ಬೆಂಗಳೂರು, ಮೇ 21- ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ನಿರೀಕ್ಷೆಗೂ ಮೀರಿ ಮತದಾರರು ನೀಡಿದ ತೀರ್ಪಿನಿಂದ ಖುಷಿಯಾಗಿ ಸರ್ಕಾರ ರಚಿಸಲಾಗಿದೆ.
ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ನಡೆದ ಹಗ್ಗ ಜಗ್ಗಾಟದ ಬೆನ್ನಲ್ಲೇ ಇದೀಗ ವಿಧಾನಸಭೆಯ ಸಭಾಧ್ಯಕ್ಷರಿಗಾಗಿ ಹುಡುಕಾಟ ನಡೆದಿದೆ.
ಕಾನೂನು ಪದವಿಧರರಾಗಿರುವ ಹಾಗೂ ಹಿರಿಯರಾಗಿದ್ದು ಸದನದ ನಡಾವಳಿಗಳ ಬಗ್ಗೆ ಅನುಭವ ಇರುವ ಹಲವು ನಾಯಕರು ಕಾಂಗ್ರೆಸ್ ನಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ ಆದರೆ ಈ ಯಾರೊಬ್ಬರೂ ಸಭಾಧ್ಯಕ್ಷರಾಗಲು ಒಪ್ಪುತ್ತಿಲ್ಲ.
ಶಾಸನಸಭೆಯಲ್ಲಿ ಅತ್ಯಂತ ಹಿರಿಯ ಶಾಸಕರು ಆಗಿರುವ ಆರ್ ವಿ ದೇಶಪಾಂಡೆ ಅನುಭವಿ ರಾಜಕಾರಣಿಗಳಾದ ಟಿ ಬಿ ಜಯಚಂದ್ರ ಬಿ ಆರ್ ಪಾಟೀಲ್ ಎಚ್ ಕೆ ಪಾಟೀಲ್ ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವರನ್ನು ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದರೂ ಯಾರೂ ಸಮ್ಮತಿ ನೀಡುತ್ತಿಲ್ಲ
ಸಭಾಧ್ಯಕ್ಷರ ಹುದ್ದೆಯನ್ನು ಒಪ್ಪಿಕೊಳ್ಳುವಂತೆ ಕಾಂಗ್ರೆಸ್ ನಾಯಕರು ಹಿರಿಯ ಶಾಸಕರನ್ನು ಮನವೊಲಿಸಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಬಹುತೇಕರು ಸಂಪುಟದಲ್ಲೇ ಅವಕಾಶ ಬಯಸುತ್ತಿದ್ದಾರೆ.
ಅದರಲ್ಲೂ ಹೆಚ್‌ಕೆ ಪಾಟೀಲ್ ಮತ್ತು ಆರ್ ವಿ ದೇಶಪಾಂಡೆ ಅವರಂತೂ ತಮಗೆ ಮಂತ್ರಿ ಸ್ಥಾನ ಕೊಡದಿದ್ದರೂ ಬೇಡ ಶಾಸಕರಾಗಿ ಮುಂದುವರೆಯುತ್ತೇವೆ ಆದರೆ ವಿಧಾನಸಭೆಯ ಅಧ್ಯಕ್ಷರ ಹುದ್ದೆ ಮಾತ್ರ ಬೇಡ ಎನ್ನುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರತಿಪಕ್ಷದ ಉಪನಯಕರಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಅನುಭವ ಹೊಂದಿರುವ ಟಿ.ಬಿ.ಜಯಚಂದ್ರ ಅವರನ್ನು ಸಭಾಧ್ಯಕ್ಷರಾಗಿ ನೇಮಕ ಮಾಡಲು ಮುಖ್ಯಮಂತ್ರಿ ಸೇರಿದಂತೆ ಹಲವರು ಒಲವು ಹೊಂದಿದ್ದಾರೆ ಆದರೆ ತಾವು ಒಕ್ಕಲಿಗ ಕುಂಚಿಟಿಗ ಸಮುದಾಯದ ಏಕೈಕ ಪ್ರತಿನಿಧಿ ಹೀಗಾಗಿ ತಮಗೆ ಮಂತ್ರಿ ಸ್ಥಾನ ಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.
ಆರ್.ವಿ.ದೇಶಪಾಂಡೆ ಅವರು ಎಂಟು ಬಾರಿ ಶಾಸಕರಾಗಿದ್ದು, ವಿಧಾನಸಭೆಯಲ್ಲಿ ಅತ್ಯಂತ ಹಿರಿಯರೆಂದು ಪರಿಗಣಿಸಲ್ಪಟ್ಟಿದ್ದಾರೆ. ಬ್ರಾಹ್ಮಣ ಸಮುದಾಯದ ಇವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಅಥವಾ ಅದಕ್ಕಿಂತಲೂ ಉನ್ನತ ಹುದ್ದೆ ನೀಡಬೇಕಿದೆ. ಅದಕ್ಕಾಗಿ ಸಭಾಧ್ಯಕ್ಷರನ್ನಾಗಿ ಮಾಡುವುದರಿಂದ ಗೌರವ ನೀಡಿದಂತಾಗುತ್ತದೆ ಎಂದು ಹೇಳಲಾಗುತ್ತಿದೆ.
ಆದರೆ ಈ ಪ್ರಸ್ತಾವವನ್ನು ತಿರಸ್ಕರಿಸಿರುವ ಅವರು ತಾವು ಆರಂಭದಿಂದಲೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ನಿರ್ವಹಣೆ ಮಾಡಿ ಪರಿಣಿತಿ ಪಡೆದಿದ್ದೇನೆ. ಇದು ತಮ್ಮ ಕೊನೆಯ ಚುನಾವಣೆ ಯಾಗಿದ್ದು ಮತ್ತೊಮ್ಮೆ ಸಚಿವರಾಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಹರಸಾಹಸ ಪಟ್ಟು ಅವರನ್ನು ಮನವೊಲಿಸಿ ಹಂಗಾಮಿ ಸ್ಪೀಕರ್ ಸ್ಥಾನದಲ್ಲಿ ಕೂರಿಸಲಾಗಿದೆ. ನಾಳೆಯಿಂದ ನಡೆಯುವ ಮೂರು ದಿನಗಳ ವಿಧಾನಸಭೆಯ ಕಲಾಪಕ್ಕೆ ದೇಶಪಾಂಡೆ ಹಂಗಾಮಿ ಸ್ಪೀಕರ್ ಆಗಿ ಕೆಲಸ ನಿರ್ವಹಿಸಲಿದ್ದಾರೆ.
ಹೀಗಾಗಿ ವಿಧಾನಸಭೆಯ ಅಧ್ಯಕ್ಷರ ಆಯ್ಕೆ ಕಾಂಗ್ರೆಸ್ ನಾಯಕರಿಗೆ ತಲೆನೋವು ತಂದಿದೆ.
Previous Articleಮೋದಿ ಸಮಸ್ಯೆ ಒಡ್ಡುತ್ತಿದ್ದಾರೆ ಎಂದ ಬೈಡೆನ್
Next Article Times Group ವಿಭಜನೆ!