ನವದೆಹಲಿ,ಫೆ.21-
ಭಯೋತ್ಪಾದನೆ ಚಟುವಟಿಕೆ ಹಾಗೂ ಗೂಂಡಾಗಿರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರ ಭಾರತದ 8 ರಾಜ್ಯಗಳ 70ಕ್ಕೂ ಹೆಚ್ಚು ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.
ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ, ಛಂಡೀಗಢ ಮತ್ತು ಮಧ್ಯಪ್ರದೇಶಗಳಲ್ಲಿ ಗೂಂಡಾಗಿರಿ, ದರೋಡೆಕೋರರ ಉಪಟಳ ಹೆಚ್ಚಾದ ಬಗ್ಗೆ ದೂರುಗಳು ದಾಖಲಾಗಿದ್ದು,ಇದರ ವಿರುದ್ಧ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಪಿಲಿಭಿತ್, ಪ್ರತಾಪ್‌ಗಢ ಮತ್ತು ಮತ್ತಿತರ ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಪಂಜಾಬ್ ಗಾಯಕ ಸಿಧು ಮೂಸೆವಾಲಾ (Sidhu Moose Wala) ಹತ್ಯೆ ಆರೋಪಿಗಳಾದ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಮುಂದುವರಿದಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಪಂಜಾಬ್‌ನ ರೂಪನಗರ (Rupnagar, Punjab) ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಈ ಗ್ಯಾಂಗ್‌ನ ನಾಲ್ವರು ಸದಸ್ಯರನ್ನು ಬಂಧಿಸಲಾಗಿತ್ತು. ಗ್ಯಾಂಗ್ಸ್ಟರ್ಗಳ ವಿರುದ್ಧ ಕೊಲೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ವಾರದ ಹಿಂದಷ್ಟೇ ಸಿರ್ಸಾ (Sirsa) ಮೂಲದ ಲಾಜಿಸ್ಟಿಕ್ಸ್ ಪೂರೈಕೆದಾರ ಮತ್ತು ಕುಖ್ಯಾತ ರೌಡಿಯೊಬ್ಬನನ್ನು ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ವೇಳೆ ಬಂಧಿಸಲಾಗಿತ್ತು. ದೇಶ ಸೇರಿದಂತೆ ವಿದೇಶಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿರುವ ಕ್ರಿಮಿನಲ್ ಗ್ಯಾಂಗ್‌ಸ್ಟರ್‌ಗಳನ್ನು NIA ಗುರುತಿಸಿದೆ. ಶಸ್ತ್ರಾಸ್ತ್ರ ಪೂರೈಕೆದಾರನ ಬಂಧನ ಬಳಿಕ ಹರಿಯಾಣ (Haryana) ಮತ್ತು ಪಂಜಾಬ್ (Punjab) ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ, ಕ್ರಿಮಿನಲ್ ಗ್ಯಾಂಗ್‌ಸ್ಟರ್‌ಗಳನ್ನು ಬೇರುಸಹಿತ ಕಿತ್ತುಹಾಕುವ ಕ್ರಮ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕಳೆದ ವರ್ಷ ನವೆಂಬರ್‌ನಲ್ಲಿ NIA ಪಂಜಾಬ್‌ನ ತರನ್ತರನ್, ಫಜಿಲ್ಕಾ, ಲೂಧಿಯಾನ, ಮೊಹಾಲಿ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ವ್ಯಾಪಕ ದಾಳಿ ನಡೆಸಿತ್ತು. ಆ ಸಮಯದಲ್ಲಿ ರಾಜಸ್ಥಾನ (Rajasthan) ಮತ್ತು ದೆಹಲಿ (Delhi) ಯ ಭಾಗಗಳಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಕ್ರಿಮಿನಲ್ ಚಟುವಟಿಕೆ, ಭಯೋತ್ಪಾದಕ ಜಾಲವನ್ನು ಮಟ್ಟಹಾಕಲು ಮತ್ತು ಶಸ್ತ್ರಾಸ್ತ್ರ ಪೂರೈಕೆದಾರರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ.
ದಕ್ಷಿಣ ಭಾರತದಲ್ಲಿ ನಡೆದಿದ್ದ ದಾಳಿ:
ಕೆಲ ದಿನಗಳ ಹಿಂದೆ ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ NIA ದಾಳಿ ಮಾಡಿತ್ತು. ಕೇರಳಧ ಕೊಯಮತ್ತೂರು ಕಾರ್ ಬಾಂಬ್ (Coimbatore car blast) , ಕರ್ನಾಟಕದ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ (Mangalore cooker bomb blast) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಮಿಂಚಿನ ದಾಳಿ ನಡೆಸಿತ್ತು.
2022 ರ ಅಕ್ಟೋಬರ್ 23 ರಂದು ತಮಿಳುನಾಡಿನ ಕೊಯಮತ್ತೂರು, ನವೆಂಬರ್ 19 ರಂದು ಕರ್ನಾಟಕದ ಮಂಗಳೂರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದವು. ಇವೆರಡೂ ಪ್ರಕರಣಗಳ ಹಿಂದೆ ಉಗ್ರರ ಕೈವಾಡ ಶಂಕೆಯ ಮೇಲೆ NIA ಈ ದಾಳಿ ನಡೆಸಿತ್ತು.
ತಮಿಳುನಾಡಿನ ಕೊಡುಂಗಯ್ಯೂರು ಮತ್ತು ಕೇರಳದ ಮನ್ನಾಡಿ ಸೇರಿದಂತೆ ಮೂರು ರಾಜ್ಯಗಳ ಸುಮಾರು 45 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು. ಕಳೆದ ವರ್ಷ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕೊಟ್ಟೈ ಈಶ್ವರನ್ ದೇವಾಲಯದ ಮುಂಭಾಗದಲ್ಲಿ ಸ್ಫೋಟಕಗಳನ್ನು ತುಂಬಿದ ಕಾರಿನಲ್ಲಿ ಬಾಂಬ್ ಸ್ಫೋಟವಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ 11 ಆರೋಪಿಗಳನ್ನು ಬಂಧಿಸಲಾಗಿದೆ.