ಬೆಂಗಳೂರು, ಫೆ.17: ಲೋಕಸಭೆ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಅವರ ಸೋದರ ಡಿಕೆ ಸುರೇಶ್ (DK Suresh) ಅವರನ್ನು ಕಟ್ಟಿಹಾಕಲು ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿಕೂಟ ಹೊಸದೊಂದು ರಣ ವ್ಯೂಹ ಸಿದ್ಧಪಡಿಸಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಿಕೆ ಸುರೇಶ್ ಮತ್ತೊಮ್ಮೆ ಕಣಕ್ಕಿಳಿಯುವುದು ನಿಶ್ಚಿತ ಈ ಕ್ಷೇತ್ರದಲ್ಲಿ ಅವರಿಗೆ ಪ್ರಬಲ ಸ್ಪರ್ಧೆ ಒತ್ತುವ ಮೂಲಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಸುರೇಶ್ ಅವರನ್ನು ಕ್ಷೇತ್ರದಲ್ಲಿಯೇ ಕಟ್ಟಿ ಹಾಕಬೇಕು ಎಂದು ತಂತ್ರ ಹೆಣೆಯಲಾಗಿದೆ.
ಡಿಕೆ ಸುರೇಶ್ (DK Suresh) ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎಂಬ ಕುರಿತಂತೆ, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರತ್ಯೇಕವಾಗಿ ಸಮೀಕ್ಷೆ ನಡೆಸಿದ್ದು ಜಯದೇವ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಅವರನ್ನು ಕಣಕ್ಕಿಳಿಸಿದರೆ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ಕೈಗೊಂಡ ಹಲವಾರು ಕ್ರಮಗಳು ಡಾ.ಮಂಜುನಾಥ್ ಅವರನ್ನು ಜನಪ್ರಿಯಗೊಳಿಸಿವೆ. ಕ್ಷೇತ್ರದ ಬಹುತೇಕ ಎಲ್ಲರಿಗೂ ಚಿರಪರಿಚಿತರಾಗಿರುವ ಮಂಜುನಾಥ್ ಅವರನ್ನು ಕಣಕ್ಕಿಳಿಸಿದ್ದೆ ಆದಲ್ಲಿ ಗೆಲುವು ನಿಶ್ಚಿತ ಎಂಬ ವರದಿಗಳು ಜೆಡಿಎಸ್ ಮತ್ತು ಬಿಜೆಪಿ ಪಾಳಯವನ್ನು ತಲುಪಿದೆ.
ಹೀಗಾಗಿ ಉಭಯ ಪಕ್ಷಗಳ ನಾಯಕರು ಮಂಜುನಾಥ್ ಅವರನ್ನು ಬಿಜೆಪಿಯ ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಮೂಲಕ ಡಿ.ಕೆ.ಸೋದರರಿಗೆ ಸೆಡ್ಡು ಹೊಡೆಯಲು ನಿರ್ಧರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ನ ಸಾಂಪ್ರದಾಯಿಕ ಮತಗಳ ಜೊತೆಗೆ ಬಿಜೆಪಿಯೂ ಕೂಡ ಸಾಕಷ್ಟು ಪ್ರಾಬಲ್ಯ ಹೊಂದಿದೆ ಹೀಗಾಗಿ ಮಂಜುನಾಥ್ ಅವರು ನಿರಾಯಸವಾಗಿ ಗೆಲುವು ಸಾಧಿಸಲಿದ್ದಾರೆ ಎಂಬ ವರದಿಗಳು ಉಬಯ ಪಕ್ಷಗಳನ್ನು ತಲುಪಿದೆ ಈ ನಿಟ್ಟಿನಲ್ಲಿ ಎರಡೂ ಪಕ್ಷಗಳ ನಾಯಕರು ಡಾ.ಮಂಜುನಾಥ್ ಅವರ ಜೊತೆ ಮಾತುಕತೆ ಕೂಡ ನಡೆಸಿದ್ದಾರೆ. ಎರಡು ಪಕ್ಷಗಳು ಒಡ್ಡಿರುವ ಆಹ್ವಾನಕ್ಕೆ ಸಮ್ಮತಿಸಿರುವ ಮಂಜುನಾಥ್ ಅವರು ಬಹುತೇಕ ಈ ಕ್ಷೇತ್ರದಿಂದ ಕಣಕ್ಕಿಳಿಯುವುದು ನಿಶ್ಚಿತವಾಗಿದೆ.

