ಮಾತು ಮನೆ ಕೆಡಿಸಿದರೆ ತೂತು ಒಲೆ ಕೆಡಿಸಿತು ಎನ್ನುವುದು ಸಾರ್ವಕಾಲಿಕ ಸತ್ಯವಾದ ನಾಣ್ನುಡಿ.ಈ ಮಾತು ಇದೀಗ ರಾಜ್ಯದ ಕಾಂಗ್ರೆಸ್ ಶಾಸಕರೊಬ್ಬರ ನಡವಳಿಕೆಯನ್ನು ಗಮನಿಸಿದಾಗ ತಟ್ಟನೆ ನೆನಪಿಗೆ ಬರುತ್ತದೆ ಅಷ್ಟೇ ಅಲ್ಲ ಈ ನಾಣ್ನುಡಿ ಸತ್ಯವಾಗುವ ಕಾಲ ಹೆಚ್ಚು ದೂರವಿಲ್ಲ ಅನ್ನಿಸುತ್ತದೆ.
ಇಡೀ ರಾಜ್ಯ ಚಿಕ್ಕಬಳ್ಳಾಪುರ ಕ್ಷೇತ್ರದ ಕಡೆ ನೋಡುವಂತೆ ಮಾಡಿದ ಶಾಸಕ ಪ್ರದೀಪ್ ಈಶ್ವರ್,ಈಗ ತಮ್ಮದೇ ಆದ ನಡವಳಿಕೆಯ ಮೂಲಕ ಸುದ್ದಿಯಾಗುತ್ತಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಎನಿಸಿದ ಸಚಿವ ಡಾ ಕೆ ಸುಧಾಕರ್ ಅವರನ್ನು ಸೋಲಿಸಿರುವ ಪ್ರದೀಪ್ ಈಶ್ವರ್. ಏಳೆಂಟು ವರ್ಷಗಳ ಹಿಂದೆ ಚಿಕ್ಕ ಬಳ್ಳಾಪುರ ನಗರದಲ್ಲಿ ಸಾಮಾನ್ಯನಾಗಿ ಓಡಾಡಿಕೊಂಡಿದ್ದ ಹುಡುಗ. ವಿಧನಾಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಭಾವಿ ಸಚಿವರನ್ನು ಮಣಿಸಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯವೇ ಹುಬ್ಬೇರಿಸುವಂತೆ ಮಾಡಿದರು
ಕೆ ಸುಧಾಕರ್ ತವರೂರು ಪೆರೇಸಂದ್ರದವರೇ ಆದ ಪ್ರದೀಪ್ ಈಶ್ವರ್ ಚಿಕ್ಕ ವಯಸ್ಸಲ್ಲೇ ಹೆತ್ತವರನ್ನು ಕಳೆದುಕೊಂಡು ಕಷ್ಟದಲ್ಲೇ ಬೆಳೆದರು. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಪಡೆದ ನಂತರ ನಗರದ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೋಧಕ ವೃತ್ತಿ ಆರಿಸಿಕೊಂಡರು
ಪ್ರದೀಪ್ ಈಶ್ವರ್ ಮೊದಲು ಕಾಣಿಸಿಕೊಂಡಿದ್ದು 2016ರಲ್ಲಿ. ದೇವನಹಳ್ಳಿ ಬಳಿಯ ವಿಜಯಪುರವನ್ನು ತಾಲೂಕು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆ ವಿಫಲವಾದ ಬಳಿಕ ಸ್ಥಳೀಯ ಟಿವಿ ಚಾನೆಲ್ ಒಂದರಲ್ಲಿ ನಿರೂಪಕರಾಗಿ ಕೆಲಸ ಆರಂಭಿಸಿದರು.
ಇಂತಹ ಹಿನ್ನೆಲೆಯೊಂದಿಗೆ ರಾಜಕಾರಣ ಪ್ರವೇಶಿಸಿ ರಾಜಕೀಯ ಪಂಡಿತರ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗು ಮಾಡಿ ಶಾಸಕರಾಗಿ ಆಯ್ಕೆಯಾದರು.
ಶಾಸಕನಾಗಿ ಆಯ್ಕೆಯಾಗುತ್ತಿದ್ದಂತೆ ತಮ್ಮ ಸರಳ ಹಾಗೂ ವಿಶೇಷ ಎನಿಸುವ ನಡವಳಿಕೆ ಮೂಲಕ ಗಮನಸೆಳೆದ ಪ್ರದೀಪ್ ಈಶ್ವರ್ ನಾನು ದ್ವೇಷ ರಾಜಕಾರಣ ಮಾಡಲ್ಲ. ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತೇನೆ. ನಗರದಲ್ಲಿ ಮನೆ ಮಾಡಲ್ಲ. ಪ್ರತಿ ದಿನ 4 ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯಷ್ಟೇ ನನ್ನ ಉದ್ದೇಶ’ ಎಂದರು.
ಅದರಂತೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡರು.ಈ ವೇಳೆ ಜನಸಾಮಾನ್ಯರ ಸಮಸ್ಯೆಗಳ ಕುರಿತು ಅವರು ವ್ಯಕ್ತಪಡಿಸಿದ ಸ್ಪಂದನೆ ಜನ ಮೆಚ್ಚುಗೆಗೆ ಪಾತ್ರವಾಯಿತು. ಇದನ್ನು ಕಂಡ ಪ್ರದೀಪ್ ಈಶ್ವರ್ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುವ ಭರದಲ್ಲಿ ಆಡುತ್ತಿರುವ ಮಾತುಗಳು ತಾಳ-ಮೇಳವಿಲ್ಲದಂತೆ ಕಂಡುಬರುತ್ತಿವೆ .
ಜನಸಾಮಾನ್ಯರ ಕೆಲಸ ಮಾಡಿ ಕೊಡುವ ಹೆಸರಿನಲ್ಲಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುವುದು ಜನಸಾಮಾನ್ಯರ ಮುಂದೆ ಅವರನ್ನು ಕೆಲಸಕ್ಕೆ ಬಾರದವರ ರೀತಿಯಲ್ಲಿ ಚಿತ್ರಿಸುವುದು ಒಳ್ಳೆಯ ನಡವಳಿಕೆಯಲ್ಲ. ಶಾಸಕ ಜನಪ್ರತಿನಿಧಿ ಅವರೆಂದಿಗೂ ಕಾರ್ಯಾಂಗವಾಗಲು ಸಾಧ್ಯವಿಲ್ಲ ತಮ್ಮ ಕ್ಷೇತ್ರದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನಸಾಮಾನ್ಯರ ಕೆಲಸ ಮಾಡಿಕೊಡುವುದಷ್ಟೇ ಶಾಸಕರ ಕರ್ತವ್ಯ.
ಇಂತಹ ಕರ್ತವ್ಯ ಪಾಲನೆಯ ಸಮಯದಲ್ಲಿ ಯಾವುದಾದರೂ ಅಧಿಕಾರಿ ಮಾತು ಕೇಳಲಿಲ್ಲ ಅಥವಾ ಜನಸಾಮಾನ್ಯರಿಗೆ ಸ್ಪಂದಿಸಲಿಲ್ಲ ಎಂದಾದರೆ ಅವರನ್ನು ವರ್ಗಾವಣೆ ಮಾಡಿಸಬಹುದಷ್ಟೇ. ಒಂದು ವರ್ಷದಲ್ಲಿ ಒಬ್ಬ ಶಾಸಕ ಗರಿಷ್ಠ ಎಂದರೆ ಸುಮಾರು 20 ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಬಹುದಷ್ಟೇ ಅದಕ್ಕಿಂತ ಹೆಚ್ಚು ಮಾಡಿಸಲು ಸಾಧ್ಯವಿಲ್ಲ ಹಾಗೆಯೇ ವರ್ಗಾವಣೆ ಎಲ್ಲದಕ್ಕೂ ಪರಿಹಾರವಲ್ಲ.
ಈ ಸತ್ಯವನ್ನು ಹೊಸದಾಗಿ ಆಯ್ಕೆಯಾಗಿರುವ ಶಾಸಕ ಪ್ರದೀಪ್ ಈಶ್ವರ್ ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಅಧಿಕಾರಿಗಳು ಅವರ ವಿರುದ್ಧ ತಿರುಗಿ ಬಿದ್ದು ಕ್ಷೇತ್ರದ ಜನತೆಯ ಸಮಸ್ಯೆಗಳ ಪರಿಹಾರ ವಿಷಯದಲ್ಲಿ ಇಲ್ಲ ಸಲ್ಲದ ತಕರಾರುಗಳನ್ನು ತೆಗೆದು ತೊಂದರೆ ಉಂಟು ಮಾಡುವ ಅಪಾಯವಿದೆ.
ಇದು ಒಂದು ಕಡೆಯಾದರೆ ಶಾಸಕರಾಗಿ ಅವರು ಮಾತನಾಡುವ ರೀತಿ ಸಾಕಷ್ಟು ವಿವಾದಗಳಿಗೆ ಕಾರಣವಾಗುತ್ತಿದೆ ನಾನು ಪಿಯುಸಿವರೆಗೆ ಮಾತ್ರ ಕಲಿತಿದ್ದೇನೆ ನನಗೆ ಇಂಜಿನಿಯರಿಂಗ್ ಗೊತ್ತು ವೈದ್ಯಕೀಯವು ಗೊತ್ತು ಜಗತ್ತಿನ ಯಾವುದೇ ವಿಷಯವನ್ನು ಕೇಳಿ ಎಲ್ಲವೂ ನನಗೆ ಗೊತ್ತಿದೆ ಎಂದು ಹೇಳುವ ರೀತಿ ಆಕರ್ಷಕ ಎನಿಸಿದರು ಕೂಡ ಅದು ಸತ್ಯಕ್ಕೆ ದೂರವಾದ ಮಾತು ಎಂಬುದು ಎಂತವರಿಗೂ ಅರ್ಥವಾಗುತ್ತದೆ.
ಕೆಲ ಕಾಲ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಅನುಭವವಿರುವ ಶಾಸಕ ಪ್ರದೀಪ್ ಈಶ್ವರ್ ಈ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು ಆಡಿದ ಮಾತು ಯಾವತ್ತೂ ಕೂಡ ತಮಗೆ ಮುಳುವಾಗಬಾರದು, ಮಾತಿನಿಂದ ಹೇಗೆ ಎಲ್ಲವನ್ನು ಗಳಿಸಬಹುದು ಹಾಗೆಯೇ ಎಲ್ಲವನ್ನು ಕಳೆದುಕೊಳ್ಳಬಹುದು ಈ ಸತ್ಯವನ್ನು ಅರಿತುಕೊಂಡು ಮುನ್ನಡೆದರೆ ಕ್ಷೇತ್ರಕ್ಕೆ ಅವರು ವರದಾನವಾದರೆ ಪಕ್ಷಕ್ಕೆ ದೊಡ್ಡ ಆಸ್ತಿ ಆಗಲಿದ್ದಾರೆ.
1 ಟಿಪ್ಪಣಿ
Узнайте, как найти лучшие промокоды. free-promocode.ru .