ವಿಶ್ವದಾದ್ಯಂತ ಪ್ರೇಮಿಗಳ ದಿನಾಚರಣೆ ಎಂದು ಪ್ರೀತಿ ವ್ಯಕ್ತ ಪಡಿಸುತ್ತಿರುವ ಇಂದು, ಫೆಬ್ರವರಿ 14ರಂದು, ರಾಜಧಾನಿ ಬೆಂಗಳೂರಿನ MG ರಸ್ತೆ, ಬ್ರಿಗೇಡ್ ರಸ್ತೆ (Brigade road) ಯಲ್ಲಿ ಮಟ ಮಟ ಮಧ್ಯಾಹ್ನ ಒಂದಿಪ್ಪತ್ತು ಜನ ಯುವಕರ ಗುಂಪು ಮೋದಿ ಹಾಗೂ ಅದಾನಿ ಅವರ ಚಿತ್ರಗಳಿರುವ ಫಲಕಗಳನ್ನು ಹಿಡಿದು ಗಮನ ಸೆಳೆಯಲು ಬೆವರಿಳಿಸಿದರು. ಯುವಕ ಯುವತಿಯರು ಪರಸ್ಪರ ಪ್ರೀತಿ ವ್ಯಕ್ತಪಡಿಸುವುದು ಇಂದಿನ ವಿಶೇಷ. ಹಾಗೆಯೇ ಸಿಂಗಲ್ ಇದ್ದೋ, ಡಬಲ್ ಇದ್ದೋ ತಮ್ಮ ಎಕ್ಸ್ ಅನ್ನು ಮರೆಯಲಾರದವರು ಅವರನ್ನು ಜ್ಞಾಪಿಸಿಕೊಳ್ಳುತ್ತಾ ಖುಷಿಯಿಂದ ಅಥವ ಬೇಸರದಿಂದ ದಿನ ಕಳೆಯುವುದು ವಾಡಿಕೆ.
ಆದರೆ ಯಾರದೋ ಇಬ್ಬರ ಪ್ರೀತಿಯನ್ನು ಮೂರನೇಯವರಾದ ಅವರ ವಿರೋಧಿಗಳು ಸಂಭ್ರಮಿಸುತ್ತ, ಬಿಸಿಲಿನ ಬೇಗೆಯಲ್ಲಿ ಶಾಂತವಾಗಿ, ಕೈಯಲ್ಲಿ ರೆಡ್ ರೋಸ್ ಹಿಡಿದು, ಸೈಲೆಂಟ್ ಆಗಿ ಹೆಜ್ಜೆ ಹಾಕುವುದನ್ನು ಕಂಡ ಕೆಲವರಿಗೆ ಆಶ್ಚರ್ಯಕ್ಕಿಂತ ಅನುಕಂಪ ಬಂದಿದ್ದೆ ಹೆಚ್ಚು ಎನ್ನುವುದು ಅಲ್ಲಿ ಹಾದುಹೋಗುತ್ತಿದ್ದ ಪಾದಚಾರಿಗಳ ಹಾಗು ಸ್ಥಳೀಯರ ಅಲ್ಪಆಸಕ್ತಿ, ಅಷ್ಟೇ ಸೈಲೆಂಟ್ ಆಗಿ ವ್ಯಕ್ತಪಡಿಸಿದಂತಿತ್ತು.
ಕರ್ನಾಟಕ ಯುವ ಕಾಂಗ್ರೆಸ್ ನ ಅಧ್ಯಕ್ಷ ಮೊಹಮ್ಮದ್ ನಳಪಾಡ್ (Mohammed Nalapad) ಅವರ ಮುಂದಾಳತ್ವದಲ್ಲಿ ನಡೆದ Modi – Adani ಪ್ರೇಮಾಚರಣೆ ಹಲವು ಪ್ರಶ್ನೆಗಳ ಆಗರವಾಗಿದ್ದ ಹಾಗಿತ್ತು. ನಳಪಾಡ್ ಅವರ Modi – Adani ನಂಟಿನ ಬಗೆಗಿನ ಹೇಳಿಕೆಗಳು, ಮೋದಿ ಮಾರ್ತಾರೆ, ಅದಾನಿ ಕೊಂಡುಕೊಳ್ತಾರೆ ಅನ್ನುವ ಆರೋಪಗಳು, ಅವರಿಬ್ಬರ ಪ್ರೀತಿಯಿಂದ ದೇಶದ ಸಂಪತ್ತು, ಜನಸಾಮಾನ್ಯರ ಹಣ ಸಂಪೂರ್ಣ ನಷ್ಟ ಆಗಿದೆ ಎನ್ನುವ ವಿಚಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಅಪಕ್ವ ಪ್ರಯೋಗದ ಬಡಪಾಯಿ ಪ್ರದರ್ಶನ ಇದ್ದಂತಿತ್ತು ಎನ್ನುವುದು ಅಲ್ಲಿ ಕಂಡ ಬೆರಳೆಣಿಕೆಯ ಜನರು ಇವರ ಪ್ರದರ್ಶನದ ಬಗ್ಗೆ ಗಾಳಿಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ.
ಪ್ರೀತಿ ಪ್ರೇಮದ ಗುಂಗಿನಲ್ಲೇ ಇರುವ ಯುವಕರಿಗೆ ನಿಜವಾದ ರಾಜಕಾರಣ, ನಾಯಕತ್ವ ಕಾಣುವುದು ಯಾವಾಗ, ಕಷ್ಟಗಳ ಮೇಲೆ ಕಷ್ಟಗಳು ಜನಸಾಮಾನ್ಯರನ್ನು ಕಂಗೆಡಿಸಿರುವಾಗ ಒಂದು ರಾಷ್ಟ್ರೀಯ ಪಕ್ಷ ಎಂದು ಹೇಳಿಕೊಳ್ಳುವ, Congress ನ ರಾಜ್ಯ ಮಟ್ಟದ ಸ್ಥಾನ ಅಲಂಕರಿಸುವ ಪದಾಧಿಕಾರಿಯೊಬ್ಬರು ತಮ್ಮ ಬೆರಳೆಣಿಕೆಯ ಹಿಂಬಾಲಕರೊಂದಿಗೆ ಉತ್ತಮ ಪಾದಚಾರಿ ಮಾರ್ಗ ಇರುವ, ಪ್ರೀತಿಯ ಸಂದೇಶವನ್ನು ಸಾರಿದ ಮಹಾತ್ಮ ಗಾಂಧಿ ಅವರ ಹೆಸರಿನ ರಸ್ತೆಯ ಮೇಲೆ ನಡೆದದ್ದು ಆ ಪಕ್ಷದ ಹಿರಿಯ ನಾಯಕರ ಗಮನಕ್ಕೂ ಬಂತೋ ಇಲ್ಲವೋ ಎಂದೆನಿಸಿದ್ದು ಉತ್ಪ್ರೇಕ್ಷೆಯಲ್ಲ ಎನ್ನುವಂತಿತ್ತು.
ಒಟ್ಟಿನಲ್ಲಿ ದ್ವೇಷ ಮಾಡಿ ಮಾಡಿ, ದ್ವೇಷಿಸಿದವರನ್ನು ಏನೂ ಮಾಡಲಾಗದಾದಾಗ, ದ್ವೇಷಿಸಿದವರ ಮೇಲೆಯೇ ಪ್ರೀತಿ ಹುಟ್ಟುತ್ತದೆ ಎನ್ನುವ ಮಾತನ್ನು ಕೇಳಿ, ನೋಡಿ, ಪ್ರೀತಿ ಉಕ್ಕಿ ಹರಿಯುವಾಗ ಕೈಯಲ್ಲಿ ಗುಲಾಬಿ ಇದ್ದರೂ ದೂರದ ಕಮಲದ ಮೇಲಿನ ಸೆಳೆತದಿಂದ ಕೆಸರೆರಚಲು ಬಿಳಿ ಬಟ್ಟೆ ತೊಟ್ಟು ಹೋಗುವುದು ಎಷ್ಟು ಸಮಂಜಸ ಎಂದು ಇದನ್ನು ನೋಡಿದ ಜನಸಾಮಾನ್ಯರ ಮನಸ್ಸಿನಲ್ಲಿ ಮೂಡಿದ್ದಂತೂ ನಿಜ ಎನ್ನಬಹುದು. ನರೇಂದ್ರನ ಹಿಂಸೆಗೆ ಮೊಹಮ್ಮದನ ಆವೇಶಕ್ಕೆ ಸಂತ ವ್ಯಾಲಂಟೈನ್ ನೂ ಸಹ ಕಾಲಕ್ಕೆ ತಕ್ಕ ಹಾಗೆ ಹೊಸದೊಂದು ಬಾಣವನ್ನು ಪ್ರಯೋಗಿಸಿದಂತಿತ್ತು ಇಂದಿನ ವಾತಾವರಣ ಎನ್ನುವುದು ಬ್ರಿಗೇಡ್ ರಸ್ತೆಯ ಕೆಲವು ಜಾಣರು ಆಡಿಕೊಂಡಂಥ ಮಾತು ಸತ್ಯವೇ ಎಂದು ಯೋಚಿಸಬೇಕೇ ಅಥವಾ ಪ್ರೀತಿಯ ನಶೆ ರಾತ್ರಿ ಬೆಳಗಾಗುವುದರೊಳಗೆ ಇಳಿಯುತ್ತದೆ ಎಂದು ತಿಳಿಯಬೇಕೆ ಎಂದು ಯೋಚಿಸಬೇಕು.

