರೆಕರೆಯ ಭುವನಪ್ಪ ಲೇಔಟ್ ನ ರಿಯಾಜ್ ಅಹ್ಮದ್(41) ಮಲ್ಲೇಶ್ವರಂನ , 7ನೇ ಕ್ರಾಸ್ ನ ಯೂಸುಫ್ ಸುದ್ದಿಕಟ್ಟಿ(47) ಮೂಡಿಗೆರೆಯ ಚಂದ್ರಪ್ಪ.ಸಿ (44) ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿಯ ರುದ್ರೇಶ್ (35)ಬಂಧಿತ ಆರೋಪಿಗಳಾಗಿದ್ದಾರೆ.
ವಂಚನೆ ಕುರಿತು ನೀಲಮ್ಮ ಎಂ ಬೆಳಮಗಿ ಎಂಬುವರು ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ. ರಿಯಾಜ್ ಎಂಬುವರು ತನ್ನ ಸ್ನೇಹಿತರಾದ ಯೂಸಫ್, ಚೇತನ್ ಶಂಕರ್, ಚಂದ್ರಪ್ಪ, ಮಹೇಶ. ರುದ್ರೇಶ, ಹರ್ಷವರ್ಧನ ಸೇರಿ ಕೆಪಿಎಸ್ ಸಿ ಸದಸ್ಯತ್ವ ಕೊಡಿಸುವುದಾಗಿ,ಅದಕ್ಕೆ 5 ಕೋಟಿ ರೂ ಕೊಡಬೇಕಾಗುವುದಾಗಿ ನಂಬಿಸಿದರು.
ಇದಕ್ಕಾಗಿ ತಮ್ಮಿಂದ ಹಂತಹಂತವಾಗಿ ಒಟ್ಟು 4.10 ಕೋಟಿ ರೂಗಳನ್ನು ನಗದಾಗಿ ಮತ್ತು ಬ್ಯಾಂಕ್ ಖಾತೆ ಮೂಲಕ ವರ್ಗಾವಣೆ ಮಾಡಿಸಿಕೊಂಡರು.
ಆ ಬಳಿಕ ಮುಖ್ಯಮಂತ್ರಿಗಳ ಟಿಪ್ಪಣಿ, ನಡಾವಳಿ, ನಕಲಿ ಸಹಿಗಳನ್ನು ಮಾಡಿ,ರಾಜ್ಯಪಾಲರ ಹೆಸರಿನಲ್ಲಿ ಸುಳ್ಳು ರಾಜ್ಯ ಪತ್ರವನ್ನು ಸೃಷ್ಟಿಸಿ ಮೋಸ ಮಾಡಿರುವುದಾಗಿ ತಿಳಿಸಿದ್ದರು.
ಈ ದಾಖಲಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡಗಳು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಉಳಿದ ಆರೋಪಿಗಳ ಪತ್ತೆಗೆ ಶೋಧ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಪಿಗಳು ಹಣದಾಸೆಗೆ ಮುಖ್ಯಮಂತ್ರಿಗಳ ಟಿಪ್ಪಣಿ, ನಡಾವಳಿ, ನಕಲಿ ಸಹಿಗಳನ್ನು ಮಾಡಿ, ರಾಜ್ಯಪಾಲರ ಹೆಸರಿನಲ್ಲಿ ಸುಳ್ಳು ರಾಜ್ಯ ಪತ್ರವನ್ನು ಸೃಷ್ಟಿಸಿರುವುದನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.
ಆರೋಪಿಗಳು,ಇನ್ನೂ ಕೆಲವು ವಂಚನೆ ನಡೆಸಿರುವ ಮಾಹಿತಿಯಿದ್ದು,ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.