ಬೆಂಗಳೂರು,ಫೆ.17- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ರಾಜ್ಯ ಕಾಂಗ್ರೆಸ್ ನಲ್ಲಿ ತಣ್ಣಗಾಗಿದ್ದ ನಾಯಕತ್ವ ಬದಲಾವಣೆ ವಿಚಾರ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ನಾಯಕತ್ವದ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲೋಕಸಭೆ ಚುನಾವಣೆ ಬಳಿಕವೂ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿರಲಿದೆ. ಸರ್ಕಾರವನ್ನು ಅಭದ್ರ ಗೊಳಿಸುವ ಪ್ರಯತ್ನಗಳು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ ಎಂದು ಭವಿಷ್ಯ ನುಡಿದರು.
ಮಹಾರಾಷ್ಟ್ರದಂತೆ ಇಲ್ಲಿ ಅಜಿತ್ ಪವಾರ್ ಆಗಲಿ, ಅಶೋಕ್ ಚೌವ್ಹಾಣ್ ಆಗಲಿ ಕಂಡುಬರುವುದಿಲ್ಲ, ಅಂತಹ ಸಾಧ್ಯತೆಯೂ ಇಲ್ಲ. ಕಾಂಗ್ರೆಸ್ ಸರ್ಕಾರ 5 ವರ್ಷ ಅವಧಿಯನ್ನು ಪೂರ್ಣಗೊಳಿಸುತ್ತದೆ. ಮತ್ತೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಮರಳಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ರಾಜ್ಯದ ಜನ ಕಾಂಗ್ರೆಸ್‍ಗೆ 135 ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಮುಖರಾದ ರಾಹುಲ್‍ಗಾಂಧಿ, ಸೋನಿಯಾಗಾಂಧಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ವಿರೋಧಪಕ್ಷಗಳ ನಾಯಕರಿಗೆ ಅಧಿಕಾರ ಕಳೆದುಕೊಂಡು ನಿದ್ರೆ ಬರುತ್ತಿಲ್ಲ. ಅದಕ್ಕಾಗಿ ದಿನ ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ, ಸಿಡಿ ಬಿಡುಗಡೆ ಎಂದೆಲ್ಲಾ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ, ಸರ್ಕಾರ ಪತನವಾಗಲಿದೆ ಎಂಬ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್-ಬಿಜೆಪಿಯಲ್ಲಿ ಚಲನಚಿತ್ರ ನಿರ್ಮಾಪಕರು ಹೆಚ್ಚಾಗಿದ್ದಾರೆ. ನಿರ್ದೇಶಕರು, ಕಥೆ ಬರೆಯುವವರ ಪ್ರಮಾಣವೂ ಹೆಚ್ಚಾಗಿದೆ. ಅದಕ್ಕಾಗಿ ರಾಜಕೀಯವಾಗಿ ದಿನಕ್ಕೊಂದು ಹೊಸಹೊಸ ಕಥೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸ್ರ್ಪಧಿಸುವುದಾದರೆ ಸ್ವಾಗತಿಸುತ್ತೇನೆ. ಈ ಹಿಂದೆ ಅವರು ಎರಡು ಬಾರಿ ಸಂಸದರಾಗಿದ್ದರು. ಅವರ ನಿರ್ಗಮನದ ಬಳಿಕ ನಾನು ಆಯ್ಕೆಯಾಗಿದ್ದೇನೆ. ನಮ್ಮ ಪಕ್ಷ ನನಗೆ ಮರಳಿ ಸ್ಪರ್ಧಿಸಲು ಸೂಚನೆ ನೀಡಿದರೆ ನಾನು ಚುನಾವಣೆಯನ್ನು ಎದುರಿಸಲು ಬೇಕಾದ ತಂತ್ರಗಾರಿಕೆಯನ್ನು ಸಿದ್ಧಮಾಡಿಕೊಳ್ಳುತ್ತೇನೆ. ಕುಮಾರಸ್ವಾಮಿಯವರ ಸ್ಪರ್ಧೆಯನ್ನು ನಾನು ಸವಾಲು ಎಂದು ಸ್ವೀಕರಿಸುತ್ತಿಲ್ಲ. ರಾಜಕೀಯ ಹೋರಾಟ ಎಂದು ಪರಿಗಣಿಸುವುದಾಗಿ ಹೇಳಿದರು.