ಬೆಂಗಳೂರು, ಡಿ.2- ರಾಜ್ಯದಲ್ಲಿ ಸಂಚಲನ ಮೂಡಿಸಿ ಆತಂಕಕ್ಕೆ ಕಾರಣವಾಗಿರುವ ಬೆಂಗಳೂರಿನ ಹಲವು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಹಾಕಿರುವ ಸಂಬಂಧ ನಗರದಲ್ಲಿ 48 ಎಫ್ಐಆರ್ಗಳು ದಾಖಲಾದರೆ,ಉಳಿದ 22 ಗ್ರಾಮಾಂತರದಲ್ಲಿ ದಾಖಲಾಗಿದ್ದು ತನಿಖೆಯನ್ನು ತೀವ್ರಗೊಳಿಸಲಾಗಿದೆ.
ನಗರದ ಖಾಸಗಿ ಶಾಲೆಗಳಿಗೆ ಬೆದರಿಕೆ ಹಾಕಿರುವ 48 ಎಫ್ಐಆರ್ಗಳನ್ನು ಕ್ರೂಡೀಕರಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ನಡೆಸಲು,ವಿಶೇಷ ತನಿಖಾ ತಂಡಗಳನ್ನು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ರಚಿಸಿದ್ದಾರೆ.
ದುಷ್ಕರ್ಮಿಗಳು ಬೆದರಿಕೆಗೆ ಬಳಸಲಾದ ಇ-ಮೇಲ್ ಐಡಿ ನಕಲು ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕೃತ್ಯ ಎಸಗುವ ಉದ್ದೇಶದಿಂದಲೇ ಆರೋಪಿಗಳು ನಕಲಿ ಐಡಿ ರಚಿಸಿದ್ದಾರೆ.
ನುರಿತ ಸೈಬರ್ ಪೊಲೀಸ್ ಅಧಿಕಾರಿಗಳು ಹಾಗೂ ಸೈಬರ್ ತಜ್ಞರು, ಈ ಹಿಂದೆ ಬಂದಿದ್ದ ಹುಸಿ ಬಾಂಬ್ ಇ-ಮೇಲ್ಗಳನ್ನೂ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.
ದುಷ್ಕರ್ಮಿಯು ಖಾಸಗಿ ಕಂಪನಿಯ ವಿಪಿಎನ್ ಬಳಸಿ ಇ-ಮೇಲ್ ಮಾಡಿದ್ದು, ಪೊಲೀಸರು ಕಂಪನಿಯ ಯಾವ ಸರ್ವರ್ ಬಳಸಲಾಗಿದೆ ಬಳಸಿದ ಐಡಿ, ಐಪಿ ಯಾವುದು ಎನ್ನುವುದರ ಮಾಹಿತಿ ನೀಡುವಂತೆ ವಿದೇಶದ ಸೈಟ್ರಸ್ ಎಂಬ ಕಂಪನಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಹೆಚ್ಚುವರಿ ಆಯುಕ್ತ (ಪಶ್ಚಿಮ) ಎನ್. ಸತೀಶ್ ಕುಮಾರ್ ನೇತೃತ್ವದಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಪದೇ ಪದೇ ನಡೆಯುತ್ತಿರುವ ಈ ಕೃತ್ಯದ ಹಿಂದಿರುವ ದುಷ್ಕರ್ಮಿಗಳ್ಯಾರು ? ಕೃತ್ಯದ ಹಿಂದಿನ ಅಸಲಿ ಕಾರಣವೇನು ? ಶಾಲೆಗಳನ್ನೇ ಗುರಿಯಾಗಿಸಿಕೊಂಡು ಇ-ಮೇಲ್ ಕಳುಹಿಸುತ್ತಿರುವ ಹಿಂದಿನ ಉದ್ದೇಶವೇನು ? ಈ ಕೃತ್ಯಕ್ಕೆ ಇ-ಮೇಲ್ ಬಳಸುತ್ತಿರುವ ಆ ದುಷ್ಕರ್ಮಿ ಯಾರು ಎಂದು ಹಲವು ಆಯಾಮಗಳಲ್ಲಿ ತನಿಖೆ ಕೈಕೊಂಡಿದ್ದಾರೆ.
ದುಷ್ಕರ್ಮಿಯು ವರ್ಚ್ಯುಯಲ್ ಪ್ರವೇಟ್ ನೆಟ್ ವರ್ಕ್ (ವಿಪಿಎನ್) ಬಳಸಿ ಇ-ಮೇಲ್ ಸಂದೇಶಗಳ ಕಳುಹಿಸಿದ್ದಾರೆ. ಹೀಗಾಗಿ ಪೊಲೀಸರು ದುಷ್ಕರ್ಮಿಗಳು ಬಳಸಿದ ಕಂಪ್ಯೂಟರ್, ಸೈಬರ್ ಕೆಫೆ ಅಥವಾ ಲ್ಯಾಪ್ ಟಾಪ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಿಡಿಗೇಡಿ ದೂರದ ದೇಶದ ನೆಟ್ ವರ್ಕ್ ಬಳಸಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಬೇಧಿಸಲು ಸಿದ್ಧವಾದ ಪೊಲೀಸರಿಗೆ ವಿದೇಶಿ ಒಪ್ಪಂದದ ಆತಂಕ ಶುರುವಾಗಿದೆ. ಇಲ್ಲಿಯವರೆಗೆ ಮಾಹಿತಿ ಹಂಚಿಕೊಳ್ಳವ ಒಪ್ಪಂದ ಕೆಲವೇ ದೇಶಗಳ ಜೊತೆ ಇದೆ. ಸದ್ಯ 39 ದೇಶಗಳ ಜೊತೆ ಒಪ್ಪಂದವಿದ್ದು, ಮೂರು ದೇಶಗಳ ಜೊತೆ ಸಹಿ ಪ್ರಕ್ರಿಯೆ ಬಾಕಿ ಇದೆ. ಆದರೇ ಪಟ್ಟಿಯಲ್ಲಿರುವ 42 ದೇಶದಲ್ಲಿ ಯಾವದಾದರೂ ದೇಶದಿಂದ ಮಾಹಿತಿ ಸಂಗ್ರಹಿಸಿ ಕೃತ್ಯ ಎಸಗಲಾಗಿದೆಯಾ ಎಂದು ಪರಿಶೀಲನೆ ನಡೆಯುತ್ತಿದೆ.
ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಕರೆಗಳು ಆಗಾಗ ಬರುತ್ತಿರುತ್ತವೆ. ಆದರೆ, ನಿನ್ನೆ ನಗರದ 48 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನೆ ಮಾಡಲಾಗಿತ್ತು. ಈ ಬೆದರಿಕೆಯಲ್ಲಿ ಉಗ್ರವಾದ ಪದಗಳ ಉಲ್ಲೇಖವಾಗಿದ್ದರಿಂದ ಆತಂಕಕ್ಕೆ ಕಾರಣವಾಗಿದೆ.
2022ರಲ್ಲಿ ಬಾಂಬ್ ಬೆದರಿಕೆ ಮೇಲ್‌ಗಳು ತಲೆ ಕೆಡಿಸಿದ್ದವು. 2022ರ ಏಪ್ರಿಲ್‌ನಲ್ಲಿ ಏಳು ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಹೆಣ್ಣೂರು, ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಏಳು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ಶಾಲಾ ಪಾರ್ಕಿಂಗ್ ಆವರಣ, ಗಾರ್ಡನ್, ಮೇಲ್ಛಾವಣಿಗಳಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಹಾಕಿದ್ದರು. ತನಿಖೆ ವೇಳೆ ಸುಳ್ಳು ಎಂದು ಬೆಳಕಿಗೆ ಬಂದಿತ್ತು.
2020ರ ಜುಲೈನಲ್ಲಿ ಡಿಕೆ ಶಿವಕುಮಾರ್ ಒಡೆತನದ ಶಾಲೆಗೂ ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಆರ್‌ಆರ್ ನಗರ ಠಾಣೆ ವ್ಯಾಪ್ತಿಯಲ್ಲಿರುವ ಶಾಲೆಗೆ ಮೇಲ್ ಬಂದಿತ್ತು. ಅದೇ ಶಾಲೆಯ ವಿದ್ಯಾರ್ಥಿಯೋರ್ವನಿಂದ ಮೇಲ್ ಕಳಿಸಲಾಗಿತ್ತು. ಪೊಲೀಸರು ತನಿಖೆ ನಡೆಸಿ ಪ್ರಕರಣ ಬಗೆಹರಿಸಿದ್ದರು
ಡಿಸೆಂಬರ್ ಒಂದರಂದು ಮೊದಲು ಬೆಂಗಳೂರಿನ 15 ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿದೆ. ಬಳಿಕ ಇನ್ನುಳಿದ ಆಡಳಿತ ಮಂಡಳಿಗಳು ತಮ್ಮ ತಮ್ಮ ಶಾಲೆಯ ಇಮೇಲ್ ಪರಿಶೀಲನೆ ಮಾಡಿದ ಬಳಿಕ 48 ಶಾಲೆಗಳಿಗೆ ಅಂತಹದ್ದೇ ಬೆದರಿಕೆ ಸಂದೇಶಗಳು ಬಂದಿರುವುದು ತಿಳಿದುಬಂದಿದೆ.
ಈ ಪ್ರಕರಣಗಳನ್ನು ಪತ್ತೆ ಹಚ್ಚಿ ದುಷ್ಕರ್ಮಿಗಳ ಹೆಡೆಮುರಿ ಕಟ್ಟುವುದು ಪೊಲೀಸರಿಗೆ ಸವಾಲಿನ ಸಂಗತಿಯಾಗಿದೆ.