ವಿಜಯಪುರ, ಡಿ.26: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Yediyurappa) ಮತ್ತವರ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೊಂದು ವಿವಾದದ ಬಾಂಬ್ ಸಿಡಿಸಿದ್ದಾರೆ.
ಕೊರೊನಾ ಮೊದಲನೇ ಅಲೆ ಅಪ್ಪಳಿಸಿದ ಸಮಯದಲ್ಲಿ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ಆರೋಗ್ಯ ಇಲಾಖೆಯಲ್ಲಿ ನಡೆದ ಖರೀದಿಯಲ್ಲಿ 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಮ್ಮ ಪಕ್ಷದ ಸರ್ಕಾರವಿದ್ದರೇನು? ಬೇರೆ ಸರ್ಕಾರ ಇದ್ದರೇನು? ಕಳ್ಳರು ಕಳ್ಳರೇ ಅಲ್ವಾ? ಯಡಿಯೂರಪ್ಪ ಅವಧಿಯಲ್ಲಿ ಪ್ರತಿಯೊಬ್ಬ ಕೊರೊನಾ ರೋಗಿಗೆ 8 ರಿಂದ 10 ಲಕ್ಷ ರೂ. ಬಿಲ್ ಮಾಡಿದ್ದಾರೆ ಇದೆಲ್ಲವೂ ಗೋಲ್ ಮಾಲ್ ಎಂದು ಹೇಳಿದರು
ಬಿಜೆಪಿಯಲ್ಲಿ ಯಾರು ಯಾರು ಲೂಟಿ ಮಾಡಿ, ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಂಬುದನ್ನು ಹೊರ ತೆಗೆಯುವೆ. ಯಡಿಯೂರಪ್ಪ ಅವರು ಕೊರೊನಾ ಸಂದರ್ಭದಲ್ಲಿ 45 ರೂಪಾಯಿಗೆ ಸಿಗುತ್ತಿದ್ದ ಮಾಸ್ಕ್ ಗೆ 485 ರೂಪಾಯಿ ನಿಗದಿಪಡಿಸಿದ್ದರು ಎಂದು ದೂರಿದರು.
ಸೋಂಕು ಪೀಡಿತರಿಗಾಗಿ ಬೆಂಗಳೂರಿನಲ್ಲಿ 10 ಸಾವಿರ ಬೆಡ್ ಸಿದ್ದಪಡಿಸಿ, ಇದಕ್ಕೆ 10 ಸಾವಿರ ಬೆಡ್ ಬಾಡಿಗೆ ಪಡೆದಿದರು. ಬಾಡಿಗೆ ನೀಡಿದ ಆ ಹಣದಲ್ಲೇ ಬೆಡ್ ಗಳನ್ನು ಖರೀದಿ ಮಾಡಿದ್ದರೆ ಕೋಟ್ಯಾಂತರ ರೂಪಾಯಿ ಉಳಿಯುತ್ತಿತ್ತು. ಇದರಲ್ಲಿ ಎಷ್ಟು ಸಾವಿರ ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದೀರಿ ಎಂದು ಪ್ರಶ್ನಿಸಿದರು.
ಈ ವಿಚಾರವನ್ನು ವಿಧಾನಸೌಧದಲ್ಲಿ ಯಡಿಯೂರಪ್ಪ ಅವರಿಗೆ ನೇರವಾಗಿ ಹೇಳಿರುವೆ. ನನಗೆ ಕೊರೊನಾ ಪಾಸಿಟಿವ್ ಆದಾಗ ಮಣಿಪಾಲ್ ಆಸ್ಪತ್ರೆಯಲ್ಲಿ 5 ಲಕ್ಷ 80 ಸಾವಿರ ತೆಗೆದುಕೊಂಡರು. ಇಷ್ಟು ಹಣವನ್ನು ಬಡವರಾದವರು ಎಲ್ಲಿಂದ ಕೊಡಬೇಕು” ಎಂದು ಅವಾಗಲೇ ಪ್ರಶ್ನಿಸಿದ್ದೆ ಎಂದು ತಿಳಿಸಿದರು.
ನಾನು ಈ ರೀತಿಯಲ್ಲಿ ಮಾತನಾಡುತ್ತಿರುವುದಕ್ಕೆ ಅವರು ನನಗೆ ನೊಟೀಸ್ ಕೊಡಲಿ, ಪಕ್ಷದಿಂದ ಹೊರ ಹಾಕಲಿ ಇದಕ್ಕೆಲ್ಲ ಹೆದರುವುದಿಲ್ಲ ಎಂದು ಹೇಳಿದರು ಇವರೆಲ್ಲರ ಬಣ್ಣ ಬಯಲು ಮಾಡುವೆ. ಸತ್ಯ ಹೇಳಿದರೆ ಎಲ್ಲರಿಗೂ ಭಯ, ಹೀಗಾಗಿ ಭಯದಲ್ಲಿ ಇಡಬೇಕು.
ಎಲ್ಲರೂ ಕಳ್ಳರಾದರೆ ರಾಜ್ಯ, ದೇಶವನ್ನು ಯಾರು ಉಳಿಸುತ್ತಾರೆ. ಪ್ರಧಾನಿ ಮೋದಿ ಅವರು ಇದ್ದಾರೆ ಎಂಬ ಕಾರಣಕ್ಕೆ ದೇಶ ಉಳಿದಿದೆ ಎಂದರು.
ಆರೋಗ್ಯ ವಿಚಾರದಲ್ಲಿ ನಾನು ಯಾವುದೇ ರೀತಿಯಲ್ಲೂ ಸರ್ಕಾರದಿಂದ ಹಣ ಇಲ್ಲಿವರೆಗೂ ಪಡೆದಿಲ್ಲ. ಶಾಸಕರಿಗೆ 2 ಲಕ್ಷ ರೂಪಾಯಿ ಸಂಬಳವಿದೆ. ನಾನು ಕಮಿಟಿ ಸಭೆಗೆ ಹೋದರೇ 65 ಸಾವಿರ ರೂಪಾಯಿ ಸಿಗುತ್ತದೆ. ತೆಗೆದುಕೊಂಡರೆ ನಾವು ಮನುಷ್ಯರಾ ಎಂದರು.
ಯತ್ನಾಳರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ವಿಚಂಪ್ರತಿಕ್ರಿಯಿಸಿ, “ಎಂಥವರ ಬಗ್ಗೆ ಪ್ರಶ್ನೆ ಕೇಳುತ್ತೀರಿ. ಅವರೆಲ್ಲ ರಾಜ್ಯ ಉಪಾಧ್ಯಕ್ಷ ಹೇಗೆ ಆಗುತ್ತಾರೆ. ಇನ್ನು ಬಹಳ ವಿಷಯಗಳಿವೆ ನನ್ನನ್ನು ಉಚ್ಚಾಟನೆ ಮಾಡಿದ ಬಳಿಕ ಬಯಲು ಮಾಡುತ್ತೇನೆ” ಎಂದು ತಿಳಿಸಿದರು.