ಬೆಂಗಳೂರು, ಸೆ.23 – ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿ ಅವರನ್ನು ಮತ್ತೊಂದು ಅವಧಿಗೆ ಪ್ರಧಾನಿ ಮಾಡುವ ಗುರಿಯೊಂದಿಗೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಇದು ಕೇವಲ ಲೋಕಸಭೆ ಚುನಾವಣೆಗೆ ಸೀಮಿತವಾಗದೆ ಧೀರ್ಘಾವಧಿವರೆಗೆ ಮುಂದುವರೆಯಲಿದೆ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರದಲ್ಲಿ ಸೌಹಾರ್ದಯುತವಾಗಿ ಚರ್ಚೆ ಮಾಡಿದ್ದೇವೆ. ಉಭಯ ಪಕ್ಷಗಳ ಮೈತ್ರಿಯನ್ನು ದೀರ್ಘಾವವರೆಗೆ ಮುಂದುವರೆಸುವ ಬಗ್ಗೆ ಹಲವು ಸಂಗತಿಗಳನ್ನು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ರಾಜ್ಯದ ರಾಜಕಾರಣ ಕುರಿತು ಹಲವಾರು ವಿಚಾರದ ಬಗ್ಗೆ ಚರ್ಚೆ ಮಾಡಲಾಯಿತು. ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರಗಳ ಹಂಚಿಕೆ ಕುರಿತಂತೆ ಚರ್ಚಿಸಲಾಯಿತು ಎಂದು ಹೇಳಿದರು.
ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲವು ಸಭೆಗಳನ್ನು ನಡೆಸಲು ಮನವಿ ಮಾಡಿದ್ದು, ದಸರಾ ಹಬ್ಬದ ನಂತರ ಮೈತ್ರಿ ನಿರ್ಧಾರವನ್ನು ಅಕೃತವಾಗಿ ಪ್ರಕಟಿಸುತ್ತೇವೆ. ಉಭಯ ಪಕ್ಷಗಳ ನಡುವೆ ಈ ವಿಚಾರದಲ್ಲಿ ಗೊಂದಲವಿಲ್ಲ.ನಾಡಿನ, ರಾಷ್ಟ್ರದ ಅಭಿವೃದ್ಧಿಗಾಗಿ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ನಾಡಿನ ಜನತೆಯ ಹಿತದೃಷ್ಟಿಯಿಂದ ಕೆಲವು ವಿಚಾರಗಳನ್ನು ಬಿಜೆಪಿ ನಾಯಕರೊಂದಿಗೆ ಚರ್ಚೆ ಮಾಡಿದ್ದು, ಅವುಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ. ನಮ್ಮ ನಾಡಿಗೆ ಉಂಟಾಗಿರುವ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರದ ಬಗ್ಗೆ ಚಿಂತನೆಯನ್ನು ಮಾಡಲಾಗಿದೆ.
ನಾಡಿನ ಸಮಸ್ಯೆಗಳ ಪರಿಹಾರಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮುಂದುವರೆ ಸಬೇಕಿದ್ದು, ಈ ವಿಚಾರದಲ್ಲಿ ಯಾವುದೇ ರೀತಿಯ ಪ್ರತಿಷ್ಟೆ ಇಲ್ಲ ಎಂದು ತಿಳಿಸಿದರು.
ಅಲ್ಪಸಂಖ್ಯಾತರು ಗುಡ್ ಬೈ:
ಬಿಜೆಪಿ ಜೊತೆಗೆ ಜೆಡುಎಸ್ ಮೈತ್ರಿಯ ನಿರ್ಧಾರ ಹೊರ ಬೀಳುತ್ತಿದ್ದಂತೆ ಜೆಡಿಎಸ್ ನ ಹಲವು ಪ್ರಭಾವಿ ಮುಸ್ಲಿಂ ಸಮುದಾಯದ ನಾಯಕರು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಭೆ ಸೇರಿದ ಮಾಜಿ ಸಚಿವ ಎನ್.ಎಂ.ನಬಿ, ರಾಜ್ಯ ಉಪಾಧ್ಯಕ್ಷ ಸಯ್ಯದ್ ಶಫೀ ಉಲ್ಲಾ ಸಾಹೇಬ್, ಮುಖಂಡರಾದ ಮಹಿದ್ ಅಲ್ತಾದ್, ನೂರ್ ಅವರುಗಳು ಜಾತ್ಯಾತೀತ ತತ್ವಗಳಿಗೆ ವಿರುದ್ಧವಾಗಿ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ ಇದನ್ನು ವಿರೋಧಿಸಿ ತಾವು ಪಕ್ಷ ತೊರೆಯುತ್ತಿರುವುದಾಗಿ ತಿಳಿಸಿದರು.