ಚಿತ್ತಾಪುರ ಕ್ಷೇತ್ರ- ಸಮೀಕ್ಷೆ.
ಆರ್.ಎಚ್.ನಟರಾಜ್,ಹಿರಿಯ ಪತ್ರಕರ್ತ.
ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಜ್ಯ ಕಾಂಗ್ರೆಸ್ ಮಾಧ್ಯಮ ಸಮನ್ವಯ ಸಮಿತಿ ಮುಖಂಡ ಪ್ರಿಯಾಂಕ ಖರ್ಗೆ ಹೆಸರು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೇಳಿ ಬರುತ್ತಿದೆ.ಸಂಘ ಪರಿವಾರದ ಕಟು ವಿರೋಧಿ, ಬಿಜೆಪಿ ಸರ್ಕಾರದ ಟೀಕಾಕಾರರನಾಗಿ ಗುರುತಿಸಲ್ಪಡುವ ಪ್ರಿಯಾಂಕ ಖರ್ಗೆ ಅವರನ್ನು ರಾಜಕೀಯವಾಗಿ ಕಟ್ಟಿ ಹಾಕಲು ಇದೀಗ ಬಿಜೆಪಿ ಮತ್ತು ಸಂಘ ಪರಿವಾರ ದೊಡ್ಡ ಪ್ರಮಾಣದಲ್ಲಿ ಕಾರ್ಯತಂತ್ರ ರೂಪಿಸಿದೆ.
ಚಿತ್ತಾಪುರ ಕ್ಷೇತ್ರದಿಂದ ಇವರು ಮತ್ತೆ ಕಣಕ್ಕಿಳಿಯೋದು ಗ್ಯಾರೆಂಟಿ. ಯಾಕಂದ್ರೆ ಮೀಸಲು ಕ್ಷೇತ್ರವಾದ ಚಿತ್ತಾಪುರದಲ್ಲಿ ಪ್ರಿಯಾಂಕಾ ಖರ್ಗೆ ಗೆಲ್ಲುವ ಕುದುರೆ ಆಗಿದ್ದಾರೆ. ಈ ಕ್ಷೇತ್ರ ಏಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಮೇಲ್ನೋಟಕ್ಕೆ ಪ್ರಿಯಾಂಕ ಖರ್ಗೆ ಗೆಲ್ಲುವ ಸಾಧ್ಯತೆ ಇದೆ.ಆದರೆ ಅದಕ್ಕಾಗಿ ಬಾರಿ ಸವಾಲು ಎದುರಿಸಬೇಕಾಗಿದೆ.
ಒಂದು ಕಾಲದಲ್ಲಿ ಖರ್ಗೆ ಅವರ ಗರಡಿಯಲ್ಲಿ ಬೆಳೆದ ಕೋಲಿ ಸಮಾಜದ ಪ್ರಭಾವಿ ನಾಯಕ ಬಾಬುರಾವ್ ಚಿಂಚನಸೂರ್ ಈಗ ಬಿಜೆಪಿಯ ವಿಧಾನ ಪರಿಷತ್ ಸದಸ್ಯ. ಪ್ರಿಯಾಂಕ್ ಜೊತೆಗಿನ ವೈಮನಸ್ಯದಿಂದಲೇ ಅವರು ಕಾಂಗ್ರೆಸ್ ತೊರೆದಿದ್ದು,ಇವರ ಸೋಲಿಗೆ ಪಣ ತೊಟ್ಟಿದ್ದಾರೆ.
ಮತ್ತೊಂದೆಡೆ ಜಿಲ್ಲಾ ಕಾಂಗ್ರೆಸ್ ನಲ್ಲಿರುವ ಕೆಲವರು ಪ್ರಿಯಾಂಕ್ ಜೊತೆಗೆ ಅಷ್ಟಕಷ್ಟೇ.ಇವರೆಲ್ಲಾ ಅವರ ಸೋಲಿಗಾಗಿ ಎದುರಾಳಿಗಳ ಜೊತೆ ಕೈ ಜೋಡಿಸುವ ಸಾಧ್ಯತೆಯಿದ್ದು,ಇದನ್ನು ಈಗಲೇ ಬಗೆಹರಿಸಿಕೊಳ್ಳದೇ ಹೋದರೆ ಚುನಾವಣೆಯಲ್ಲಿ ಹೆಚ್ಚು ಬೆವರು ಹರಿಸಬೇಕಾಗಬಹುದು.
ಈ ಕ್ಷೇತ್ರದಲ್ಲಿ ಜೆಡಿಎಸ್ ನ ಪ್ರಭಾವ ಅಷ್ಟಾಗಿ ಇಲ್ಲ.ಬಿಜೆಪಿ ಸಾಕಷ್ಟು ಬಲಯುತವಾಗಿದೆ.ಇಲ್ಲಿ ಟಿಕೆಟ್ ಗಾಗಿ ಭಾರಿ ಪೈಪೋಟಿಯೇ ನಡೆಯುತ್ತಿದೆ
ವಿಠ್ಠಲ್ ವಾಲ್ಮೀಕಿ ನಾಯಕ್, ಅರವಿಂದ್ ಚವ್ಹಾಣ್ ಮಣಿಕಂಠ ರಾಠೋಡ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರ ಜೊತೆಗೆ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕರ ಪತ್ನಿ ಜಯಶ್ರೀ ಮತ್ತಿಮೂಡ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಮಣಿಕಂಠ ರಾಥೋಡ್ ಅವರಂತೂ ಪ್ರಿಯಾಂಕ್ ಖರ್ಗೆನ ಈ ಬಾರಿ ಮನೆಗೆ ಕಳಿಸೋದು ಗ್ಯಾರಂಟಿ ಅನ್ನುತ್ತಾರೆ ಅಲ್ಲದೆ ಇವರಿಬ್ಬರ ನಡುವಿನ ಜಿದ್ದಾ ಜಿದ್ದಿ ಕೂಡಾ ದೊಡ್ಡ ರೀತಿಯಲ್ಲಿ ಸದ್ದು ಮಾಡಿದೆ.
ಮಾಡಿದೆ.
ಕಲಬುರಗಿ ಜಿಲ್ಲೆಯ ಪ್ರಮುಖ ತಾಲೂಕು ಚಿತ್ತಾಪುರ. ಕೃಷ್ಣಾ ಮತ್ತು ಭೀಮನದಿಗಳು ಹರಿಯುವ ಈ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ. 5 ದಶಕಗಳಲ್ಲಿ 1 ಬಾರಿ ಬಿಜೆಪಿ, 3 ಬಾರಿ ಜನತಾ ಪರಿವಾರದ ಗೆಲವು ಹೊರತು ಪಡಿಸಿದ್ರೆ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳದ್ದೇ ಗೆಲುವು. ಸಂಸದರಾದ ಮಲ್ಲಿಕಾರ್ಜುನ ಖರ್ಗೆ 2013ರಲ್ಲಿ ಚಿತ್ತಾಪುರ ಕ್ಷೇತ್ರವನ್ನ ಪುತ್ರನಿಗೆ ಬಿಟ್ಟುಕೊಟ್ಮೇಲೆ 2013 ಮತ್ತು 2018ರಲ್ಲಿ ಬಿಜೆಪಿಯ ವಾಲ್ಮೀಕಿ ನಾಯಕ್ ವಿರುದ್ಧ ಗೆಲುವು ಸಾಧಿಸಿದರು. ಇದೀಗ ಹ್ಯಾಟ್ರಿಕ್ ಗೆಲುವು ಸಾಧಿಸಲು ರೆಡಿಯಾಗ್ತಿದ್ದಾರೆ.
ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಿಯಾಂಕಾ ಖರ್ಗೆ 69700 ಮತಗಳನ್ನ ಪಡೆದುಕೊಂಡಿದ್ರು. 65,307 ಮತಗಳು ಪಡೆದಿದ್ದ ಎದುರಾಳಿ ಬಿಜೆಪಿ ವಾಲ್ಮೀಕಿ ನಾಯಕ್ ವಿರುದ್ಧ 4393 ಮತಗಳ ಅಂತರದಿಂದ ಗೆದ್ದು 2ನೇ ಬಾರಿ ವಿಧಾನಸೌಧ ಪ್ರವೇಶಿಸಿದ್ದರು
ಚಿತ್ತಾಪುರ ಕ್ಷೇತ್ರದಲ್ಲಿ 56 ಸಾವಿರ ಲಿಂಗಾಯತ ಮತದಾರರಿದ್ದು, ಬಿಜೆಪಿಯ ಸಾಂಪ್ರದಾಯಿಕ ಮತಗಳಾಗಿವೆ. ಇನ್ನು ಲಿಂಗಾಯತ ಸಮುದಾಯದ ನಂತರ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಕೋಲಿ ಸಮುದಾಯದ 45 ಸಾವಿರ ಮತದಾರರನ್ನು ತಮ್ಮತ್ತ ಬಿಜೆಪಿ ಸೆಳೆಯುತ್ತಿದೆ. ಇವರನ್ನು ಕಾಂಗ್ರೆಸ್ ತನ್ನತ್ತ ಒಲಿಸಿಕೊಳ್ಳಲೇ ಬೇಕು ಇಲ್ಲವಾದರೆ ಪ್ರಿಯಾಂಕ್ ಹಾದಿ ಕಠಿಣವಾಗಲಿದೆ.
ಇನ್ನು ಎಸ್ಸಿ ಮತ್ತು ಎಸ್ಟಿ ಸಮುದಾಯ 40 ಸಾವಿರ ಮುಸ್ಲಿಂ ಸಮುದಾಯದ 35 ಸಾವಿರ ಮತದಾರರು ಕಾಂಗ್ರೆಸ್ ಜೊತೆ ನಿಲ್ಲುವ ಸಾಧ್ಯತೆಯಿದೆ. 32 ಸಾವಿರ ಲಂಬಾಣಿ ಮತದಾರರಲ್ಲಿ ಬಹುತೇಕರು ಬಿಜೆಪಿ ಪರವಾಗಿದ್ದಾರೆ. 21000 ಕುರುಬ ಮತದಾರರು, ಎಂಟು ಸಾವಿರ ಗಾಣಿಗ ಮತದಾರರು ಕಾಂಗ್ರೆಸ್ ಪರವಿರುವುದು ಪ್ರಿಯಾಂಕ್ ಗೆಲುವಿಗೆ ಸಹಕಾರಿಯಾಗಲಿವೆ.
ಚಿತ್ತಾಪುರ ಜಾತಿ ಸಮೀಕರಣ..
ಲಿಂಗಾಯತ – 56000
ಕೋಲಿ – 45000
SC – ST – 40000
ಮುಸ್ಲಿಂ – 35000
ಲಂಬಾಣಿ – 32,000
ಕುರುಬ – 21000
ಗಾಣಿಗ – 8000
ಬ್ರಾಹ್ಮಣ – 5000