ಬೆಂಗಳೂರು, ಜೂ.10: ಬಿಜೆಪಿ ಮುಖಂಡರಾದ ನೂಪುರ್ ಶರ್ಮಾ ಮಹಮದ್ ಪೈಗಂಬರ್ ಬಗ್ಗೆ ನೀಡಿದ್ದ
ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ಗಲಾಟೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಹೈಅಲರ್ಟ್ ಘೋಷಿಸಿ ಕಟ್ಟೆಚ್ಚರ ವಹಿಸಲಾಗಿದೆ
ದೇಶದ ಹಲವು ರಾಜ್ಯಗಳಲ್ಲಿ ನೂಪುರ್ ಶರ್ಮಾ ಹೇಳಿಕೆ ವಿರೋಧಿಸಿ ಪ್ರತಿಭಟನೆ ಹಿಂಸಾಚಾರ ನಡೆದಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಕೇಂದ್ರ ಗೃಹ ಇಲಾಖೆ ಎಲ್ಲಾ ರಾಜ್ಯಗಳಿಗೂ ಎಚ್ಚರ ವಹಿಸುವಂತೆ ಸೂಚನೆಯನ್ನು ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಹೈಲರ್ಟ್ ಘೋಷಿಸಿ ಬಿಗಿ ಪೊಲೀಸ್ ಬಂದೋಬಸ್ಥ್ ಕೈಗೊಳ್ಳಲಾಗಿದೆ. ರಾಜ್ಯದ ಅತಿ ಸೂಕ್ಷ್ಮ, ಸೂಕ್ಷ್ಮ ಪ್ರದೇಶಗಳು, ಮಸೀದಿಗಳು,ದೇವಾಲಯಗಳು,ಪ್ರಮುಖ ಪೂಜಾ ಮಂದಿರಗಳ ಬಳಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.
ರಾಜ್ಯದ ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿಗಳು ಜಿಲ್ಲೆಯಲ್ಲಿ ಎಸ್ ಪಿಗಳು ಭದ್ರತೆಯ ನೇತೃತ್ವ ವಹಿಸಿದ್ದರೆ, ಕಮೀಷನರ್ ಗಳು ಐಜಿಗಳು ಭದ್ರತೆಯ ನಿಗಾ ವಹಿಸಿ ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದು ರಾಜ್ಯದ ಯಾವುದೇ ಭಾಗದಲ್ಲೂ ಅಹಿತಕರ ಘಟನೆಗಳು ನಡೆದಿರುವ ವರದಿಗಳು ಬಂದಿಲ್ಲ.
ಕೇಂದ್ರ ಸರ್ಕಾರದ ಎಚ್ಚರಿಕೆ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಜಿಪಿ ಪ್ರವೀಣ್ ಸೂದ್, ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್, ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿಯನ್ನು ವಿಧಾನಸೌಧಕ್ಕೆ ಕರೆಸಿ ಸಭೆ ನಡೆಸಿ ಅತಿ ಸೂಕ್ಷ್ಮ, ಸೂಕ್ಷ್ಮ ಪ್ರದೇಶಗಳನ್ನು ಪಟ್ಟಿಮಾಡಿ ಭದ್ರತೆಯನ್ನು ಬಿಗಿಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿಯೂ ಕಾನೂನು ಸುವ್ಯವಸ್ಥೆ ಹಾಳಾಗದಂತೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕೋಮು ಜ್ವಾಲೆ ಹಬ್ಬದಂತೆ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳಲು ಸೂಚನೆಯನ್ನು ನೀಡಿದ್ದಾರೆ.
ಪ್ರವಾದಿ ವಿವಾದ ತೀವ್ರಗೊಳ್ಳಬಹುದು ಮತ್ತಷ್ಟು ಗಲಭೆ, ದೊಂಬಿಗಳು, ಶಾಂತಿ ಕದಡುವ ಕೆಲಸ ಆಗಬಹುದು. ಹೀಗಾಗಿ ಇದನ್ನು ತಡೆಯಲು ರಾಜ್ಯಗಳು ಸನ್ನದ್ಧರಾಗಬೇಕು. ಅಗತ್ಯ ಬಿದ್ದಲ್ಲಿ ಅರೆಸೇನಾ ತುಕಡಿಗಳನ್ನು ಬಳಸಿಕೊಳ್ಳಿ. ಉದ್ರೇಕಕಾರಿ ಭಾಷಣ ಮಾಡುವ ವ್ಯಕ್ತಿಗಳು, ಸೋಶಿಯಲ್ ಮಿಡಿಯಾ ಪೋಸ್ಟ್‌ಗಳ ಮೇಲೆ ನಿಗಾ ವಹಿಸಿ ಸಮಾಜದ ಶಾಂತಿ ಕದಡುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಮುಖ್ಯಮಂತ್ರಿಗಳ ಸಭೆಯ ನಂತರ ರಾಜ್ಯದ ಸೂಕ್ಷ್ಮಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಂಡು ಸ್ಥಳೀಯ ಪೊಲೀಸರ ಜೊತೆಗೆ ಕೆಎಸ್‍ಆರ್‌ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಕೋಮು ಸಂಘರ್ಷ ಹೆಚ್ಚಾಗುವ , ಕಾನೂನು ಸುವ್ಯವಸ್ಥೆ ಹದಗೆಡುವಂತಹ ಪ್ರದೇಶಗಳಲ್ಲಿ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತೆಯನ್ನು ಕೈಗೊಳ್ಳುವುದು. ಅಪಾಯದ ಮುನ್ಸೂಜನೆ ಸಿಕ್ಕ ಪಕ್ಷದಲ್ಲಿ ಆಯಾ ಡಿವಿಷನ್‌ನಿಂದ ಹೆಚ್ಚುವರಿ ಪೊಲೀಸರನ್ನು ಭದ್ರತೆ ನಿಯೋಜನೆ ಮಾಡಲು ನಗರ ಪೊಲೀಸ್ ಆಯುಕ್ತರು ಡಿಸಿಪಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ನಗರದ ಯಶವಂತಪುರ ಸರ್ಕಲ್, ಗೋರಿಪಾಳ್ಯ, ಪಾದರಾಯನಪುರ, ಅಜಾದ್ ನಗರ, ಶಿವಾಜಿ ನಗರ, ನಿಲಸಂದ್ರ, ಬಕ್ಷಿ ಗಾರ್ಡನ್, ಕೆ.ಆರ್ ಮಾರ್ಕೆಟ್ ಸೇರಿದಂತೆ ಹಲವು ಕಡೆ ಬೀಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸ್ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.