ಬೆಂಗಳೂರು,ಡಿ.26 – ರಾಜ್ಯದ ಹಲವೆಡೆ ಸಾಂಕ್ರಾಮಿಕ ಕೋವಿಡ್ ವೈರಸ್ ಕಾಣಿಸಿಕೊಂಡಿದೆ.ಇದಕ್ಕೆ ಮುಂಜಾಗ್ರತೆಯೇ ಮದ್ದು ಎಂದು ಹೇಳಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೋವಿಡ್ ಸೋಂಕಿಗೆ ಒಳಗಾದವರಿಗೆ ಸರ್ಕಾರ ಏಳು ದಿನ ಹೋಂ ಐಸೋಲೇಷನ್ ಕಡ್ಡಾಯ ಎಂದು ಹೇಳಿದ್ದಾರೆ.
ಕೋವಿಡ್ ಸಂಪುಟ ಉಪಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ ಅವರು,ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ರೂಪಾಂತರ ತಳಿ ಜೆಎನ್.1 ಹೆಚ್ಚುತ್ತಿದೆಯಾದರೂ ಆತಂಕಪಡುವ ಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಹೊಸ ವರ್ಷದ ಸಂಭ್ರಮಾಚರಣೆಗೆ ಅಡ್ಡಿಯಾಗುವ ರೀತಿಯಲ್ಲಿ ಯಾವುದೇ ನಿರ್ಬಂಧ ಹೇರುವುದಿಲ್ಲ. ತಜ್ಞರ ಸಲಹೆಯ ಮೇರೆಗೆ ಹೊರಡಿಸಲಾಗಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರು ಜನದಟ್ಟಣಿಯಲ್ಲಿ ಸೇರದಂತೆ ತಮ್ಮನ್ನು ತಾವು ಸಾಧ್ಯವಾದಷ್ಟು ನಿರ್ಬಂಧ ಹೇರಿಕೊಳ್ಳಬೇಕು. ಜ್ವರ, ಕೆಮ್ಮು, ನೆಗಡಿ, ಶೀತ, ಗಂಟಲು ನೋವು ಬಂದರೆ,ವೈದ್ಯರ ಸಲಹೆ ಪಡೆದು ಮನೆಯಲ್ಲಿಯೇ ವಿಶ್ರಾಂತಿ ಪಡೆಯಬೇಕು.ಇದಕ್ಕೆ ಅನುಗುಣವಾಗಿ ಸೋಂಕು ಪೀಡಿತ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಬೇಕು. ಖಾಸಗಿ ವಲಯಕ್ಕೂ ನಿಯಮ ಅನ್ವಯವಾಗುತ್ತದೆ, ಕಡ್ಡಾಯವಾಗಿ ಉದ್ಯೋಗಿಗಳಿಗೆ ಕೋವಿಡ್ ರಜೆ ನೀಡಬೇಕು ಎಂದರು.
ಕೋವಿಡ್ ಲಕ್ಷಣಗಳಾದ, ಜ್ವರ, ಕೆಮ್ಮು ಮಕ್ಕಳಲ್ಲಿ ಕಂಡುಬಂದರೆ ಶಾಲೆಗೆ ಕಳುಹಿಸದೇ ಇರುವುದು ಉತ್ತಮ, ಮಕ್ಕಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ನಿರ್ಬಂಧ ಹಾಕುವುದು ಉತ್ತಮ.
ಹೊರಗೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶುಚಿತ್ವ ಕಾಪಾಡಿ, ಸ್ಯಾನಿಟೈಸರ್ ಬಳಸಿ ಎಂದರು.
ರಾಜ್ಯದಲ್ಲಿ ಜೆಎನ್.1 ಉಪತಳಿ ಹೆಚ್ಚಾಗುವ ಸಾಧ್ಯತೆಗಳಿವೆ. ನಿನ್ನೆಯ 60 ಸ್ಯಾಂಪಲ್ಸ್ ನಲ್ಲಿ 34 ಜೆಎನ್.1 ಪ್ರಕರಣಗಳು ಪತ್ತೆಯಾಗಿವೆ.ಪರೀಕ್ಷೆ ಪ್ರಮಾಣ ಹೆಚ್ಚು ಮಾಡಿದಷ್ಟು ಇದರ ಹರಡುವಿಕೆ ತಿಳಿಯುತ್ತದೆ ಹೀಗಾಗಿ ಇಂದಿನಿಂದ ನಿತ್ಯ 5 ಸಾವಿರ ಟೆಸ್ಟ್ ಮಾಡುತ್ತೇವೆ ಎಂದು ತಿಳಿಸಿದರು
ಹಿಂದೆ ಆದ ತಪ್ಪು ಮರುಕಳಿಸಬಾರದು ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಆಕ್ಸಿಜನ್ ಕೊರತೆಯಾಗದಂತೆ ಎಚ್ಚರವಹಿಸಲು ಸೂಚಿಸಲಾಗಿದೆ.
ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಫ್ಲೂ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಅಗತ್ಯ ಇರುವವರಿಗೆ ಕೋವಿಡ್ ಮುನ್ನೆಚ್ಚರಿಕೆ ಡೋಸ್ ಕೂಡ ನೀಡಲಾಗುವುದು. ಇದಕ್ಕಾಗಿ 30,000 ಡೋಸ್ ಕೋವಿಡ್ ಲಸಿಕೆ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದರು.
ನಾಲ್ಕು ಆಮ್ಲಜನಕ ಸಂಚಾರಿ ಘಟಕಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲಿ ಸನ್ನದ್ಧತೆ ಪರೀಕ್ಷಿಸಲಾಗುವುದು. ಕೋವಿಡ್ ವೈರಾಣುವಿನ ವಂಶವಾಹಿ ಸಂರಚನೆ ಪರೀಕ್ಷೆ ಹೆಚ್ಚಳಕ್ಕೂ ತೀರ್ಮಾನಿಸಲಾಗಿದೆ ಎಂದರು.