ಬೆಂಗಳೂರು, ಫೆ.13- ರಾಜ್ಯಸಭೆಯಲ್ಲಿ ಕಾಂಗ್ರೆಸ್ ಆಡಳಿತ ಪಕ್ಷಕ್ಕೆ ಸಮರ್ಥ ರೀತಿಯಲ್ಲಿ ಸೆಡ್ಡು ಹೊಡೆಯಬೇಕು ಎಂದು ಕಾರ್ಯತಂತ್ರ ರೂಪಿಸಿ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ರಿಸರ್ವ್ ಬ್ಯಾಂಕ್ ಮಾಜಿ ಮುಖ್ಯಸ್ಥ ರಘುರಾಮ್ ರಾಜನ್ (Raghuram Rajan) ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಲು ನಡೆಸಿದ ಪ್ರಯತ್ನ ವಿಫಲವಾಗಿದೆ.
ರಘುರಾಮ್ ರಾಜನ್ ಅವರು ವಿಶ್ವ ದರ್ಜೆಯ ಆರ್ಥಿಕ ತಜ್ಞರಾಗಿದ್ದು ಕೇಂದ್ರ ಸರ್ಕಾರದ ಹಲವು ಆರ್ಥಿಕ ನೀತಿಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು ಇದಾದ ನಂತರ ಕಾಂಗ್ರೆಸ್ ನಾಯಕರು ಅವರ ಜೊತೆಯಲ್ಲಿ ಉತ್ತಮವಾದ ಬಾಂಧವ್ಯ ಹೊಂದುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು.
ಇದರ ಮುಂದುವರೆದ ಭಾಗವಾಗಿ ಅವರನ್ನು ರಾಜ್ಯಸಭೆಯ ಸದಸ್ಯರನ್ನಾಗಿ ಆಯ್ಕೆ ಮಾಡಲು ಕಾಂಗ್ರೆಸ್ ನಾಯಕತ್ವ ಸಾಕಷ್ಟು ಚರ್ಚೆ ನಡೆಸಿತ್ತು. ಫೆಬ್ರವರಿ 29 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭೆಯಿಂದ ರಘುರಾಮ್ ರಾಜನ್ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಉನ್ನತ ನಾಯಕತ್ವ ಚಿಂತನೆ ನಡೆಸಿತ್ತು.
ಹೈಕಮಾಂಡ್ ಮಟ್ಟದಲ್ಲಿ ನಡೆದ ಈ ಚರ್ಚೆಯ ನಂತರದಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರು ರಘುರಾಮ್ ರಾಜನ್ ಅವರನ್ನು ಸಂಪರ್ಕಿಸಿ ತಮ್ಮಂತಹ ಆರ್ಥಿಕ ತಜ್ಞರ ಸೇವೆ ದೇಶಕ್ಕೆ ಅಗತ್ಯವಿದೆ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷಕ್ಕೆ ಹಣಕಾಸು ವಿಷಯದಲ್ಲಿ ಸಾಕಷ್ಟು ಮಾರ್ಗದರ್ಶನ ಮಾಡುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಯೋ ಸಹಜ ಕಾರಣಗಳಿಂದಾಗಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ ಹೀಗಾಗಿ ತಾವು ಅವರ ಸ್ಥಾನವನ್ನು ಅಲಂಕರಿಸುವ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ದೇಶಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಕೋರಿದರು ಎನ್ನಲಾಗಿದೆ.
ಕಾಂಗ್ರೆಸ್ ನ ಉನ್ನತ ನಾಯಕತ್ವದಿಂದ ಬಂದ ಈ ಆಹ್ವಾನವನ್ನು ಅತ್ಯಂತ ನಯವಾಗಿಯೇ ತಿರಸ್ಕರಿಸಿದ ರಘುರಾಮ್ ರಾಜನ್ ಅವರು ತಾವು ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳಲು ಬಯಸುವುದಿಲ್ಲ ಈ ವಿಷಯದಲ್ಲಿ ತಮ್ಮ ನಿಲುವು ಸ್ಪಷ್ಟವಾಗಿದೆ ತಮ್ಮನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಒಲವು ವ್ಯಕ್ತಪಡಿಸಿದ ನಾಯಕತ್ವಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ ಆದರೆ ಒಂದು ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡು ರಾಜ್ಯಸಭೆಯ ಸದಸ್ಯನಾಗಲು ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿ ಕಾಂಗ್ರೆಸ್ಸಿನ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ನಿರ್ಧಾರ:
ರಘುರಾಮ್ ರಾಜನ್ ಅವರು ಕಾಂಗ್ರೆಸ್ ಪಕ್ಷದ ಹವಾಮಾನವನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪರವಾಗಿ, ಗಟ್ಟಿ ಧ್ವನಿಯಲ್ಲಿ ಮಾತನಾಡುವ ನಾಯಕರಿಗಾಗಿ ಹುಡುಕಾಟ ನಡೆದಿದ್ದು ರಾಜ್ಯದಿಂದ ಅಜಯ್ ಮಾಕೇನ್ ಅಥವಾ ಅಭಿಷೇಕ್ ಮನು ಸಿಂಘ್ವಿ ಅವರನ್ನು ಆಯ್ಕೆ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದರು.
ವಿಧಾನಸಭೆಯಲ್ಲಿ ಕಾಂಗ್ರೆಸ್ ಹೊಂದಿರುವ ಸಂಖ್ಯಾ ಬಲದ ಆಧಾರದಲ್ಲಿ ಮೂವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಅವಕಾಶವಿದೆ ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಎರಡು ಸ್ಥಾನಗಳ ಆಯ್ಕೆಯನ್ನು ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಿಟ್ಟುಕೊಟ್ಟಿದ್ದು ಉಳಿದೊಂದು ಸ್ಥಾನವನ್ನು ತನಗೆ ನೀಡುವಂತೆ ಮನವಿ ಮಾಡಿದ ಈ ಒಂದು ಸ್ಥಾನದಿಂದ ಅಜಯ್ ಮಾಕೇನ್ ಅಥವಾ ಅಭಿಷೇಕ್ ಮನು ಸಿಂಘ್ವಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದ್ದು ನಾಳೆ ಈ ಬಗ್ಗೆ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಉಳಿದ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನ ಅಲ್ಪಸಂಖ್ಯಾತರಿಗೆ ಹಾಗೂ ಮತ್ತೊಂದು ಸ್ಥಾನವನ್ನು ಒಕ್ಕಲಿಗ ಇಲ್ಲವೇ ದಲಿತರಿಗೆ ಬಿಟ್ಟುಕೊಡುವ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದು, ಅಲ್ಪಸಂಖ್ಯಾತರ ವಲಯದಿಂದ ನಾಸೀರ್ ಹುಸೇನ್,
ಮನ್ಸೂರ್ ಅಲಿ ಖಾನ್ ಹಾಗೂ ಒಕ್ಕಲಿಗ ವಲಯದಿಂದ ಬಿ ಎಲ್ ಶಂಕರ್ ಜಿ ಸಿ ಚಂದ್ರಶೇಖರ್ ಪರಿಶಿಷ್ಟ ಸಮುದಾಯದಿಂದ ಎಲ್ ಹನುಮಂತಯ್ಯ ಹೆಚ್ ಆಂಜನೇಯ ಮೊದಲಾದವರು ಲಾಬಿ ನಡೆಸಿದ್ದಾರೆ.
ಈ ಕುರಿತಂತೆ ನಾಳೆ ಬೆಳಗ್ಗೆ ಪಕ್ಷದ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸುರ್ಜೇವಾಲ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಅಲ್ಲಿ ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ.