ಬಾಗಲಕೋಟೆ, ನ.20- ಬಿಜೆಪಿ (BJP) ರಾಜ್ಯಾಧ್ಯಕ್ಷರ ನೇಮಕ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆಯ ನಂತರ ಅಸಮಾಧಾನ ತೀವ್ರ ಸ್ವರೂಪ ಪಡೆದುಕೊಂಡಿದ್ದು ಸ್ಪೋಟವಾಗುವುದು ಮಾತ್ರ ಬಾಕಿ ಇದೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರುನನಗೆ ಆ ಪಕ್ಷದಲ್ಲಿ ಬಹಳಷ್ಟು ಜನ ಸ್ನೇಹಿತರಿದ್ದಾರೆ. ಅಸಮಾಧಾನ ಯಾವಾಗ ಹೊರ ಬೀಳಲಿದೆಯೋ ಗೋತ್ತಿಲ್ಲ. ಜ್ವಾಲಾಮುಖಿ ಹೊರ ಬರುವುದಂತೂ ಖಚಿತ ಎಂದರು.
ಪಕ್ಷದ ರಾಜಾಧ್ಯಕ್ಷ ಸ್ಥಾನ ಮತ್ತು ವಿಧಾನ ಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ಎರಡನ್ನು ಮಲೆನಾಡು ಮತ್ತು ಬೆಂಗಳೂರಿಗೆ ನೀಡಲಾಗಿದೆ. ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ. ಅದರಲ್ಲೂ ಲಿಂಗಾಯಿತ ಸಮುದಾಯ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿದೆ. ದಾವಣೆಗೆರೆಯಿಂದ ಕಿತ್ತೂರು ಕರ್ನಾಟಕ ಭಾಗದವರೆಗೂ ಲಿಂಗಾಯಿತರು ಹೆಚ್ಚಿದ್ದಾರೆ. ಬಿಜೆಪಿಯಲ್ಲಿನ ಅಧಿಕಾರಗಳು ಬೆಂಗಳೂರು, ಶಿವಮೊಗ್ಗಕ್ಕೆ ಸೀಮಿತವಾಗಿವೆ. ಈಗ ನಡೆದಿರುವ ಆಯ್ಕೆ ಬಹಳಷ್ಟು ಮಂದಿಗೆ ಸಮಾಧಾನ ತಂದಿಲ್ಲ. ತಮಗಿಂತಲೂ ಕಿರಿಯರ ಕೈ ಕೆಳಗೆ ಹೇಗೆ ಕೆಲಸ ಮಾಡುವುದು ಎಂಬ ಹಿಂಜರಿಕೆ ಆ ಪಕ್ಷ ಬಹಳಷ್ಟು ನಾಯಕರಲ್ಲಿದೆ ಎಂದು ಹೇಳಿದರು
ಬಿಜೆಪಿಯಿಂದ ಬಹಳಷ್ಟು ನಾಯಕರು ಕಾಂಗ್ರೆಸ್‍ಗೆ ಬರುವ ಪ್ರಕ್ರಿಯೆ ಜನವರಿ 26ರ ನಂತರ ಸಕ್ರಿಯವಾಗಲಿದೆ. ಎಷ್ಟು ಜನ ಬರುತ್ತಾರೆ ಎಂದು ಕಾದು ನೋಡಿ. ಸದ್ಯಕ್ಕೆ ಯಾವುದೇ ಮುನ್ಸೂಚನೆ ನೀಡುವುದಿಲ್ಲ. ಜನವರಿ 26ರ ಬಳಿಕ ನಮ್ಮ ಚಟುವಟಿಕೆಗಳನ್ನು ಆರಂಭಿಸುತ್ತೇವೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಅಗತ್ಯವಾದ ಬ್ಲೂ ಪ್ರಿಂಟ್ ತಯಾರು ಮಾಡಿದ್ದೇವೆ ಎಂದು ಹೇಳಿದರು.
ನಾವು ಆಪರೇಷನ್ ಹಸ್ತ ಮಾಡುವುದಿಲ್ಲ. ಬಿಜೆಪಿಯಲ್ಲಿ (BJP) ತಿರಸ್ಕಾರಕ್ಕೆ ಒಳಗಾಗಿ, ನಮಗೆ ಗೌರವ ನೀಡುತ್ತಿಲ್ಲ. ಅವಹೇಳನಕಾರಿಯಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ನೋಂದು ನಮ್ಮ ಪಕ್ಷಕ್ಕೆ ಬರುವವರನ್ನು ಕರೆದುಕೊಂಡು ಗೌರವಯುತವಾಗಿ ನಡೆಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು
ಅಶೋಕ್ ಮತ್ತು ವಿಜಯೆಂದ್ರ ಜೋಡೆತ್ತುಗಳಂತೆ ಪಕ್ಷ ಕಟ್ಟುತ್ತೇವೆ ಎನ್ನುತ್ತಾರೆ. ಜೋಡೆತ್ತು ಅಷ್ಟೆ ಅಲ್ಲ, ಉತ್ತರ ಕರ್ನಾಟಕ ಭಾಗದಲ್ಲಿ ನಾಲ್ಕು ಎತ್ತುಗಳನ್ನು ಹೂಡಿ ನೇಗಿಲು ಹೂಳುವ ಪದ್ಧತಿ ಇದೆ. ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕು ಎತ್ತುಗಳನ್ನು ಹೂಡಿದರೂ ಹೊಲದಲ್ಲಿನ ಗಳೇ ಜಗ್ಗಲು ಆಗಲ್ಲ. ಆ ಶಕ್ತಿ ಬಿಜೆಪಿಗೆ ಇಲ್ಲ, ನೆಲ ಗಟ್ಟಿಯಾಗಿದೆ, ಬಿರುಸಾಗಿದೆ. ಅಲ್ಲಿ ಎರಡು ಎತ್ತುಗಳಿಗೆ ಜಗ್ಗುವ ಪರಿಸ್ಥಿತಿ ಉಳಿದಿಲ್ಲ. ಆ ನೇಗಿಲು ಜಗ್ಗ ಬೇಕಾದರೆ ಎಂಟತ್ತು ಎತ್ತುಗಳನ್ನು ಹೂಡಿದರೂ ಸಾಧ್ಯವಾಗುವುದಿಲ್ಲ ಎಂದರು.
ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಸಾಧನೆಗಾಗಿ ಅನ್ಯ ಪಕ್ಷಗಳಿಂದ ನಾಯಕರನ್ನು ಕರೆ ತರುವುದು ಸೇರಿದಂತೆ ರಾಜಕೀಯ ಧ್ರುವೀಕರಣಕ್ಕೆ ಜನವರಿ 26ರ ಬಳಿಕ ಚಾಲನೆ ನೀಡಲಾಗುತ್ತದೆ.ಅನ್ಯ ಪಕ್ಷಗಳ ಬಹಳಷ್ಟು ಜನ ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ, ಅವರನ್ನು ಇಲ್ಲಿಗೆ ಕರೆ ತಂದ ಮೇಲೆ ಅವರಿಗೆ ಸೂಕ್ತ ಮಾನ ನೀಡುವ ಬಗ್ಗೆಯೂ ಚಿಂತನೆ ಮಾಡಬೇಕಿದೆ. ಇಲ್ಲಿದ್ದವರಿಗೆ ಮನಸ್ಸಿಗೆ ನೋವು ಆಗಬಾರದು. ಹೊರಗಿನಿಂದ ಬಂದವರಿಗೆ ನೀಡಲು ಇಲ್ಲಿ ಸೂಕ್ತ ಸ್ಥಾನ ಮಾನ ಇರಬೇಕು. ಆ ನಿಟ್ಟಿನಲ್ಲಿ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.