ಬೆಂಗಳೂರು,ಆ.9- ರಾಜ್ಯದ ವಿವಿಧ ನಿಗಮ-ಮಂಡಳಿಗಳ ನೇಮಕಾತಿ ಸಮಯದಲ್ಲಿ ಯಾರು ಎಷ್ಟೇ ದೊಡ್ಡ ನಾಯಕರಾಗಿದ್ದರೂ, ಅವರು ಬೂತ್ ಮಟ್ಟದಲ್ಲಿ ಪಕ್ಷವನ್ನು ಗೆಲ್ಲಿಸಿರಬೇಕು. ಅಂತಹ ವಿಜಯ ಸಾಧಕರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಗಮ ಮಂಡಳಿ ಸೇರಿದಂತೆ ಹಲವು ನೇಮಕಾತಿಗಳಿಗೆ ಮುಖಂಡರು, ಕಾರ್ಯಕರ್ತರನ್ನು ಪರಿಗಣಿಸುವಾಗ ಅವರ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಡೆದಿರುವ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಹೈಕಮಾಂಡ್ ಸೂಚಿಸಿದೆ ಎಂದು ತಿಳಿಸಿದರು.
ಈ ಕುರಿತು ವರದಿ ನೀಡುವಂತೆ ತಾವು ಜಿಲ್ಲಾ ಕಾಂಗ್ರೆಸ್‍ಗಳಿಗೆ ಸೂಚನೆ ನೀಡಿದ್ದೇವೆ.ಕಾರ್ಯಕರ್ತರ ಮನವಿಯ ಪಕ್ಕದಲ್ಲೇ ಬೂತ್ ಮಟ್ಟದ ಸಾಧನೆಗಳನ್ನು ಉಲ್ಲೇಖಿಸಲಾಗುವುದು ಶಾಸಕರಿಗೂ ಸೂಚನೆ ನೀಡಲಾಗಿದ್ದು, ಹಿಂಬಾಲಕರನ್ನು ಪರಿಗಣಸದೆ ಪಕ್ಷಕ್ಕೆ ಕೆಲಸ ಮಾಡಿದವರಿಗೆ ಅವಕಾಶ ನೀಡುವಂತೆ ತಾಕೀತು ಮಾಡಲಾಗಿದೆ ಎಂದು ಹೇಳಿದರು.
ಕೆಲವರು ನಾನು ಮಾಟ, ಮಂತ್ರ, ಮಾಯ ಮಾಡಿ ಸರ್ಕಾರವನ್ನು ತಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಇದರ ಹಿಂದೆ ನಮ್ಮ ಹೋರಾಟ ಇದೆ.ನಾವು ತ್ಯಾಗ ಮಾಡಿದ್ದೇವೆ. ಜೀವ ಪಣಕ್ಕಿಟ್ಟು ಕೋವಿಡ್ ಸಮಯದಲ್ಲಿ ಕೆಲಸ ಮಾಡಿದ್ದೇವೆ. ಅದರ ಫಲ ಸರ್ಕಾರ ರಚನೆಯಾಗಿದೆ ಎಂದರು ಕಳೆದ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಿ ಸ್ಪಷ್ಟ ಬಹುಮತದಿಂದ ಪಕ್ಷವನ್ನು ಗೆಲ್ಲಿಸುವ ಮೂಲಕ ಕರ್ನಾಟಕ ದೇಶಕ್ಕೆ ಮಾದರಿಯಾಗಿದೆ. 224 ಸ್ಥಾನಗಳಲ್ಲಿ 115 ಕ್ಷೇತ್ರಗಳಿಗೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಎಚ್.ಎಂ.ರೇವಣ್ಣ, ಉಗ್ರಪ್ಪ, ಪದ್ಮಾವತಿಯಂತಹ ಹಿರಿಯ ನಾಯಕರು ಕೇಳಿದ ಕ್ಷೇತ್ರಗಳಿಗೆ ಟಿಕೆಟ್ ನೀಡಬೇಕಾಗಿತ್ತು. ಆದರೆ ಅದು ಆಗಲಿಲ್ಲ. ಶೇ.20 ರಷ್ಟು ಸ್ಥಾನಗಳಲ್ಲಿ ಹೆಚ್ಚು ಕಮ್ಮಿಯಾಗಿದೆ. 25 ರಷ್ಟು ನಾಯಕರಿಗೆ ಅನ್ಯಾಯವಾಗಿದೆ. ಅವರೆಲ್ಲಾ ತಮ್ಮ ವೈಯಕ್ತಿಕ ಹಿತಾಸಕ್ತಿ ಮರೆತು ತ್ಯಾಗ ಮಾಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲಿ ಎಂದು ದುಡಿದಿದ್ದಾರೆ ಎಂದು ಪ್ರಶಂಸಿದರು.
ಬಿಜೆಪಿ ಮುಕ್ತ:
ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡುತ್ತಿದ್ದರು. ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಪಕ್ಷದಲ್ಲಿ ಹುಮ್ಮಸ್ಸು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಭಾರತ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಈ ಹಿಂದೆ ಬ್ರಿಟಿಷರನ್ನು ತೊಲಗಿಸಲು ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಕಾಂಗ್ರೆಸಿಗರು ಭಾರತ ಬಿಟ್ಟು ತೊಲಗಿ ಎಂಬ ಚಳುವಳಿ ನಡೆಸಿದರು. 81 ವರ್ಷಗಳ ಬಳಿಕ ಈಗಿನ ಕಾಂಗ್ರೆಸಿಗರು ಕೋಮುವಾದಿ, ಸರ್ವಾಧಿಕಾರಿಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.
ದೇಶದ ಎಲ್ಲಾ ವಿಪಕ್ಷಗಳ ನಾಯಕರು ಬೆಂಗಳೂರಿಗೆ ಬಂದು ಇಂಡಿಯಾ ರಾಜಕೀಯ ಕೂಟದ ಮೂಲಕ ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆದಿದ್ದು, ಬೆಂಗಳೂರು ಅದಕ್ಕೆ ಸಾಕ್ಷಿಯಾಗಿದೆ. ನಮ್ಮ ಮುಂದಿನ ಗುರಿ 2024 ರ ಲೋಕಸಭೆ ಚುನಾವಣೆಯಷ್ಟೇ ಅಲ್ಲ, 2028 ರ ವಿಧಾನಸಭೆ ಚುನಾವಣೆ ಕೂಡಾ ಆಗಿದೆ. ಅದಕ್ಕೆ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಕಳೆದ ಚುನಾವಣೆಯಲ್ಲಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.