ಬೆಂಗಳೂರು ಡಿ 26: ವಿಧಾನಸಭೆ ಚುನಾವಣೆಗೆ ರಾಜ್ಯದ ಜನತೆಗೆ ನೀಡಿದ ಭರವಸೆಯ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡುತ್ತಿದ್ದೇವೆ. ಇದರಿಂದ ಸರ್ಕಾರ ದಿವಾಳಿಯಾಗಿಲ್ಲ. ಜನರಿಗೆ ಆರ್ಥಿಕ ಶಕ್ತಿ ಬಂದಿದೆ’
ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ದಿವಾಳಿಯಾಗಲಿದೆ ಎಂದು ಟೀಕಿಸಿದ್ದ ಪ್ರಧಾನಿಗಳು ಆರ್ಥಿಕ ತಜ್ಞರಾ ಎಂದು ಪ್ರಶ್ನಿಸಿದ್ದಾರೆ.
ಯುವನಿಧಿ’ ಫಲಾನುಭವಿಗಳ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಅವರು,ಕೊಟ್ಟ ಮಾತಿನಂತೆ ಯುವನಿಧಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ. 5.29 ಲಕ್ಷ ಯುವಕ, ಯುವತಿಯರಿಗೆ ಪ್ರಸಕ್ತ ವರ್ಷ ನಿರುದ್ಯೋಗ ಭತ್ಯೆ ನೀಡಲಾಗುವುದು. ಜನವರಿ 12ರಂದು ಶಿವಮೊಗ್ಗದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು’ ಎಂದರು.
‘ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದರೆ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಆಧಾರದಲ್ಲಿ ಹೇಳಿದರು. ಅವರೇನು ಆರ್ಥಿಕ ತಜ್ಞರಾ?’ ಎಂದು ಪ್ರಶ್ನಿಸಿದರು.
ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದರೆ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ ಹೇಳಿದ್ದರು. ಅವರ ಮಾತು ಸುಳ್ಳಾಗಿದೆ.ಎಲ್ಲಾ ಗ್ಯಾರಂಟಿಗಳಿಗೂ ಬಜೆಟ್‌ನಲ್ಲಿ ಅನುದಾನ ಒದಗಿಸಿ ಅನುಷ್ಠಾನಕ್ಕೆ ತಂದಿದ್ದೇವೆ. ಮೋದಿ ಒಬ್ಬ ಸುಳ್ಳುಗಾರ ಪ್ರಧಾನಿ ಎಂಬುದು ಸಾಬೀತಾಗಿದೆ. ಹನ್ನೆರಡು ವರ್ಷ ಮುಖ್ಯಮಂತ್ರಿಯಾಗಿ, ಹತ್ತು ವರ್ಷ ಪ್ರಧಾನಿಯಾಗಿರುವ ವ್ಯಕ್ತಿ ಹೀಗೆಲ್ಲ ಮಾತನಾಡಬಹುದೆ ಎಂದು ಕೇಳಿದರು.
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಂತೆ ಐದು ಗ್ಯಾರಂಟಿಗಳನ್ನೂ ಜಾರಿ ಮಾಡುತ್ತಿದ್ದೇವೆ. ಇದರಿಂದ ಸರ್ಕಾರ ದಿವಾಳಿಯಾಗಿಲ್ಲ. ಜನರಿಗೆ ಆರ್ಥಿಕ ಶಕ್ತಿ ಬಂದಿದೆ’ ಎಂದರು.
ಬಸ್ ಖರೀದಿ:
ಇದಕ್ಕೂ ಮುನ್ನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ವಿದ್ಯುತ್ ಚಾಲಿತ ಬಸ್ ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಮ್ಮ ಗ್ಯಾರಂಟಿಗಳಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ ಎಂದು ಹೇಳಿದರು.
ಕೊಳ್ಳುವ ಶಕ್ತಿ ಹೆಚ್ಚಿದ ಪರಿಣಾಮ ರಾಜ್ಯದ ಆರ್ಥಿಕ ಚಟುವಟಿಕೆ ಹೆಚ್ಚಾಗಿ ರಾಜ್ಯದ ಆರ್ಥಿಕ ಬೆಳವಣಿಗೆ ಆಗುತ್ತಿದೆ. ಕಾರ್ಮಿಕ ಮತ್ತು ರೈತ ಮಹಿಳೆಯರು, ದುಡಿಯುವ ವರ್ಗಗಳ ಮಹಿಳೆಯರಿಗೆ ಇದರಿಂದ ಸಾಕಷ್ಟು ಹಣ ಉಳಿತಾಯವಾಗಿದೆ. ಆ ಹಣವನ್ನು ತಮ್ಮ ಕುಟುಂಬದ ಇತರೆ ಅಗತ್ಯಗಳಿಗೆ ಬಳಸುತ್ತಿದ್ದಾರೆ. ಹೀಗಾಗಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಶಕ್ತಿಯೂ ಹೆಚ್ಚುತ್ತಿದೆ ಎಂದು ಸರ್ಕಾರದ ಜನೋಪಯೋಗಿ ಯೋಜನೆಯ ಪರಿಣಾಮಕಾರಿ ಫಲಿತಾಂಶವನ್ನು ವಿವರಿಸಿದರು.
ರಾಜ್ಯದ 4 ಕೋಟಿ 30 ಲಕ್ಷ ಮಂದಿ ನೇರವಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಆ ಮೂಲಕ ಬಡವರು ಮತ್ತು ದುಡಿಯುವ ವರ್ಗಗಳನ್ನು ಆರ್ಥಿಕ ಸ್ಥಿತಿಯ ಸುಧಾರಿಸುವ ಮೂಲಕ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದರು.
ಆರ್ಥಿಕ ಶಕ್ತಿ ಮೂಲಕ ನಾಡಿನ ಸಮಸ್ತ ಮಹಿಳೆಯರಿಗೆ ಮತ್ತು ಬಡ, ಶ್ರಮಿಕ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸ್ವಾತಂತ್ರ್ಯ ಲಭಿಸಿದೆ. ಇದನ್ನು ಸಾಧಿಸಲು ಕಾಂಗ್ರೆಸ್ ಸರ್ಕಾರವೇ ಬರಬೇಕಾಯಿತು. ಹಿಂದಿದ್ದ ಬಿಜೆಪಿ ಸರ್ಕಾರಗಳು ಇದನ್ನು ಸಾಧಿಸಲಿಲ್ಲ. ಬದಲಿಗೆ ಟೀಕಿಸುತ್ತಾ ಕುಳಿತಿವೆ ಎಂದರು.
ಇಲ್ಲಿಯವರೆಗೂ ರಾಜ್ಯ ಸಾರಿಗೆಯ ಬಸ್ ಗಳಲ್ಲಿ 120 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ. ನಿತ್ಯ 40 ಲಕ್ಷ ಜನ ಬಿಎಂಟಿಸಿ ಯಲ್ಲಿ ಪ್ರಯಾಣ. ಇದರಲ್ಲಿ ಎಲ್ಲ ಜಾತಿ, ಎಲ್ಲ ಧರ್ಮದ, ಎಲ್ಲ ಅಂತಸ್ತಿನ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ.ಉಚಿತ ಬಸ್ ಪ್ರಯಾಣವನ್ನು ಬಿಜೆಪಿ ಯವರು ಟೀಕಿಸುತ್ತಿದ್ದಾರೆ. ಆದರೆ ಬಿಜೆಪಿ ಯವರು ತಾವು ಅಧಿಕಾರದಲ್ಲಿದ್ದಾಗ ಈ ಜನೋಪಯೋಗಿ ಯೋಜನೆಯನ್ನು ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು.
ಈ ವೇಳೆ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಕ್ರೀಡಾ ಸಚಿವ ನಾಗೇಂದ್ರ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.