ಬೆಂಗಳೂರು,ಫೆ.17- ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಝೆಡ್ ಶ್ರೇಣಿಯ ಭದ್ರತೆ ಒದಗಿಸಲಾಗಿದೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಝೆಡ್ ಶ್ರೇಣಿಯ ಭದ್ರತೆಯನ್ನು ಒದಗಿಸಿದ ಕೇಂದ್ರ ಸರ್ಕಾರ ಇದೀಗ ರಾಜ್ಯದ ಮತ್ತೊಬ್ಬ ಹಿರಿಯ ನಾಯಕ ಖರ್ಗೆ ಅವರಿಗೆ ಇಂತಹ ಉನ್ನತ ದರ್ಜೆಯ ಭದ್ರತೆ ನೀಡಿದೆ.
ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ದೇಶಾದ್ಯಂತ ಪ್ರವಾಸ ಮಾಡುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ.
ರಾಜಕೀಯವಾಗಿ ಸಂಘ ಪರಿವಾರ ಮತ್ತು ಇತರ ಹಲವಾರು ಸಂಘಟನೆಗಳ ಧೋರಣೆಗಳನ್ನು ವಿರೋಧಿಸುತ್ತಿರುವ ಖರ್ಗೆ ಅವರಿಗೆ ಇತ್ತೀಚೆಗೆ ಕೆಲ ಕಿಡಿಗೇಡಿಗಳು ಬೆದರಿಕೆ ಹಾಕಿರುವ ಸಂಗತಿ ಬಳಕೆಗೆ ಬಂದಿದೆ. ಈ ಸಂಬಂಧ ಕೇಂದ್ರ ಗುಪ್ತದಳ ನೀಡಿರುವ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಇವರ ಭದ್ರತೆಯ ಪ್ರಮಾಣವನ್ನು ಹೆಚ್ಚಿಸಿದೆ.
ರಾಷ್ಟ್ರಪತಿ, ಪ್ರಧಾನಿ ಅವರ ನಂತರದಲ್ಲಿ ಅತಿ ಹೆಚ್ಚಿನ ಭದ್ರತಾ ಸೌಲಭ್ಯವನ್ನು ಪಡೆಯುತ್ತಿರುವವರಲ್ಲಿ ಖರ್ಗೆ ಕೂಡ ಒಬ್ಬರಾಗಿದ್ದಾರೆ ಈ ಭದ್ರತೆಯ ವ್ಯವಸ್ಥೆ ಬರುತ್ತಿದ್ದ ಹಾಗೆ ಬೆಂಗಳೂರಿನಲ್ಲಿರುವ ಖರ್ಗೆ ಅವರ ನಿವಾಸಕ್ಕೆ ಬ್ಲಾಕ್ ಕಮಾಂಡೋಗಳ ಪಹರೆ ಮತ್ತು ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ ಈ ಹಿಂದಿನಂತೆ ಈಗ ಯಾರೂ ಕೂಡ ಖರ್ಗೆ ಅವರನ್ನು ಅತ್ಯಂತ ಸುಲಭವಾಗಿ ಭೇಟಿ ಮಾಡಲು ಸಾಧ್ಯವಿಲ್ಲ.
ಯಾವುದೇ ವ್ಯಕ್ತಿ ಇನ್ಮುಂದೆ ಖರ್ಗೆ ಅವರನ್ನು ಭೇಟಿ ಮಾಡುವ ಮುನ್ನ ಅವರ ಸಂಪೂರ್ಣ ವಿವರವನ್ನು ಭದ್ರತಾ ಅಧಿಕಾರಿಗಳಿಗೆ ನೀಡಿ ಗೊತ್ತು ಪಡಿಸಿದ ಸಮಯದಲ್ಲಿ ಮಾತ್ರ ಅವರನ್ನು ಭೇಟಿ ಮಾಡಬಹುದಾಗಿದೆ.