ಬೆಂಗಳೂರು,ಆ.10- ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಧಿಕ ಲೈಕ್ ಬಟನ್ ಗಿಟ್ಟಿಸಿಕೊಳ್ಳುವ ಮೂಲಕ ಪ್ರಸಿದ್ಧಿ ಪಡೆಯಲು ನಾನಾ ಕಸರತ್ತು ಮಾಡಲಾಗುತ್ತಿದೆ.ಇದು ಇತ್ತೀಚಿನ ಟ್ರೆಂಡ್ ಆಗಿದೆ.ಇಂತಹ ಗೀಳಿಗೆ ಬಿದ್ದ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಗೊಂಬೆ ಸೇರಿ ಚಿತ್ರ ವಿಚಿತ್ರ ವೇಷ ಧರಿಸಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡಿ ರೀಲ್ಸ್ ಮಾಡುತ್ತಿದ್ದ ಬೈಕ್ ಸವಾರನನ್ನು ಯಲಹಂಕ ಸಂಚಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವಕ ರೀಲ್ಸ್ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚೆಚ್ಚು ಲೈಕ್ ಕಾಮೆಂಟ್ ಗಳಿಸಲು ಚಿತ್ರ ವಿಚಿತ್ರ ವೇಷ ಭೂಷಣಗಳನ್ನು ಧರಿಸಿ ಅಪಾಯಕಾರಿಯಾದ ಒಂದಲ್ಲೊಂದು ಬೈಕ್ ಸ್ಟಂಟ್ ಮಾಡುತ್ತಾ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ. ಇತ್ತೀಚೆಗೆ ಕೆಐಎಲ್ ಏರ್‌ಪೋರ್ಟ್ ರಸ್ತೆಯಲ್ಲಿ ಸಿಗ್ನಲ್ ಜಂಪ್ ಮಾಡಿ ಬೈಕ್ ಗೆ ಕಾರು ಡಿಕ್ಕಿ ಹೊಡೆದಿತ್ತು.ಈ ವೇಳೆ ಒನ್‌ವೇಯಲ್ಲಿ ಕಾರನ್ನು ಹಿಂಬಾಲಿಸಿ ಕನ್ನಡಿ ಒಡೆದುಹಾಕಿ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ವೀಲಿಂಗ್ ಮಾಡದಂತೆ ನಗರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಆರೋಪಿ ಯಾವುದೇ ಭಯ ಇಲ್ಲದೆ ದಿನನಿತ್ಯ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡಿ ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ. ವಿಡಿಯೋ ಗಮನಿಸಿ ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಪ್ರಕರಣ ದಾಖಲಿಸಿ ವಿಡಿಯೋ ಪರಿಶೀಲನೆ ನಡೆಸಿ ಬೈಕ್ ಸಾವರನನ್ನು ಪತ್ತೆ ಹಚ್ಚಿ ಬಂಧಿಸಿ ಬೈಕ್ ಜಪ್ತಿ ಮಾಡುವಲ್ಲಿ ಯಲಹಂಕ ಸಂಚಾರ ಪೊಲೀಸರು ಯಶಸ್ವಿಯಾಗಿದ್ದಾರೆ.