ಬೆಂಗಳೂರು.
ರಾಜ್ಯ ವಿಧಾನಸಭೆ ಚುನಾವಣೆಗೆ ಭರದ ಸಿದ್ಧತೆ ಆರಂಭಿಸಿರುವ Congress, ಚುನಾವಣಾ ವೇಳಾಪಟ್ಟಿ ಪ್ರಕಟಣೆಗೂ ಮೊದಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬೇಕೆಂಬ ಪ್ರಯತ್ನ ಆರಂಭಿಸಿದೆ. ಆದರೆ, ಅದಕ್ಕೆ ಆರಂಭದಲ್ಲೇ ದೊಡ್ಡ ಅತಂಕ ಎದುರಾಗಿದೆ. ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಹಲವು ಸಮೀಕ್ಷೆಗಳು ತಿಳಿಸಿದ್ದು, ಜನಾಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.ಹೀಗಾಗಿ ಪಕ್ಷದ ಟಿಕೆಟ್ ಗಾಗಿ ಭಾರಿ ಪೈಪೋಟಿ ಉಂಟಾಗಿದ್ದು, ಸರ್ವಾನುಮತದ ಸಮರ್ಥ ಅಭ್ಯರ್ಥಿಗಳ ಆಯ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಹಿರಿಯ ನಾಯಕರೆನಿಸಿಕೊಂಡ ಮಾಜಿ ಸಂಸದರುಗಳು ವಿಧಾನಸಭೆಗೆ ಸ್ಪರ್ಧಿಸಲು ಪಟ್ಟು ಹಿಡಿದಿದ್ದು, ಒತ್ತಡದ ಮಾರ್ಗ ಅನುಸರಿಸುತ್ತಿರುವುದು ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
KPCC ಕಾರ್ಯಾಧ್ಯಕ್ಷರಾದ ಚಾಮರಾಜನಗರ ಮಾಜಿ ಸಂಸದ ಆರ್.ಧೃವನಾರಾಯಣ್ (R. Dhruvanarayan), ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ(M Chandrappa) ಮತ್ತು ರಾಯಚೂರು ಮಾಜಿ ಸಂಸದ ಬಿ.ವಿ.ನಾಯಕ್ (B. V. Nayak), ಕೋಲಾರದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ (K.H. Muniyappa), ಬಳ್ಳಾರಿಯ ಮಾಜಿ ಸಂಸದ ವಿ.ಎಸ್.ಉಗ್ರಪ್ಪ (V. S. Ugrappa) ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧೆಮಾಡಲು ಉತ್ಸುಕರಾಗಿದ್ದು, ತಮಗೆ ಟಿಕೆಟ್ ನೀಡುವಂತೆ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು, ಇದೀಗ ಒತ್ತಡದ ತಂತ್ರ ಹೇರುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಅಥವಾ ಪ್ರಭಾವಿ ಸಚಿವರಾಗುವ ಉದ್ದೇಶದಿಂದ ಮುನಿಯಪ್ಪನವರು ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಅಭಿಲಾಷೆ ಹೊಂದಿದ್ದಾರೆನ್ನಲಾಗಿದೆ.
ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು BJP ನೇತೃತ್ವದ NDA ಸರ್ಕಾರವನ್ನ ಮಣಿಸಿ ಅಧಿಕಾರಕ್ಕೆ ಬರುವುದು ಕಷ್ಟಕರ ಎನ್ನುವ ರಾಜಕೀಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ವಿದಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಪಕ್ಷದ ಟಿಕೆಟ್ ಗಾಗಿ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ಕಾಂಗ್ರೆಸ್ ಮುಖಂಡರಲ್ಲಿ ಒತ್ತಡ ಹೇರುತ್ತಿದ್ದಾರೆನ್ನಲಾಗಿದೆ. ಇದು ಹೊಸಬರಿಗೆ ಅವಕಾಶ ಕೊಡಬೇಕು, ಯುವ ಮುಖಗಳಿಗೆ ಆದ್ಯತೆ ನೀಡಬೇಕು ಎಂಬ ಹೈಕಮಾಂಡ್ ನಿಲುವಿಗೆ ದೊಡ್ಡ ಅಡ್ಡಿಯುಂಟು ಮಾಡಿದೆ ಎನ್ನಲಾಗಿದೆ.