ಬೆಂಗಳೂರು,ಜ.10- ವಿಧಾನಸಭೆ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಕಾಂಗ್ರೆಸ್ ನಾಯಕರ ಒಗ್ಗಟ್ಟು ಹಾಗೂ ಶಕ್ತಿ ಪ್ರದರ್ಶನದ ಬಸ್ ಯಾತ್ರೆ ನಡೆಸಲಿದೆ.ನಾಳೆ ಬೆಳಗಾವಿಯಿಂದ ಆರಂಭವಾಗಲಿರುವ ಪ್ರಜಾಧ್ವನಿ (Prajadhwani) ರಥಯಾತ್ರೆ 20 ದಿನಗಳ ಅವಧಿಯಲ್ಲಿ ಎಲ್ಲಾ ವಿಧಾನಸಭೆ ಕ್ಷೇತ್ರಗಳನ್ನು ತಲುಪಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿ ಪ್ರವಾಸ ಕೈಗೊಳ್ಳಲಿದ್ದು, ಇದಕ್ಕಾಗಿ ಬಿಜೆಪಿ ಆಡಳಿತದ ಪಾಪದ ಪುರಾಣ ಎಂಬ ದೋಷಾರೋಪಣಾ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಡಿ.ಕೆ.ಶಿವಕುಮಾರ್ ಮಾತನಾಡಿ, ಮಹಾತ್ಮಗಾಂಧಿ ಬೆಳಗಾವಿಯಲ್ಲಿ ತಂಗಿದ್ದ ಗಾಂಬಾವಿಯಿಂದ ನಾಳೆ ಪ್ರಜಾಧ್ವನಿ ರಥಯಾತ್ರೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ನಾನು ಮತ್ತು ಸಿದ್ದರಾಮಯ್ಯ ಜೊತೆಯಾಗಿ 20 ಜಿಲ್ಲೆಗಳಲ್ಲಿ ಸಂಚರಿಸಲಿದ್ದೇವೆ. ಜನವರಿ 28ರವರೆಗೆ ನಿರಂತರವಾಗಿ ರಥಯಾತ್ರೆ ನಡೆಯಲಿದೆ. ಬಳಿಕ ನಾವಿಬ್ಬರು ಪ್ರತ್ಯೇಕ ತಂಡಗಳಲ್ಲಿ ಕ್ಷೇತ್ರವಾರು ಪ್ರವಾಸ ಮಾಡುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ಭ್ರಷ್ಟಚಾರದಿಂದ ಜನ ಬೇಸತ್ತಿದ್ದಾರೆ. ಹೆಣದ ಮೇಲೆ ಹಣ ಪಡೆಯಲಾಗಿದೆ. ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಈ ಸರ್ಕಾರದ ಪಾಪದ ಪುರಾಣವನ್ನು ಜನರ ಮುಂದಿಡಲಾಗುವುದು ಎಂದು ಹೇಳಿದರು
ಇಡೀ ವಿಶ್ವದಲ್ಲೇ ಕರ್ನಾಟಕದ ಬಗ್ಗೆ ದೊಡ್ಡ ಗೌರವ ಇತ್ತು. ಆದರೆ, ಬಿಜೆಪಿ (BJP) ಸರ್ಕಾರದಿಂದ ಕಳಕ ಬಂದಿದೆ. ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರೈತರ ಬದುಕು ಹಸನಾಗಲಿಲ್ಲ, ಉದ್ಯೋಗ ಅವಕಾಶ ಕಲ್ಪಿಸಲಿಲ್ಲ. ಐಎಎಸ್ ಅಧಿಕಾರಿಗಳೆಲ್ಲ ಜೈಲು ಸೇರುವಂತಹ ಇತಿಹಾಸ ಸೃಷ್ಟಿಸಿದ್ದಾರೆ. ಯಾವುದೇ ವಿಚಾರದಲ್ಲಿ ಧ್ವನಿ ಎತ್ತಿದರೆ ನಮ್ಮ ಮೇಲೆಯೇ ಪ್ರಕರಣ ದಾಖಲಿಸಿದ್ದಾರೆ’ ಎಂದು ಆಪಾದಿಸಿದರು.
ಈಗ ಕಾಂಗ್ರೆಸ್ ಪಕ್ಷದ ವಿಜಯ ಪರ್ವ ಆರಂಭವಾಗಿದೆ. ಜನರ ಭಾವನೆಯನ್ನು ತಿಳಿಸಬೇಕು ಎಂದು ಎರಡೂವರೆ ವರ್ಷದಿಂದ ಪ್ರಯತ್ನಿಸಿದ್ದೆವು. ಪ್ರಜಾಧ್ವನಿ ಪ್ರಜೆಗಳ ಧ್ವನಿ, ಪ್ರಜೆಗಳ ಭಾವನೆ. ನಾವು ಸಕಾರಾತ್ಮಕವಾಗಿ ಯೋಚಿಸುತ್ತಿದ್ದೇವೆ. ಮೂರೂವರೆ ವರ್ಷ ಬಿಜೆಪಿ ಸರ್ಕಾರ ಯಾವುದರಲ್ಲಿ ವಿಫಲವಾಗಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ. ಪ್ರಜಾಧ್ವನಿ ಯಾತ್ರೆಯ ಮೂಲಕ ಬೆಳಗಾವಿಯಿಂದ ವಿಜಯಕ್ಕೆ ಮುನ್ನುಡಿ ಬರೆಯಲಿದ್ದೇವೆ’ ಎಂದರು.
ಕರುನಾಡಿಗಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿ ಎಂದು ನಾವು ಜನರಲ್ಲಿ ಮನವಿ ಮಾಡುತ್ತೇವೆ. ಜನರ ಯಾವುದೇ ಹೋರಾಟಗಳಿದ್ದರೂ ಕಾಂಗ್ರೆಸ್ ಕೈ ಜೊಡಿಸಲಿದೆ. ನಿಮ್ಮ ಹಕ್ಕು ನಮ್ಮ ಹೋರಾಟ ಎಂಬ ಘೋಷಣಾ ವಾಕ್ಯವನ್ನು ಪಾಲಿಸುತ್ತೇವೆ. ಜನರು ತಮ್ಮ ಬೇಡಿಕೆ ಮತ್ತು ಸಲಹೆಗಳನ್ನು ಪ್ರಜಾಧ್ವನಿ ವೆಬ್‍ಸೈಟ್ ಮೂಲಕವೂ ನಮಗೆ ಕಳುಹಿಸಬಹುದು. ಜೊತೆಗೆ 9537224224 ಸಹಾಯವಾಣಿ ಸ್ಥಾಪಿಸಲಾಗಿದ್ದು ಅದಕ್ಕೆ ದಿನದ 24 ಗಂಟೆ ಕರೆ ಮಾಡಿ ಅಭಿಪ್ರಾಯ ಹಂಚಿಕೊಳ್ಳಬಹುದು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೇವಲ ನಾಲ್ಕು ವರ್ಷದಲ್ಲಿ ₹ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಬಡ್ಡಿ ಕಟ್ಟಲು ಆಗದಷ್ಟು ಸಾಲ ಮಾಡಿಟ್ಟಿದ್ದಾರೆ. ಪ್ರತಿಯೊಬ್ಬರ ಮೇಲೆ ₹ 83 ಸಾವಿರ ಸಾಲ ಇದೆ. ಇದರಿಂದ ರಾಜ್ಯ ಉಳಿಯುತ್ತಾ? ಎಂದು ಪ್ರಶ್ನಿಸಿದರು.
ಇದು ಶೇ 40% ಕಮಿಷನ್ ಸರ್ಕಾರ, ನೇಮಕಾತಿಯಲ್ಲಿ ಲಂಚ, ವರ್ಗಾವಣೆಯಲ್ಲಿ ಲಂಚ. ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ಆದರೆ ನಮಗೆ ಅನೌಪಚಾರಿಕವಾಗಿ ಹೇಳ್ತಿದ್ದಾರೆ. ಇದು ಆಲಿಬಾಬ ಹಾಗೂ 40 ಕಳ್ಳರ ಸರ್ಕಾರ. ಅದಕ್ಕಾಗಿ ಸರ್ಕಾರ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದೇವೆ’ ಎಂದರು.
ಈ ಸರ್ಕಾರ ಅನೈತಿಕ ಮಾರ್ಗದಿಂದ ರಚನೆಯಾಗಿದೆ. ಜನರು ಈ ಸರ್ಕಾರಕ್ಕೆ ಆಶೀರ್ವಾದ ಮಾಡಿರಲಿಲ್ಲ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಶಾಸಕರನ್ನು ಖರೀದಿ ಮಾಡಿದ್ದಾರೆ. ಕೋವಿಡ್ ಬಂದಾಗ ಮೂರು ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ರು.ಅಧಿವೇಶನದಲ್ಲಿ ನಾವು ದಾಖಲೆ ಸಮೇತ ಪ್ರಸ್ತಾಪ ಮಾಡಿದ್ದೆವು. ಕೊರೊನಾದಿಂದ ಮೃತರಾದವರಿಗೆ ಸರಿಯಾದ ಪರಿಹಾರ ನೀಡಲಿಲ್ಲ. ರಾಜ್ಯ ಕಂಡ ಅತ್ಯಂತ ದುರ್ಬಲ, ಭ್ರಷ್ಟ ಸಿಎಂ ಅಂದ್ರೆ ಬಸವರಾಜ ಬೊಮ್ಮಾಯಿ‘ ಎಂದು ಆರೋಪಿಸಿದರು.
ಇದಾದ ನಂತರ
ಪ್ರಜಾಧ್ವನಿ ಯಾತ್ರೆಯ ವಿಶೇಷ ಬಸ್ ಗೆ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ (Siddaramaiah) ಪೂಜೆ ಸಲ್ಲಿಸಿದರು.
ಚಾರ್ಜ್ ಶೀಟ್ ನಲ್ಲಿರುವ ಅಂಶಗಳು
– ಶೇ 40 ಸರ್ಕಾರ ಎಂಬುದು ಬಿಜೆಪಿ ಸರ್ಕಾರದ ಹೊಸ ಹೆಸರು
– 90% ಪ್ರಣಾಳಿಕೆ ಭರವಸೆಗಳು ಈಡೇರಿಲ್ಲ
– ಏಳು ಸಾವಿರ ಕೋಟಿ ರೈತರ ಕೃಷಿ ಸಾಲ ಮನ್ನಾ ಹಾಗೂ ನ್ಯಾಯಯುತ ಎಂಎಸ್ಪಿ ನಿರಾಕರಣೆ
– 100% ಏರಿಕೆ ರಾಜ್ಯದ ಸಾಲ
– 145% ಹೆಚ್ಚಳವಾದ ಎಲ್ಪಿಜಿ ಸಿಲಿಂಡರ್
– 45 ಲಕ್ಷ ಕನ್ನಡಿಗರು ಕೋವಿಡ್ ಪ್ರಾಣ ಕಳೆದುಕೊಂಡವರು
– ದೇಶದಲ್ಲಿ ಎರಡು ಅತಿ ಹೆಚ್ಚು ರೈತರ ಸಾವಿನ ಪ್ರಕರಣಗಳು
– 10.13 ಲಕ್ಷ ಶಾಲೆ ಬಿಟ್ಟ ಮಕ್ಕಳು
– 2.52 ಲಕ್ಷ ಸರ್ಕಾರಿ ಉದ್ಯೋಗಳು ಖಾಲಿ ಇವೆ
– 83,193 ಕನ್ನಡಿಗರು ಬಿಜೆಪಿ ಆಡಳಿತದಲ್ಲಿ ಕೆಲಸ ಕಳೆದುಕೊಂಡಿದ್ದಾರೆ
Previous ArticleMP ಆಗ್ತಾರಾ ಕಿಚ್ಚ ಸುದೀಪ್?
Next Article Santro Ravi ಪೊಲೀಸರಿಗೆ ಯಾಕೆ ಸಿಗುತ್ತಿಲ್ಲ ಗೊತ್ತಾ?