ತುಮಕೂರು Aug 31: ಹಿಂದುಳಿದ ವರ್ಗಗಳ ಮುಖಂಡ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಪರಿಷತ್ ಮತ್ತು ರಾಜ್ಯಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಲಕ್ಷ್ಮೀನಾರಾಯಣ್ ತಮಗೆ ಟಿಕೆಟ್ ಸಿಗದ್ದರಿಂದ ಬೇಸರಗೊಂಡಿದ್ದರು.ಈ ಕುರಿತಾಗಿ ಬಹಿರಂಗವಾಗಿಯೇ ತಮ್ಮ ಅಸಮಧಾನ ಹೊತಹಾಕಿದ್ದ ಅವರು ಇದೀಗ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ತುರುವೇಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯ ತಿಳಿಸಿ 10 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿ ನಂತರ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದೆ. ಕಳೆದ 5 ವರ್ಷಗಳಿಂದ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷನಾಗಿ ಪಕ್ಷ ನೀಡಿದ ಜವಬ್ದಾರಿ ನಿರ್ವಹಿಸಿದ್ದೇನೆ. ಎಲ್ಲಾ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಹಿಂದುಳಿದ ವರ್ಗಗಳಲ್ಲಿ ಬರುವ 197 ಜಾತಿಗಳ ಪ್ರಮುಖರು ಹಾಗೂ ಸಮುದಾಯಗಳನ್ನು ಗುರುತಿಸಿ ಸಂಘಟನೆ ಮಾಡಿದ್ದೇನೆ. ಆ ಮೂಲಕ ಪಕ್ಷವನ್ನು ಬಲಪಡಿಸುವ ನಿಟ್ಟಿಲ್ಲಿ ಕೆಲಸ ಮಾಡಿದೆ.ಆದರೆ ಕಾಂಗ್ರೆಸ್ ತನ್ನನ್ನು ಗುರುತಿಸಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಿಲುವು ಹಿಂದುತ್ವದ ವಿರೋಧಿಯಾಗಿದ್ದು ಯಾವುದೇ ಹಿಂದೂ ಸಂಘಟನೆಗಳನ್ನು ಮೂಲೆ ಗುಂಪು ಮಾಡುವಲ್ಲಿ ತೆಗೆದುಕೊಂಡ ನಿರ್ಣಯವನ್ನು ವಿರೋಧಿಸಿದ್ದೆ. ಹಿಂದೆ ನಾನು ಸಂಘ ಪರಿವಾರದ ಮೂಲಕ ಬಂದಿದ್ದು, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷನಾಗಿ ಅನೇಕ ಹಿಂದೂ ಸಂಘನೆಗಳೊಂದಿಗೆ ಕೆಲಸ ಮಾಡಿರುವೆ ಎಂದರು.
ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ಈ ಬಗ್ಗೆ ಚರ್ಚಿಸಿದಾಗ ಆರ್ ಎಸ್ಎಸ್ ಮೂಲದ ವ್ಯಕ್ತಿಗಳು ಪಕ್ಷದಲ್ಲಿ ಹೊಂದಾಣಿಕೆಯಿಂದ ಕೆಲಸ ಮಾಡಲು ಸಾದ್ಯವಿಲ್ಲ ಎಂಬ ಮಾತುಗಳು ಹೊರ ಬಂದ ನಂತರ ನನ್ನ ರಾಜಕೀಯ ಭವಿಷ್ಯ ಮತ್ತು ಮುಂದಿನ ದಾರಿಗಳ ಬಗ್ಗೆ ಚಿಂತಿಸಿದೆ. ತುರುವೇಕೆರೆ ವಿಧಾಸಭಾ ಕ್ಷೇತ್ರದಿಂದ ನನ್ನನ್ನು ಹಿಂದೆ ಆಯ್ಕೆಮಾಡಿ ಕಳುಹಿಸಿದ ಅಭಿಮಾನಿಗಳ ಜೊತೆಗೆ ಚರ್ಚಿಸಿದೆ. ಕಳೆದ 20 ವರ್ಷಗಳಿಂದ ನೇಕಾರ ಸಮಾಜದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ರಾಜ್ಯದ ಎಲ್ಲಾ ನೇಕಾರ ಬಂಧುಗಳು, ಹಿಂದುಳಿದ ವರ್ಗಗಳ ಎಲ್ಲ ಪ್ರಮುಖರು ಹಾಗೂ ಹಿಂದುಳಿದ ನಾಯಕರ ಜತೆ ಚರ್ಚಿಸಿದೆ. ಅವರು ನನಗೆ ಸ್ಪಷ್ಟ ಸಲಹೆ ಕೊಟ್ಟರು ಎಂದರು.
ಹಿಂದೆ ಬಿಜೆಪಿಯಲ್ಲಿ ಶಾಸಕನಾಗಿ, ವಿಧಾನ ಪರಿಷತ್ ಸದಸ್ಯನಾಗಿ, ಜವಳಿ ಅಭಿವೃದ್ದಿ ನಿಗಮ ಅಧ್ಯಕ್ಷನಾಗಿ ಕೆಲಸ ಮಾಡಲು ಕಾರಣೀಭೂತರಾದ ಬಿಜೆಪಿಗೆ ಪುನಃ ಮರಳ ಬೇಕೆಂದು ತೀರ್ಮಾನಿಸಿದೆ. ಬಿಜೆಪಿ ಅಧ್ಯಕ್ಷರು ಹಿರಿಯ ನಾಯಕರು ಮತ್ತು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅವರು ಕೊಟ್ಟ ದಿನಾಂಕದಂದು ಬಿಜೆಪಿ ಸೇರುತ್ತೇನೆ ಎಂದು ಹೇಳಿದರು