ಹಾಸನ, ನ.20- ಮನೆಯಲ್ಲಿ ವಿಪರೀತ ಹಿಂಸೆ ಕೊಡುತ್ತಿದ್ದ ಪತಿಯ ವಿರುದ್ಧ ಮಹಿಳೆಯೊಬ್ಬರು ಧೈರ್ಯ ಮಾಡಿ ಠಾಣೆಗೆ ದೂರು ನೀಡಲು ಹೋದರೆ ಆಕ್ರೋಶಗೊಂಡ ಪತಿ ಪೊಲೀಸರ ಮುಂದೆಯೇ ಆಕೆಯ ಕತ್ತು ಕೊಯ್ದ ಭಯಾನಕ ಘಟನೆ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಶಿಲ್ಪಾ ಮತ್ತು ಹರೀಶ್ ನಡುವೆ ಆರು ವರ್ಷದ ಹಿಂದೆ ಮದುವೆ ನಡೆದಿತ್ತು. ಇಬ್ಬರೂ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯಲ್ಲಿ ವಾಸಿಸುತ್ತಿದ್ದರು. ಹರೀಶ್ ಒಬ್ಬ ಅನುಮಾನ ಪಿಶಾಚಿ. ಆತ ಪ್ರತಿ ಹಂತದಲ್ಲೂ ಹೆಂಡತಿಯ ಮೇಲೆ ಅನುಮಾನಿಸುತ್ತಿದ್ದ. ಹೀಗಾಗಿ ಪ್ರತಿ ನಿತ್ಯ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಅವನು ಬಂದು ಹೊಡೆಯುತ್ತಿದ್ದ. ಇತ್ತ ಶಿಲ್ಪಾಗೂ ಗಂಡನ ಮೇಲೆ ಅನುಮಾನ ಇತ್ತು. ಹೀಗಾಗಿ ಮನೆಯಲ್ಲಿ ಜಗಳ ಎನ್ನುವುದು ಸಾಮಾನ್ಯವಾಗಿತ್ತು.
ಹಲವಾರು ಬಾರಿ ಪರಸ್ಪರ ಹಲ್ಲೆ, ಕೊಲೆಯತ್ನಗಳು ನಡೆದಾಗ ಇನ್ನು ಕೊಂದೇ ಬಿಡುತ್ತಾನೆ ಅನಿಸಿದಾಗ ಶಿಲ್ಪಾ ಆತನ ವಿರುದ್ದ ಹಾಸನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಪತಿ ತೊಂದರೆ ಕೊಡುತ್ತಿದ್ದಾನೆ ಎಂಬ ಶಿಲ್ಪಾ ದೂರಿನ ಅನ್ವಯ ಪೊಲೀಸರು ಎಚ್ಚರಿಕೆ ನೀಡಲೆಂದು ಹರೀಶ್ ನನ್ನು ಬರ ಹೇಳಿದ್ದರು. ಶಿಲ್ಪಾ ಕೂಡಾ ಬಂದಿದ್ದಳು. ಪಿಎಸ್‌ಐ ಉಮಾ ಅವರು ಹರೀಶ್ ನನ್ನು ವಿಚಾರಣೆ ನಡೆಸಿದ್ದರು.
ಹೀಗೆ ವಿಚಾರಣೆ ನಡೆಸುತ್ತಿದ್ದ ಸಮಯದಲ್ಲೇ ಹರೀಶ್ ಠಾಣೆಯಲ್ಲೇ ಇದ್ದ ಪತ್ನಿಯ ಮೇಲೆ ಏರಿಹೋಗಿದ್ದಾನೆ. ತಾನು ಮೊದಲೇ ತಂದಿದ್ದ ಚಾಕುವನ್ನು ಬಳಸಿ ಪತ್ನಿಯ ಕುತ್ತಿಗೆಯನ್ನೇ ಕೊಯ್ದಿದ್ದಾನೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶ ಮಾಡಿ ಆತನ ಕೈಯಲ್ಲಿದ್ದ ಚಾಕುವನ್ನು ಕಿತ್ತುಕೊಂಡಿದ್ದಾರೆ.
ಚಾಕು ಇರಿತದಿಂದ ಗಾಯಗೊಂಡ ಶಿಲ್ಪಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ನಡುವೆ, ಹರೀಶ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.