ಬೆಂಗಳೂರು, ಮೇ 30- ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ಮತದಾರರಿಗೆ ನೀಡಿದ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ.
ಆದರೆ ಈ ಯೋಜನೆಗಳ ಅನುಷ್ಠಾನದ ಸಮಯದಲ್ಲಿ ಕೆಲವೊಂದು ಷರತ್ತುಗಳನ್ನು ವಿಧಿಸಲು ತೀರ್ಮಾನಿಸಿದೆ.
ಚುನಾವಣೆಗೆ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸಬೇಕು ಇವುಗಳನ್ನು ಜಾರಿಗೊಳಿಸುವ ಸಮಯದಲ್ಲಿ ಬಜೆಟ್ ಗೆ ಹೊರೆಯಾಗಬಾರದು ಎಂಬ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ರೂಪಿಸಲು ತೀರ್ಮಾನಿಸಲಾಗಿದೆ
ಗೃಹಲಕ್ಷ್ಮಿ ,ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ನಿರುದ್ಯೋಗ ಭತ್ಯೆ, ಅನ್ನಭಾಗ್ಯ,ಮತ್ತು ಉಚಿತ ವಿದ್ಯುತ್ ನೀಡುವ ಯೋಜನೆಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಎಸ್ಆರ್ಟಿಸಿ ಮತ್ತು ಇತರೆ ಸಾರಿಗೆ ನಿಗಮಗಳ ಮುಖ್ಯಸ್ಥರು ಮುಖ್ಯಮಂತ್ರಿಗಳಿಗೆ ಸಾಧಕ ಬಾದಕಗಳ ಕುರಿತಂತೆ ಸುಧೀರ್ಘ ವಾದ ವರದಿಯನ್ನು ಸಲ್ಲಿಸಿದ್ದಾರೆ.
ಇದರ ಅನ್ವಯ ಗ್ರಾಮೀಣ ಸಾರಿಗೆಯ ಎಲ್ಲ ಬಸ್ಸುಬಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬಹುದು ಈ ಪ್ರಯಾಣ ಆ ಮಹಿಳೆಯರ ವಾಸಸ್ಥಾನದಿಂದ ಕೇವಲ ಐವತ್ತು ಕಿಲೋಮೀಟರ್ ವರೆಗೆ ಮಾತ್ರ ಅನ್ವಯಿಸಬಹುದಾಗಿದೆ ಎಂದು ಹೇಳಿದ್ದಾರೆ. ಮಹಿಳೆಯರ ವಾಸಸ್ಥಾನದ ಬಗ್ಗೆ ದೃಡೀಕರಣ ಪಡೆಯಲು ಅವರ ಬಿಪಿಎಲ್ ಕಾರ್ಡ್ ನಲ್ಲಿರುವ ವಿಳಾಸ ಅಥವಾ ಆಧಾರ್ ಸಂಖ್ಯೆಯ ಕಾರ್ಡ್ ನಲ್ಲಿರುವ ವಿಳಾಸವನ್ನು ಪರಿಗಣಿಸಿರಬಹುದು ಎಂಬ ಅಭಿಪ್ರಾಯವನ್ನು ನೀಡಿದೆ.
ಆದರೆ ಮುಖ್ಯಮಂತ್ರಿಗಳು ಈ ಬಗ್ಗೆ ಯಾವುದೇ ತೀರ್ಮಾನ ಪ್ರಕಟಿಸಿಲ್ಲ ಜೂನ್ ಒಂದರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಪಡೆದ ನಂತರ ತೀರ್ಮಾನ ಪ್ರಕಟಿಸುವುದಾಗಿ ಸಿಎಂ ಸಾರಿಗೆ ನಿಗಮಗಳ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇದೇ ವೇಳೆ ಸರ್ಕಾರ 50 ಕಿಲೋಮೀಟರ್ ಗಿಂತ ಹೆಚ್ಚಿನ ದೂರಕ್ಕೆ ಪ್ರಯಾಣ ಮಾಡಲು ಅವಕಾಶ ನೀಡುವುದಾದರೆ ಅಥವಾ ಗ್ರಾಮೀಣ ಸಾರಿಗೆ ಹೊರತುಪಡಿಸಿ ಇತರೆ ಬಸ್ಸು ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಿದರೆ ಸಂಸ್ಥೆಯ ಮೇಲೆ ಬೀಳುವ ಆರ್ಥಿಕ ಹೊರೆಯನ್ನು ರಾಜ್ಯ ಸರ್ಕಾರ ಬರಿಸಬಹುದು ಎಂಬ ಸಲಹೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಈ ಬಗ್ಗೆ ಕೂಡ ಸಂಪುಟ ಸಭೆಯಲ್ಲಿ ಚರ್ಚಿಸಲು ಸಿಎಂ ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.