ಬೆಂಗಳೂರು, ಅ.14- ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಿಢೀರ್ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ಸಿಕ್ಕ ಪ್ರಕರಣದ ಬಗ್ಗೆ ಬಿಜೆಪಿ ಸಿಬಿಐ ತನಿಖೆಗೆ ಒತ್ತಾಯಿಸಿದರೆ,ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರದ ವಿರುದ್ಧ ಸಮರ ಘೋಷಣೆಯಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರಂಭದಲ್ಲಿ ಒಂದಷ್ಟು ದಿನ ಸಹನೆಯಿಂದಿದ್ದ ಕೇಸರಿ ಬೆಂಬಲಿತ ಸಾಮಾಜಿಕ ಜಾಲತಾಣದ ಕಾರ್ಯಕರ್ತರು ಈ ಘಟನೆಯ ನಂತರ ಸಿಡಿದೆದ್ದಿದ್ದು, ರಾಜ್ಯಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರಮಣಕಾರಿಯಾಗಿ ಮುಗಿಬಿದ್ದಿದ್ದಾರೆ.
ಈ ಹಿಂದಿಗಿಂತಲೂ ಹೆಚ್ಚು ತೀವ್ರವಾಗಿ ಮತ್ತು ನಿಂದನಾತ್ಮಕ ಭಾಷೆಗಳ ಮೂಲಕವೇ ಪ್ರತಿದಾಳಿ ನಡೆಸುತ್ತಿದ್ದು,ಹಲವಾರು ಜಾಲತಾಣಗಳಲ್ಲಿ ಷೇರ್ ಮಾಡಲಾಗುತ್ತಿದೆ.ಈ ಬೆಳವಣಿಗೆ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ.
ರಾಜ್ಯಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡುವುದಾಗಿ ಘೋಷಿಸಿತ್ತು. ಇದರ ಭಾಗವಾಗಿ ಸತ್ಯ ಶೋಧನಾ ತಂಡವನ್ನೂ ಕೂಡ ರಚಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವ ಮತ್ತು ಶಾಂತಿಗೆ ಭಂಗ ಉಂಟುಮಾಡುವಂತ ಮಾಹಿತಿಗಳನ್ನು ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.ಇದರಿಂದ ಟ್ರೋಲ್ ವೀರರ ಬಾಯಿಗೆ ಬೀಗ ಹಾಕಲಾಗಿತ್ತು. ಆದರೆ ಅವರೆಲ್ಲಾ ಇದೀಗ ಈ ಪ್ರಕರಣ ಇಟ್ಟುಕೊಂಡು ಏಕಾಏಕಿ ಮುಗಿ ಬಿದ್ದಿದ್ದಾರೆ.
ಸಿಬಿಐ ತನಿಖೆ:
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಆರ್ .ಅಶೋಕ್ ಗುತ್ತಿಗೆದಾರನ ಮನೆಯಲ್ಲಿ 42 ಕೋಟಿ ಹಣ ಲಭಿಸಿದ ವಿಚಾರವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ಮಾತ್ರ ನಿಜಾಂಶ ಹೊರಬರಲಿದೆ ಎಂದು ತಿಳಿಸಿದರು.
ಕರ್ನಾಟಕವು ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್ಸಿಗರು ಒಂದೆಡೆ ಕತ್ತಲೆ ಭಾಗ್ಯ ನೀಡಿದ್ದಾರೆ. ಕತ್ತಲಲ್ಲಿ ಕಾಂಚಾಣದ ಮಾಯೆ ನಡೆಯುತ್ತಿದೆ.
ರಾಜ್ಯದ ಕಾಂಗ್ರೆಸ್ ಸರಕಾರವು ಪಂಚರಾಜ್ಯ ಚುನಾವಣೆಗೆ ಹಣ ಕೊಡುವುದಾಗಿ ಕೇಂದ್ರ ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಮಧ್ಯಪ್ರದೇಶಕ್ಕೆ 600 ಕೋಟಿ, ರಾಜಸ್ಥಾನಕ್ಕೆ 200 ಕೋಟಿ, ಛತ್ತೀಸಗಡಕ್ಕೆ 200 ಕೋಟಿ, ತೆಲಂಗಾಣಕ್ಕೆ 600 ಕೋಟಿ ಮತ್ತು ಮಿಜೋರಾಂಗೆ 100 ಕೋಟಿ ರೂ. ಕೊಟ್ಟು ಸೋನಿಯಾ ಗಾಂಧಿಯವರ ಶಹಬ್ಬಾಸ್‍ಗಿರಿ ಪಡೆಯಲು ಕಾಂಗ್ರೆಸ್ ಸರಕಾರ ಮುಂದಾಗಿದೆ ಎಂದು ಆಪಾದಿಸಿದರು ಇಲ್ಲಿಂದ ದುಡ್ಡು ಹೋಗುತ್ತಿದೆ ಎಂದು ಜನರೂ ಮಾತನಾಡುತ್ತಿದ್ದಾರೆ.
5 ರಾಜ್ಯಗಳ ಚುನಾವಣೆ ಘೋಷಣೆಗೆ ಮೊದಲು ಇದು ಯಾಕೆ ಆಗಿಲ್ಲ ಎಂದು ಪ್ರಶ್ನಿಸಿದರು. ಕಂಟ್ರಾಕ್ಟರ್‍ಗಳಿಗೆ ಬಾಕಿ ಇದ್ದ ಹಣವನ್ನು 5 ರಾಜ್ಯಗಳ ಚುನಾವಣೆ ಘೋಷಣೆಗೆ ಮೊದಲು ಯಾಕೆ ಬಿಡುಗಡೆ ಮಾಡಿಲ್ಲ ಎಂದೂ ಅವರು ಕೇಳಿದರು.
ಗುತ್ತಿಗೆದಾರರ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ, ವಿಷ ಕುಡಿಯುವ ಬೆದರಿಕೆಗೂ ಸರಕಾರ ಹೆದರಿ ಹಣ ನೀಡಿಲ್ಲ. 5 ರಾಜ್ಯಗಳ ಚುನಾವಣೆ ಬಂದ ತಕ್ಷಣ ಹಣ ಬಿಡುಗಡೆ ಮೂಲಕ ಕಾಂಚಾಣದ ಆಟ ಶುರುವಾಯ್ತು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ 5 ತಿಂಗಳಲ್ಲೇ ಸರಣಿ ಸರಣಿಯಾಗಿ ಭ್ರಷ್ಟಾಚಾರದ ಆರೋಪ ಕೇಳಿಸುತ್ತಿದೆ. ನಿನ್ನೆ ಐಟಿ ದಾಳಿಯಲ್ಲಿ ಅಂಬಿಕಾಪತಿ ಮನೆಯಲ್ಲಿ ಸುಮಾರು 42 ಕೋಟಿಗೂ ಹೆಚ್ಚು ಹಣ ಲಭಿಸಿದೆ. ಇನ್ನೂ ಚಿನ್ನಾಭರಣದ ಲೆಕ್ಕ ಗೊತ್ತಾಗಿಲ್ಲ ಎಂದು ವಿವರಿಸಿದರು.
ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರವು ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ಅರ್ಥವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಟಿಎಂ ಸರಕಾರ ರಚನೆ ಆಗಲಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಅವರು ಎಚ್ಚರಿಸಿದ್ದರು. ಬಿಜೆಪಿಯ ನಾವೆಲ್ಲರೂ ‘ಎಟಿಎಂ ಸರಕಾರ' ರಚನೆ ಆದೀತೆಂದು ಎಚ್ಚರಿಕೆ ನೀಡಿದ್ದೆವು ಎಂದು ತಿಳಿಸಿದರು.