ಬೆಂಗಳೂರು,ಜೂ.15- ರಾಜ್ಯದಲ್ಲಿ ಇದೀಗ ರೈಸ್ ಪಾಲಿಟಿಕ್ಸ್ ಆರಂಭವಾಗಿದೆ ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ರಾಜ್ಯದ ಜನತೆಗೆ ನೀಡಿದ್ದ 10 ಕೆಜಿ ಉಚಿತ ಪಡಿತರದ ಅನ್ನಭಾಗ್ಯ ಯೋಜನೆ ಜಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಿದೆ.
ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಯನ್ನು ಜುಲೈ ಒಂದರಿಂದ ಜಾರಿಗೊಳಿಸುವುದಾಗಿ ಪ್ರಕಟಿಸಲಾಗಿತ್ತು ಆದರೆ ಇದಕ್ಕೆ ಬೇಕಾಗುವ ಹೆಚ್ಚುವರಿ ಅಕ್ಕಿಯನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು ಯೋಜನೆ ಅನುಷ್ಠಾನ ವಿಳಂಬವಾಗುವ ಸಾಧ್ಯತೆ ಇದೆ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಈಗಾಗಲೇ ಘೋಷಿಸಿರುವಂತೆ ಯೋಜನೆಯ ಜಾರಿಯಾಗದೆ ಹೋದರೆ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ.
ಬಿಜೆಪಿ ರಾಜಕಾರಣ:
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಕೇಂದ್ರ ಸರ್ಕಾರದ ಆಹಾರ ನಿಗಮವು ಅಕ್ಕಿಕೊಡುತ್ತೇವೆಂದು ಭರವಸೆ ನೀಡಿತ್ತು.ಬಳಿಕ, ಆಗಲ್ಲವೆಂದು ತೀರ್ಮಾನಿಸಿ ನಮಗೆ ಮಾಹಿತಿ ನೀಡಿದೆ ಎಂದು ಹೇಳಿದರು.
ನಾವು ಕೇಂದ್ರವನ್ನು ಉಚಿತವಾಗಿ ಅಕ್ಕಿ ಕೇಳಿರಲಿಲ್ಲ. ಅವರು ಕೇಳಿದ ಹಣ ಕೊಡಲು ಸಿದ್ಧರಿದ್ದೇವೆ. ಅವರಲ್ಲಿ ಏಳು ಲಕ್ಷ ಟನ್ ಆಹಾರ ದಾಸ್ತಾನು ಇದ್ದರೂ ಕೊಡದೇ ರಾಜಕಾರಣ ಮಾಡಿದ್ದಾರೆ. ಕೇಂದ್ರದವರು ಟೆಂಡರ್ ಮಾಡುವ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಕೇಂದ್ರ ರಾಜಕೀಯ ಉದ್ದೇಶದಿಂದ ತೀರ್ಮಾನ ಮಾಡಿದೆ. ಬಡವರಿಗೆ ಊಟ ಕೊಡುವ ವಿಚಾರದಲ್ಲಿ ರಾಜಕೀಯ ಮಾಡಿರುವುದನ್ನು ಖಂಡಿಸುತ್ತೇನೆ ಎಂದರು.
ಯುಪಿಎ ಸರ್ಕಾರ ಇದ್ದಾಗ ಸಾರ್ವಜನಿಕರ, ಬಡವರ ಕಾರ್ಯಕ್ರಮದಲ್ಲಿ ತಾರತಮ್ಯ ಮಾಡಿರಲಿಲ್ಲ.ಆದರೆ, ಈ ಸರ್ಕಾರ ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸಿದರು.
ನಾವು ಗ್ಯಾರೆಂಟಿಯಲ್ಲಿ ಹತ್ತು ಕೆಜಿ ಅಕ್ಕಿ ಕೊಡುತ್ತೇವೆಂದು ಹೇಳಿದ್ದೆವು, ಪಕ್ಕದ ರಾಜ್ಯದ ಅಕ್ಕಿ ತಂದು ಜನರಿಗೆ ಕೊಟ್ಟು ಮಾತು ಉಳಿಸಿಕೊಳ್ಳುತ್ತೇವೆ. ಅಕ್ಕಿ ಖರೀದಿಗೆ ಓಪನ್ ಮಾರ್ಕೆಟ್‌ಗೆ ಹೋಗಲ್ಲ. ನೆರೆ ರಾಜ್ಯಗಳಿಂದ ಅಕ್ಕಿ ತರಲು ನಿರ್ಧರಿಸಲಾಗಿದೆ. ಕಾರ್ಯದರ್ಶಿಗಳು, ಅಧಿಕಾರಿಗಳು ಕಾರ್ಯೋನ್ಮುಖ ಆಗಿದ್ದಾರೆ. ಹೆಚ್ಚುವರಿ ಹೊರೆ ಬೀಳದಂತೆ ಪ್ರಯತ್ನ ಮಾಡಲಾಗುತ್ತಿದೆ. ಆದಷ್ಟು ಸಮಯಕ್ಕೆ ಸರಿಯಾಗಿ ಅನುಷ್ಠಾನ ಮಾಡುತ್ತೇವೆ. ಅಕ್ಕಿ ಖರೀದಿ ಕುರಿತಂತೆ ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ ಗಡ ಸಿಎಂಗಳ ಜತೆ ನಮ್ಮ ಸಿಎಂ ಸಂಪರ್ಕದಲ್ಲಿದ್ದಾರೆ. ಇವತ್ತು ಅಧಿಕಾರಿಗಳು ತೆಲಂಗಾಣಕ್ಕೆ ಹೋಗುತ್ತಿದ್ದಾರೆ ಎಂದು ವಿವರಿಸಿದರು.
ಹೋರಾಟಕ್ಕೆ ಸಿದ್ಧ:
ಈ ನಡುವೆ ಈ ಕುರಿತಂತೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾವು ಕೇಂದ್ರ ಸರ್ಕಾರದಿಂದ ಅಕ್ಕಿಯನ್ನು ಉಚಿತವಾಗೇನೂ ಕೇಳಿರಲಿಲ್ಲ. ಆದರೆ, ಕೊಡುವುದಿಲ್ಲ ಎಂದು ಹೇಳಿದೆ. ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟವನ್ನೇ ರೂಪಿಸುತ್ತೇವೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಈ ತಾರತಮ್ಯವನ್ನು ವಿರೋಧಿಸುತ್ತೇವೆ. ನಮಗೆ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಎಲ್ಲ ರಾಜ್ಯಗಳಿಗೂ ವಿತ್ ಡ್ರಾ ಮಾಡಿದೆ’ ಎಂದು ಆರೋಪಿಸಿದರು.
‘ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಸಾಧ್ಯವಿಲ್ಲ. ಕೆಲವು ಸಂಸ್ಥೆಗಳು, ಬೇರೆ ಬೇರೆ ಏಜೆನ್ಸಿಗಳ ಮೂಲಕ ಖರೀದಿಸಬೇಕಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.
‘ಯಾರ ಬಳಿಯೂ ಬೆರಳು ತೋರಿಸುಕೊಳ್ಳುವ ರೀತಿ ಕೆಲಸ ಮಾಡುವುದಿಲ್ಲ. ತಿನ್ನುವ ಅಕ್ಕಿ ಹಾಗೂ ಬಡವರ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೀದಿ ಹೋರಾಟ:
ಮತ್ತೊಂದೆಡೆ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಜುಲೈ ತಿಂಗಳಿನ ಮೊದಲ ವಾರದಿಂದಲೇ ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗಳಿಗೆ 10 ಕೆಜಿ ಅಕ್ಕಿ ನೀಡದಿದ್ದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಎಚ್ಚರಿಸಿದೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ರಾಜ್ಯ ಸರ್ಕಾರ,10 ಕೆಜಿ ಅಕ್ಕಿ ಘೋಷಣೆ ಮಾಡುವ ಮುನ್ನ ಕೇಂದ್ರ ಸರ್ಕಾರದ ಜತೆ ಕಾಂಗ್ರೆಸ್‍ನ ಯಾವುದೇ ನಾಯಕರು ಮಾತುಕತೆ ನಡೆಸಿರಲಿಲ್ಲ. ಈಗ ಅಕ್ಕಿ ಕೊಡಲು ಆಗುವುದಿಲ್ಲ ಎಂಬುದು ಗೊತ್ತಿದ್ದರೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ಸರಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ. ಹಣಕಾಸಿನ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ರಾಜಕಾರಣ ಮಾಡುತ್ತಿದೆ ಸಬೂಬು ಹೇಳುವುದನ್ನು ಬಿಟ್ಟು ಜೂ.1ರಿಂದಲೇ ಫಲಾನುಭವಿಗಳಿಗೆ ಅಕ್ಕಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಸರಕಾರ 10 ಕೆಜಿ ಅಕ್ಕಿ ವಿಚಾರದಲ್ಲಿ ಮೋಸ ಮಾಡುತ್ತಿರುವುದು ಸ್ಪಷ್ಟಗೊಂಡಿದೆ. ಮಾತು ತಪ್ಪಿದ ದೋಖಾ ಕಾರ್ಯಕ್ರಮ ಮುಂದುವರಿಸಿದ್ದಾರೆ. ಅದನ್ನು ಮುಚ್ಚಿ ಹಾಕಲು ರೈತರ, ಬಡವರ ಬಿಪಿಎಲ್ ಕಾಡ್ರ್ದಾರರ ಆಪಾದನೆಯಿಂದ ಪಾರಾಗಲು ಅಕ್ಕಿ ಸರಬರಾಜು ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಕಾಂಗ್ರೆಸ್ ಸರಕಾರ ಪಡಿತರ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಮುಕ್ತ ಮಾರುಕಟ್ಟೆ, ಎಫ್‍ಸಿಐ ಸೇರಿ ಇತರ ಕಡೆಗಳಿಂದ ಅಕ್ಕಿ ಖರೀದಿಸಿ ವಿತರಿಸಿ. ಪ್ರತಿ ವ್ಯಕ್ತಿಗೆ 10 ಕೆಜಿ ಕೊಡಿ. ಇಲ್ಲವಾದರೆ ಹಣವನ್ನು ಡಿಬಿಟಿ ಮಾಡಿ ಎಂದು ಒತ್ತಾಯಿಸಿದರು. ಎಲ್ಲದರಲ್ಲೂ ಕಂಡಿಷನ್ ಗಮನಿಸಿದ ಜನತೆ, ಇದು ಗ್ಯಾರಂಟಿ ಅಲ್ಲ ದೋಖಾ ಸೀರೀಸ್ ಎನ್ನುತ್ತಾರೆ ಎಂದು ತಿಳಿಸಿದರು.
Previous ArticleCongressನಿಂದ BJPಗೆ Burnol ಭಾಗ್ಯ!
Next Article ಪ್ರಭಾವಿಗಳಿಗೆ ಉರುಳಾಗಲಿದೆ Bitcoin ಹಗರಣ