ಬೆಂಗಳೂರು, ನ.20: ಬರಗಾಲ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕದ ಕಡೆಗಣನೆ ವಿರೋಧಿಸಿ ಬೆಳಗಾವಿ ವಿಧಾನ ಮಂಡಲದ ಅಧಿವೇಶನದಲ್ಲಿ ನಿಲುವಳಿ ಸೂಚನೆ ಮಂಡಿಸಲು ನಿರ್ಧರಿಸಿರುವುದಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ನಂತರ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದ ಬಹುತೇಕ ಪ್ರದೇಶ ಬರಗಾಲ ಪೀಡಿತವಾಗಿದೆ. ಇಲ್ಲಿ ಪರಿಹಾರ ಸೇರಿದಂತೆ ಅಗತ್ಯ ನೆರವು ನೀಡುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ.ಎಲ್ಲದಕ್ಕೂ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಾ ರಾಜಕಾರಣ ಮಾಡುತ್ತಿದೆ. ಇಂತಹ ಸಮಯದಲ್ಲಿ ತಾವುಜನಸಾಮಾನ್ಯರ ಪರವಾಗಿ ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು.
ಸಮರ್ಥ ಪ್ರತಿಪಕ್ಷವಾಗಿ ಬಿಜೆಪಿ ಜನಸಾಮಾನ್ಯರ ಪರವಾಗಿ ಕೆಲಸಮಾಡಲಿದೆ ನಾಳೆಯಿಂದ ತಾವು ರಾಜ್ಯದ ಬರಗಾಲ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದು, ತಮ್ಮ ಪಕ್ಷದ ಎಲ್ಲಾ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಬರಗಾಲ ಪರಿಸ್ಥಿತಿಯ ಕುರಿತಂತೆ ಅಗತ್ಯ ದಾಖಲೆಗಳೊಂದಿಗೆ ವಿಧಾನಸಭೆಗೆ ಬರುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ಒಪ್ಪಬೇಕು:
ಮತ್ತೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು,ಪಕ್ಷದ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆಯಾಗಿದೆ. ಯಾರಿಗೆ ಇಷ್ಟ ಇದೆಯೋ ಇಲ್ಲವೋ ಗೊತ್ತಿಲ್ಲ. ಬಿಜೆಪಿ ಹೈಕಮಾಂಡ್ ಒಂದು ಬಾರಿ ತೀರ್ಮಾನ ಮಾಡಿದರೆ, ಅದಕ್ಕೆ ಎಲ್ಲರೂ ಒಪ್ಪಬೇಕು ಎಂದು ಹೇಳಿದರು.
ನಮ್ಮ ಪಕ್ಷದಲ್ಲಿ ಒಂದು ಬಾರಿ ರಾಜ್ಯಾಧ್ಯಕ್ಷರಾಗಿ ಘೋಷಣೆ ಮಾಡಿದ ನಂತರ ಮುಗೀತು. ಯತ್ನಾಳ್ ಅವರು ಹಿರಿಯ ನಾಯಕ. ಒಂದು ಬಾರಿ ಪಕ್ಷ ನಿರ್ಧಾರ ಮಾಡಿದ ಮೇಲೆ ಎಲ್ಲವನ್ನು ಸರಿ ಮಾಡಿಕೊಂಡು ಪಕ್ಷ ಮುನ್ನಡೆಸಬೇಕು ಹೀಗಾಗಿ ಎಲ್ಲ ಸರಿ ಮಾಡಿಕೊಂಡು ಹೋಗುವ ವಿಶ್ವಾಸವಿದೆ ಎಂದರು.
ವಿಜಯೇಂದ್ರ ಕಿರಿಯರು ಎಂಬುದನ್ನು ಒಪ್ಪಿಕೊಳ್ಳುವೆ. ಇಲ್ಲಿ ನನ್ನ ಅಥವಾ ಇನ್ನೊಬ್ಬರ ಇಷ್ಟ, ಕಷ್ಟ ಮುಖ್ಯವಲ್ಲ. ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರಬೇಕು. ವೈಯಕ್ತಿಕ ಅಭಿಪ್ರಾಯ ಏನೇ ಇದ್ದರೂ ರಾಷ್ಟ್ರೀಯ ಪಕ್ಷದಲ್ಲಿ ಅದು ಪರಿಗಣನೆಗೆ ಬರುವವುದಿಲ್ಲ ಎಂದು ತಿಳಿಸಿದರು.