ಬೆಂಗಳೂರು,ಜು.9- ಸಿಲಿಕಾನ್ ಸಿಟಿ ಮಹಾನಗರಿ ಬೆಂಗಳೂರಿನಲ್ಲಿ ಮತ್ತೆ ವಾಹನ ಸಂಚಾರ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅದರಲ್ಲೂ ಹೊರ ವರ್ತುಲ ರಸ್ತೆಗಳಲ್ಲಂತೂ ಅತ್ಯಂತ ಹೆಚ್ಚು ವಾಹನ ದಟ್ಟಣೆಯ ಪ್ರದೇಶಗಳಾಗಿವೆ.
ಸಾಂಕ್ರಾಮಿಕ ಕೋವಿಡ್ ಹಾವಳಿ ಕಡಿಮೆಯಾದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕೆಲಸ(ವರ್ಕ್ ಫ್ರಮ್ ಹೋಮ್) ನಿಯಮವನ್ನು ಹಿಂತೆಗೆದುಕೊಂಡ ಐಟಿ ಕಂಪನಿಗಳು ಉದ್ಯೋಗಿಗಳನ್ನು ವಾಪಸ್ ತಮ್ಮ ಕಚೇರಿಗೆ ಬಂದು ಕೆಲಸ ಮಾಡುವ ವ್ಯವಸ್ಥೆ ಮತ್ತೆ ಆರಂಭಿಸಿವೆ.
ಇದರಿಂದ ಕಚೇರಿಗಳ ಬರುವ ಜನರು ದ್ವಿಚಕ್ರ,ತ್ರಿಚಕ್ರ ಅಥವಾ ಕಾರುಗಳಲ್ಲಿ ಸಂಚರಿಸುವ ಪ್ರಮಾಣ ಹೆಚ್ಚಳವಾಗಿದೆ ಇದರಿಂದ ನಗರದ ಹೊರ ವರ್ತುಲ ರಸ್ತೆಯಲ್ಲಿ ಪ್ರತಿದಿನ ಸಂಚಾರ ದಟ್ಟಣೆ ಉಂಟಾಗಿದೆ.
ಇದು ಸಂಚಾರಿ ಪೋಲಿಸ್ ಮತ್ತು ಖಾಸಗಿ ಸಂಸ್ಥೆಗಳಿಗೆ ಸವಾಲಾಗಿದೆ.ಸಮಯಕ್ಕೆ ಸರಿಯಾಗಿ ಉದ್ಯೋಗಿಗಳು ಕಚೇರಿಗೆ ಬರುತ್ತಿಲ್ಲ ಎನ್ನುವುದು ಒಂದು ಕಡೆಯಾದರೆ,ಸಮಯದೊಳಗೆ ಕಚೇರಿ ತಲುಪಬೇಕೆಂಬ ಧಾವಂತದಲ್ಲಿ ಹೋಗುವ ಪರಿಣಾಮ ಅಪಘಾತ, ಸಂಚಾರಿ ನಿಯಮ ಉಲ್ಲಂಘನೆ ಮಾಮೂಲಿಯಾಗಿದೆ.
ಹೀಗಾಗಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಏನೆಲ್ಲಾ ಸಾಧ್ಯವೋ ಆ ಕ್ರಮಗಳನ್ನು ಅನ್ವೇಷಿಸಿ ಜಾರಿಗೊಳಿಸಲು ನಗರ ಸಂಚಾರ ಪೊಲೀಸರು ಹಾಗೂ ವರ್ತುಲ ರಸ್ತೆ ಕಂಪನಿಗಳ ಸಂಘವು ಮುಂದಾಗಿದೆ.
ಇದರ ಪರಿಣಾಮವಾಗಿ ಸಂಚಾರ ಪೊಲೀಸರೊಂದಿಗೆ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂವರೆಗೆ 60 ರಿಂದ 70 ಟ್ರಾಫಿಕ್ ಮಾರ್ಷಲ್‌ಗಳನ್ನು ನೇಮಿಸಿಕೊಂಡಿದೆ.
ಇವರುಗಳ ಸಲಹೆ ಮೇರೆಗೆ ವರ್ತುಲ ರಸ್ತೆಯಲ್ಲಿ ಸಂಚರಿಸುವ ಕಂಪೆನಿಗಳು ತಮ್ಮ ನೌಕರರಿಗೆ ಸಾಧ್ಯವಾದಾಗಲೆಲ್ಲಾ ಸಾರ್ವಜನಿಕ ಸಾರಿಗೆಯನ್ನು ಬಳಸಲು ತಿಳಿಸುತ್ತಿವೆ ಮತ್ತು ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ವಿಪರೀತ ಜನದಟ್ಟಣೆಯನ್ನು ತಡೆಗಟ್ಟಲು ನೌಕರರಿಗೆ ಲಾಗಿನ್ ಮತ್ತು ಲಾಗ್‌ಔಟ್ ಸಮಯವನ್ನು ಮ್ಯಾನೇಜ್ ಮಾಡಲು ತಿಳಿಸುತ್ತಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು
ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ ಎನ್ ಅನುಚೇತ್ ,ನಮ್ಮ ಅಂದಾಜಿನ ಪ್ರಕಾರ ಸಿಲ್ಕ್ ಬೋರ್ಡ್ ಮತ್ತು ಮಾರತ್ತಹಳ್ಳಿ ನಡುವೆ ಕಾರುಗಳ ಓಡಾಟವು ಕನಿಷ್ಠ ಶೇ 50 ರಷ್ಟು ಹೆಚ್ಚಾಗಿದೆ, ಆದ್ದರಿಂದ ಪೀಕ್ ಅವರ್‌ಗಳಲ್ಲಿ ಖಂಡಿತವಾಗಿಯೂ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ ಎಂದು ಹೇಳಿದರು.
ಸಂಚಾರ ದಟ್ಟಣೆಯನ್ನು ಎದುರಿಸಲು, ಪ್ರಾಥಮಿಕ ಮೆಟ್ರೋ ಕಾಮಗಾರಿ ಪೂರ್ಣಗೊಂಡಿರುವ ಫ್ಲೈಓವರ್‌ಗಳ ಕೆಳಗೆ ಕೆಲವು ಯು-ಟರ್ನ್‌ಗಳನ್ನು ತೆರೆದಿದ್ದಾರೆ. ಸೋಮವಾರದಿಂದ ಸಂಚಾರ ಪೊಲೀಸರು ದೇವರಬೀಸನಹಳ್ಳಿಯಲ್ಲಿಯೂ ಕೆಲ ಯೂ ಟರ್ನ್ ಬದಲಾವಣೆ ಮಾಡಲಿದ್ದಾರೆ ಎಂದರು.
ಕೆಲವೆಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲು ಮತ್ತು ಟ್ರಾಫಿಕ್ ಲೇನ್ ಅನ್ನು ಮುಕ್ತಗೊಳಿಸಲು ಮತ್ತು ಉತ್ತಮ ಸಂಚಾರಕ್ಕೆ ಅನುವು ಮಾಡಿಕೊಡಲು ಮೆಟ್ರೋ ಕಾಮಗಾರಿ ಪೂರ್ಣಗೊಂಡಿರುವ ರಸ್ತೆಯ ಭಾಗಗಳಲ್ಲಿ ಡಾಂಬರೀಕರಣ ಪ್ರಕ್ರಿಯೆಯನ್ನು ವೇಗಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.
ಈ ಮೂಲಸೌಕರ್ಯ ಬದಲಾವಣೆಗಳ ಜೊತೆಗೆ, ಟ್ರಾಫಿಕ್ ಪೊಲೀಸರು ಸಾರ್ವಜನಿಕ ಸಾರಿಗೆಯ ದೊಡ್ಡ ಅಳವಡಿಕೆಗೆ ಒತ್ತಾಯಿಸಲು ಉದ್ದೇಶಿಸಿದ್ದಾರೆ.
ಬಿಎಂಟಿಸಿ ಜೊತೆಗೆ, ಅವರು ಉದ್ಯೋಗಿಗಳಿಗೆ ಕಾರ್‌ಪೂಲಿಂಗ್ ಆಯ್ಕೆಗಳನ್ನು ಮರುಪರಿಚಯಿಸುವ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದಾರೆ ಮತ್ತು ಓಆರ್ ಆರ್ ಜೊತೆಗೆ ಸ್ಥಿರ ಬಿಂದುಗಳ ನಡುವೆ ಶಟಲ್ ಸೇವೆಗಳನ್ನು ಪರಿಚಯಿಸುವ ಪರಿಶೀಲನೆ ನಡೆದಿದೆ ಎಂದು ಅನುಚೇತ್ ಮಾಹಿತಿ ನೀಡಿದ್ದಾರೆ.
ಹೊರ ವರ್ತುಲ ರಸ್ತೆ ಉದ್ದಕ್ಕೂ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಸಮೀಕ್ಷೆ ಮಾಡಿದ್ದೇವೆ, ಅದನ್ನು ಪ್ರಯಾಣಿಕರಿಗೆ ಅನಾನುಕೂಲವಾಗದ ರೀತಿಯಲ್ಲಿ ಸರ್ವಿಸ್ ರಸ್ತೆಗಳಿಗೆ ಬದಲಾಯಿಸಬಹುದು. ಇದನ್ನು ಬಿಎಂಟಿಸಿ ನೆರವಿನಿಂದ ಜಾರಿಗೊಳಿಸಲಾಗುವುದು ಎಂದು ಅನುಚೇತ್ ತಿಳಿಸಿದರು.