ಬೆಂಗಳೂರು,ಜೂ.16 – ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಕೋಟ್ಯಾಂತರ ಮೌಲ್ಯದ ಬಿಟ್ ಕಾಯಿನ್ ಹಗರಣದ ಉರುಳು ಇದೀಗ ಬಿಜೆಪಿ ನಾಯಕರು ಮತ್ತು ಗೃಹ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸುತ್ತಿಕೊಳ್ಳುವ ಸಾಧ್ಯತೆ ಇದೆ.
ಇತ್ತೀಚಿನ ವರ್ಷಗಳಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬುದ್ಧಿಮತ್ತೆಯನ್ನು ಬಳಸಿ ನಡೆಸಲಾದ ಬಹುಕೋಟಿ ಅಕ್ರಮ ಕರ್ನಾಟಕ ಅಷ್ಟೇ ಅಲ್ಲ ಹೊರ ದೇಶಗಳನ್ನು ಆವರಿಸಿಕೊಂಡಿದೆ. ಈ ಹಗರಣದ ಪ್ರಮುಖ ಆರೋಪಿಗಳಿಂದ ಈ ಹಿಂದೆ ಸರ್ಕಾರದಲ್ಲಿ ಪ್ರಭಾವಿಗಳಾಗಿದ್ದವರ ಖಾತೆಗೆ ಭಾರಿ ಮೊತ್ತದ ಹಣ ಸಂದಾಯವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಆಕ್ರಮದಲ್ಲಿ ಪ್ರಭಾವಿ ರಾಜಕಾರಣಿಗಳ ಕುಟುಂಬ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳು ಶಾಮಿಯರಾಗಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದು ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು ಇದೀಗ ನೂತನ ಸರ್ಕಾರ ಬಿಟ್ ಕಾಯಿನ್ ಹಗರಣದ ಬಗ್ಗೆ ಮರು ತನಿಖೆಗೆ ನಿರ್ಧರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸದ್ಯ ಸ್ಥಗಿತಗೊಂಡಿರುವ ಬಿಟ್ ಕಾಯಿನ್ ಹಗರಣವನ್ನು ಮರು ತನಿಖೆ ಮಾಡಲು ನಿರ್ಧರಿಸಲಾಗಿದೆ ಈ ಹಗರಣದ ತನಿಖೆಯನ್ನು ಎಲ್ಲಾ ಅಯಾಮಗಳಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಈಗಾಗಲೇ ಈ ವಿಚಾರವಾಗಿ ಕುಣಿದಾಡುತ್ತಿದ್ದಾರೆ. ನಮ್ಮ ಸರ್ಕಾರ ಬಂದು 20 ದಿನ ಆಗಿದೆ ಅಷ್ಟೇ. ಅವರು ಸ್ವಲ್ಪ ಸಮಾಧಾನದಿಂದ ಇರುವುದು ಒಳ್ಳೆಯದು. ಈ ಪ್ರಕರಣದ ಮರು ಪರಿಶೀಲನೆ ಮಾಡ್ತೇವೆ ಎಂದು ಹೇಳಿದರು.
ಮೈಸೂರಿನಲ್ಲಿ ಬಿಟ್ ಕಾಯಿನ್ ತನಿಖೆ ವಿಚಾರವಾಗಿ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿಬಂದಿದ್ದ ಬಿಟ್ ಕಾಯಿನ್ ಹಗರಣದ ವಿಷಯವನ್ನು ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಬಳಸಿಕೊಂಡರು. ಆದರೆ ಇವತ್ತು ಯಾಕೆ ಆ ಪ್ರಕರಣದ ಬಗ್ಗೆ ತನಿಖೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ್ದರು.
ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು ಬಿಟ್ ಕಾಯಿನ್ ಹಗರಣವನ್ನು ಮರು ತನಿಖೆ ಮಾಡಲು ನಿರ್ಧರಿಸಲಾಗಿದ್ದು ಇದರಲ್ಲಿ ಯಾರಿಗೂ ಯಾವುದೇ ರೀತಿಯ ಅನುಮಾನಗಳು ಬೇಡ ಎಂದು ಸ್ಪಷ್ಟಪಡಿಸಿದರು.
ಕಳೆದ 2021ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಟ್ ಕಾಯಿನ್ ಹಗರಣ ಭಾರೀ ಸದ್ದು ಮಾಡಿತ್ತು.ಬಳಿಕ ಹಗರಣದ ಬಗ್ಗೆ ನಗರದ ವಿವಿಧ ಠಾಣೆಗಳು ಕೊನೆಗೂ ಸಿಸಿಬಿ ತನಿಖೆ ಸಹ ನಡೆದಿದ್ದು ಅದು ತಾರ್ಕಿಕ ಅಂತ್ಯ ಕಂಡಿರಲಿಲ್ಲ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಬಿಟ್ ಕಾಯಿನ್ ಪ್ರಕರಣವನ್ನು ಮರುಪರಿಶೀಲನೆ ಮಾಡಲಾಗುವುದು ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಬಿಟ್‌ಕಾಯಿನ್ ಎನ್ನುವುದು 2009 ರಲ್ಲಿ ರಚಿಸಲಾದ ಡಿಜಿಟಲ್ ಕರೆನ್ಸಿಯಾಗಿದೆ. ಸಂತೋಷಿ ನಕಮೋಟೋ ಎಂಬ ಕಾವ್ಯನಾಮದ ಸಂಸ್ಥೆಯೊಂದು ಬಿಟ್ ಕಾಯಿನ್ ವ್ಯವಸ್ಥೆಯನ್ನು ಪರಿಚಯಿಸಿದ್ದು, ಬಿಟ್ ಕಾಯಿನ್ ಅಂದರೆ ಕಣ್ಣಿಗೆ ಕಾಣಲ್ಲ. ಅದೊಂದು ಡಿಜಿಟಲ್ ಕರೆನ್ಸಿ. ಇದು ಆನ್‌ಲೈನ್ ಮತ್ತು ಇಟ್ಟಿಗೆ ಮತ್ತು ಗಾರೆ ಖರೀದಿಗೆ ಬಳಸುವ ಸಂಸ್ಕರಿಸಿದ ಡೇಟಾ ಬ್ಲಾಕ್‌ಗಳಿಂದ ಮಾಡಲ್ಪಟ್ಟ ಡಿಜಿಟಲ್ ಕ್ರಿಪ್ಟೋ ಕರೆನ್ಸಿಯಾಗಿದೆ.
ನಗರದ ಸಿಸಿಬಿ ಪೊಲೀಸರು 2020ರ ನವೆಂಬರ್ ನಲ್ಲಿ ಶ್ರೀಕೃಷ್ಣ(ಶ್ರೀಕಿ) ಮತ್ತು ಆತನ ಸಹಚರರನ್ನು ಡ್ರಗ್ ಕೇಸ್ ಒಂದರಲ್ಲಿ ಬಂಧಿಸಿದ್ದರು. ಈ ವೇಳೆ ಶ್ರೀಕಿ ಡಾರ್ಕ್‌ನೆಟ್ ಮೂಲಕ ಬಿಟ್‌ಕಾಯಿನ್ ಬಳಸಿಕೊಂಡು ಡ್ರಗ್ಸ್ ಸಂಗ್ರಹಿಸಿದ್ದ. ಜೊತೆಗೆ ಇದನ್ನು ತಮ್ಮ ಹೈ-ಪ್ರೊಫೈಲ್ ಗ್ರಾಹಕರಿಗೂ ಮಾರಾಟ ಮಾಡುತ್ತಿದ್ದ ಎನ್ನುವ ದೂರು ಈತನ ಮೇಲೆ ದಾಖಲಾಗಿತ್ತು.