ಬೆಂಗಳೂರು – ಕಲೆ, ಸಾಹಿತ್ಯ, ಶಿಕ್ಷಣ, ಸಮಾಜ ಸೇವೆ ಸೇರಿದಂತೆ ಸಮಾಜದ ವಿವಿಧ ವಲಯದಲ್ಲಿ ಸೇವೆ ಸಲ್ಲಿಸಿದ ಪ್ರಮುಖರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡುವ ವಿಚಾರ ಇದೀಗ ಕಾಂಗ್ರೆಸ್ ನಲ್ಲಿ ಹೊಸ ಬಿಕ್ಕಟ್ಟು ಸೃಷ್ಟಿಯಾಗುವಂತೆ ಮಾಡಿದೆ.
ಇಲ್ಲಿಯವರೆಗೆ ಪರಿಷತ್ ಸದಸ್ಯರಾಗಿದ್ದ ಪಿ.ಆರ್. ರಮೇಶ್, ಸಿ.ಎಂ. ಲಿಂಗಪ್ಪ ಮತ್ತು ಮೋಹನ್ ಕೊಂಡಜ್ಜಿ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ನೇಮಕ ಮಾಡುವ ಅಧಿಕಾರವನ್ನು ಸಂಪುಟ ಮುಖ್ಯಮಂತ್ರಿಗಳಿಗೆ ನೀಡಿತ್ತು.
ಅವರು, ಪಕ್ಷದ ನಾಯಕರು ಮತ್ತು ಹೈಕಮಾಂಡ್ ಜೊತೆ ಚರ್ಚಿಸಿ ಮಾಜಿ ಮಂತ್ರಿ ಎಂ.ಆರ್. ಸೀತಾರಾಮ್, ಮನ್ಸೂರ್ ಅಲಿ ಖಾನ್ ಮತ್ತು ನಿವೃತ್ತ ಅಧಿಕಾರಿ ಎಚ್.ಪಿ. ಸುಧಾಮ್ ದಾಸ್ ಅವರನ್ನು ನಾಮನಿರ್ದೇಶನ ಮಾಡಲು ಮುಂದಾಗಿದ್ದರು.
ಹಿಂದುಳಿದ ವರ್ಗಗಳ ಕೋಟಾದಿಂದ ಎಂ.ಆರ್. ಸೀತಾರಾಮ್, ಅಲ್ಪಸಂಖ್ಯಾತ ಕೋಟಾದಿಂದ ರಾಜ್ಯಸಭೆಯ ಮಾಜಿ ಸಭಾಪತಿ ರೆಹಮಾನ್ ಖಾನ್ ಮಗ ಮನ್ಸೂರ್ ಅಲಿ ಖಾನ್, ಪರಿಶಿಷ್ಟ ಜಾತಿ ಎಡಗೈ ಬಣದಿಂದ ಸುಧಾಮ್ ದಾಸ್ ಹೆಸರನ್ನು ಪರಿಗಣಿಸುವ ಮೂಲಕ ಎಲ್ಲಾ ಜಾತಿ ಮತ್ತು ವರ್ಗಕ್ಕೆ ಪ್ರಾತಿನಿಧ್ಯ ಎಂದು ಅಭಿಪ್ರಾಯ ಮಂಡಿಸಲಾಗಿತ್ತು.
ಆದರೆ, ಸುಧಾಮ್ ದಾಸ್ ಅವರ ನೇಮಕ ಪ್ರಸ್ತಾವಕ್ಕೆ ಕಾಂಗ್ರೆಸ್‌ನ ಪರಿಶಿಷ್ಟ ಜಾತಿಯ ಅದರಲ್ಲೂಬಎಡಗೈ ಬಣದ ಪ್ರಮುಖ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಸುಧಾಮ್ ದಾಸ್ ಅವರು ಐಆರ್ ಎಸ್ ಹುದ್ದೆಯಿಂದ ನಿವೃತ್ತರಾದ ತಕ್ಷಣವೇ ಅವರಿಗೆ ಮಾಹಿತಿ ಹಕ್ಕು ಆಯುಕ್ತರಾಗಿ ನೇಮಿಸಲಾಯಿತು. ಈ ಹುದ್ದೆಯಿಂದ ನಿವೃತ್ತರಾದ ಕೂಡಲೆ ಕಾಂಗ್ರೆಸ್ ಪ್ರಚಾರ ಸಮಿತಿ ಸಹ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಈಗ ಪರಿಷತ್ ಗೆ ನಾಮನಿರ್ದೇಶನ ಮಾಡಲು ಮುಂದಾಗಿರುವ ಕ್ರಮ ಸರಿಯಲ್ಲ ಇವರು ತಮ್ಮ ಅಧಿಕಾರಾವಧಿಯಲ್ಲಿ ಪಕ್ಷ ಮತ್ತು ಸಮುದಾಯದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಹೀಗಾಗಿ ಇವರ ಬದಲಿಗೆ ಸಮುದಾಯದ ಯಾವುದೇ ಕಾಂಗ್ರೆಸ್ ನಾಯಕರಿಗೆ ಈ ಹುದ್ದೆ ನೀಡುವಂತೆ ಆಗ್ರಹಿಸಿದ್ದರು.
ಇದರ ಬೆನ್ನಲ್ಲೆ, ಮನ್ಸೂರ್ ಅಲಿ ಖಾನ್ ನೇಮಕಕ್ಕೂ ವಿರೋಧ ವ್ಯಕ್ತವಾಯಿತು. ಮುಸ್ಲಿಂ ಸಮುದಾಯದ ನಾಯಕರು ಈ ಆಯ್ಕೆಯನ್ನು ಬಲವಾಗಿ ವಿರೋಧಿಸಿದರು. ಮನ್ಸೂರ್ ಅವರ ತಂದೆ ರೆಹಮಾನ್ ಖಾನ್ ಅವರಿಗೆ ಪಕ್ಷ ಸಾಕಷ್ಟು ಅವಕಾಶ ನೀಡಿದೆ.ಸುದೀರ್ಘವಾದ ಅವಧಿಗೆ ವಿಧಾನ ಪರಿಷತ್, ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಕೇಂದ್ರ ಮಂತ್ರಿ, ರಾಜ್ಯಸಭೆಯ ಉಪ ಸಭಾಪತಿ ಹುದ್ದೆ ಕೂಡ ನೀಡಲಾಗಿದೆ. ಒಂದೇ ಕುಟುಂಬಕ್ಕೆ ಎಷ್ಟು ಬಾರಿ ಪ್ರಾತಿನಿಧ್ಯ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಈ ಎಲ್ಲಾ ವಿವಾದದ ನಡುವೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಅವರು ಮನ್ಸೂರ್ ಅವರ ಬದಲಿಗೆ ಬೇರೆ ಯಾರನ್ನಾದರೂ ನೇಮಕ ಮಾಡುವಂತೆ ಸಲಹೆ ಮಾಡಿದರು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನ್ಸೂರ್ ಬದಲಿಗೆ ಮಾಜಿ ಮಂತ್ರಿ ಹಾಗೂ ನಟಿ ಉಮಾಶ್ರೀ ಅವರನ್ನು ನೇಮಕ ಮಾಡಲು ನಿರ್ಧರಿಸಿದರು.
ಈ ಮಧ್ಯೆ, ಮನ್ಸೂರ್ ಅಲಿ ಖಾನ್ ಬದಲು ನಟಿ ಉಮಾಶ್ರೀ ಅವರನ್ನು ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ಹೊಂದಿರುವುದಕ್ಕೆ ಕಾಂಗ್ರೆಸ್ಸಿನ ಮುಸ್ಲಿಂ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಇಡೀ ಸಮುದಾಯ ಕಾಂಗ್ರೆಸ್ ಬೆನ್ನಿಗೆ ನಿಂತಿದೆ. ಹೀಗಾಗಿ, ಪರಿಷತ್‌ಗೆ ಮೂವರ ನಾಮ ನಿರ್ದೇಶನದ ಸಂದರ್ಭದಲ್ಲಿ ಒಂದು ಸ್ಥಾನವನ್ನು ಮುಸ್ಲಿಂ ಸಮುದಾಯವರಿಗೆ ನೀಡಬೇಕು ಎಂದು ಆ ಸಮುದಾಯ ನಾಯಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಪರಿಷತ್ ನಾಮಕರಣ ವಿಷಯ ಕಾಂಗ್ರೆಸ್ ನಲ್ಲಿ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುವ ಮೂಲಕ ಬಿಕ್ಕಟ್ಟಾಗಿ ಪರಿಣಮಿಸಿದೆ