ಬೆಂಗಳೂರು – ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ. ಚುನಾವಣೆಗೆ ಮುನ್ನ ಕಾಂಗ್ರೆಸ್ ರಾಜ್ಯದ ಜನರಿಗೆ ನೀಡಿದ ಗ್ಯಾರಂಟಿ ಭರವಸೆಗಳನ್ನು ಈಡೇರಿಸಲಾಗಿದೆ.ಇದರಿಂದಾಗಿ ಜನತೆ ಸಂತಸದಿಂದ ಇದ್ದಾರೆ. ಇದು ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಸೃಷ್ಟಿಸಿದೆ.
ಹಾಗೇಯೇ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗುತ್ತಿದೆ. ಬೆಲೆಯೇರಿಕೆ, ನಿರುದ್ಯೋಗ,ಜಿಎಸ್ ಟಿ ಮೊದಲಾದ ಕಾರಣಗಳಿಂದ ಬೇಸರಗೊಂಡಿರುವ ಮತದಾರರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಕೂಟದ ವಿರುದ್ಧ ಮತ ಚಲಾಯಿಸಲಿದ್ದಾರೆ ಎಂಬ ಲೆಕ್ಕಾಚಾರ ಹಾಗೂ ವಿಶ್ಲೇಷಣೆ ನಡೆದಿವೆ.
ಇಂತಹ ವಿಶ್ಲೇಷಣೆಗಳ ಬೆನ್ನಲ್ಲೇ ಸಿ-ವೋಟರ್ ಹಾಗೂ ಇಂಡಿಯಾ ಟುಡೆ ಜಂಟಿಯಾಗಿ ‘ಮೂಡ್ ಆಫ್ ದಿ ನೇಷನ್' ಹೆಸರಲ್ಲಿ ಸಮೀಕ್ಷೆ ನಡೆಸಿವೆ.
ಈ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದೆ. ಪ್ರಸಕ್ತ ಸನ್ನಿವೇಶದಲ್ಲಿ ಈಗಲೇ ಲೋಕಸಭಾ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 306 ಸೀಟುಗಳನ್ನು ಪಡೆದು ಗಮನಾರ್ಹ ಬಹುಮತದೊಂದಿಗೆ ಆರಾಮವಾಗಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ.
ಲೋಕಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ರಾಜಕೀಯ ಪಕ್ಷ ಅಥವಾ ಮೈತ್ರಿಕೂಟಕ್ಕೆ 272 ಸೀಟುಗಳ ಅವಶ್ಯಕತೆ ಇದೆ. ಬಿಜೆಪಿ ನೇತೃತ್ವದ ಎನ್‌ಡಿಎ ಈ ಮ್ಯಾಜಿಕ್ ಸಂಖ್ಯೆಯನ್ನು ಯಾವ ಅಡ್ಡಿಯೂ ಇಲ್ಲದೆ ದಾಟಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಇದರ ಜೊತೆಗೆ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಸೇರಿ ರಚಿಸಿರುವ ಇಂಡಿಯಾ ಮೈತ್ರಿಕೂಟ ಕೂಡ ತನ್ನ ಒಗ್ಗಟ್ಟಿನ ಸಾಮರ್ಥ್ಯ ಪ್ರದರ್ಶಿಸಲಿದೆ. ಎನ್‌ಡಿಎ 306 ಸೀಟುಗಳನ್ನು ಪಡೆದರೆ, ವಿರೋಧ ಪಕ್ಷಗಳ ಮೈತ್ರಿಕೂಟವು 193 ಸೀಟುಗಳಲ್ಲಿ ಗೆಲುವು ಸಾಧಿಸಲಿವೆ.
ಜುಲೈ 15ರಿಂದ ಆಗಸ್ಟ್ 14ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ದೇಶದ ಎಲ್ಲಾ ರಾಜ್ಯಗಳಿಂದ ಒಟ್ಟು 25,951 ಮಂದಿಯನ್ನು ಸಂದರ್ಶಿಸಲಾಗಿದೆ. ಜತೆಗೆ ಟ್ರ್ಯಾಕರ್ ಡೇಟಾದ ಹೆಚ್ಚುವರಿ 1,34,487 ಸಂದರ್ಶನಗಳನ್ನು ವಿಶ್ಲೇಷಿಸಲಾಗಿದ್ದು, ಒಟ್ಟಾರೆ 1,60,438 ಮಾದರಿಗಳನ್ನು ಬಳಸಿಕೊಳ್ಳಲಾಗಿದೆ.
ಇನ್ನೂ ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಲೆಕ್ಕಾಚಾರದೊಂದಿಗೆ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿರುವ ಕರ್ನಾಟಕದಲ್ಲೂ ಈ ಬಾರಿ ಬಿಜೆಪಿ ಮತ್ತೊಮ್ಮೆ ಕಮಾಲ್ ಮಾಡಲಿದೆ ಎಂದು ಸಮೀಕ್ಷೆ ತಿಳಿಸಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರೂ, ಲೋಕಸಭಾ ಚುನಾವಣೆಯ ಮೇಲೆ ಇವುಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಮೀಕ್ಷೆಯ ವರದಿ ತಿಳಿಸಿದೆ.
ಕರ್ನಾಟಕದ ಒಟ್ಟು 28 ಲೋಕಸಭಾ ಕ್ಷೇತ್ರಗಳಿಗೆ ಈಗಲೇ ಚುನಾವಣೆ ನಡೆದರೆ ಬಿಜೆಪಿ 20 ಸೀಟು ಗೆಲ್ಲಲಿದೆ. ಇನ್ನು 7 ಸ್ಥಾನ ಕಾಂಗ್ರೆಸ್ ಪಾಲಾಗಲಿದ್ದರೆ, ಜೆಡಿಎಸ್ ಒಂದು ಸ್ಥಾನವನ್ನು ಉಳಿಸಿಕೊಳ್ಳಲಿದೆ.
ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯೊಂದಿಗೆ ಚುನಾವಣೆ ಎದುರಿಸಿದ್ದವು. ಆಗ,
ಬಿಜೆಪಿ 25 ಸೀಟು ಗೆದ್ದಿತ್ತು. ಕಾಂಗ್ರೆಸ್, ಜೆಡಿಎಸ್ ತಲಾ ಒಂದು ಸ್ಥಾನ ಗಳಿಸಿದರೆ,ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಗೆದ್ದಿದ್ದರು.