ಬೆಂಗಳೂರು,ಫೆ.15-
ಮೇಲುಕೋಟೆಯ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ (Srimannarayana Ramanuja Jeeyar Swamiji, Melkote) ಯವರ ಭದ್ರತೆಗೆ ಇಬ್ಬರು ಕಮಾಂಡರ್ ಸೇರಿ 28 ಮಂದಿ ಸಶಸ್ತ್ರ ಸಿಬ್ಬಂದಿ ನಿಯೋಜಿತರಾಗಿದ್ದಾರೆ. ನಿಷೇಧಿತ ಸಂಘಟನೆ Popular Front of India (PFI) ಹತ್ಯೆ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಅವರಿಗೆ ಕೇಂದ್ರ ಸರಕಾರ ವೈ ಕೆಟಗರಿ ಭದ್ರತೆ (Y category security) ಘೋಷಿಸಿದ ಬೆನ್ನಲ್ಲೇ ಸಿಬ್ಬಂದಿ ನೇಮಕಾತಿ ನಡೆದಿದೆ.
ಕೇಂದ್ರ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿದೆ. ತಂಡದಲ್ಲಿ ಇಬ್ಬರು ಕಮಾಂಡರ್ ಸೇರಿ 28 ಜನ ಸಿಬ್ಬಂದಿ ಇರುತ್ತಾರೆ. ಕಮಾಂಡರ್‌ಗಳು ಸ್ಟೆನ್ ಗನ್ ಬಳಕೆ ಮಾಡುವ ಅಧಿಕಾರ ಹೊಂದಿದ್ದು, ಎರಡು ಪಾಳಿಯಲ್ಲಿ ಇಬ್ಬರು ಕಮಾಂಡರ್‌ಗಳು ಕೆಲಸ ಮಾಡಲಿದ್ದಾರೆ.
ತಂಡದಲ್ಲಿ ಒಂಬತ್ತು ಮಂದಿ ಪಿಸ್ತೂಲ್ ಬಳಕೆ ಮಾಡುವ ಸಿಬ್ಬಂದಿ ಇರಲಿದ್ದು, ಉಳಿದ ಸಿಬ್ಬಂದಿ ರಾಜ್ಯದ ಪೊಲೀಸ್ ಸಿಬ್ಬಂದಿ ಆಗಿರುತ್ತಾರೆ. ಇದರ ಜೊತೆಗೆ ಇಬ್ಬರು ಪರ್ಸನಲ್ ಸೆಕ್ಯುರಿಟಿ ಆಫೀಸರ್‌ಗಳ ನೇಮಕ ನಡೆದಿದೆ. ಸ್ವಾಮೀಜಿಯವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಈ ಭದ್ರತಾ ಸಿಬ್ಬಂದಿ ಅವರಿಗೆ ಸುರಕ್ಷಾ ಕವಚವಾಗಿ ಕೆಲಸ ಮಾಡಲಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲ, ಸ್ವಾಮೀಜಿಯವರು ತೆಲಂಗಾಣ (Telangana), ಆಂಧ್ರ ಪ್ರದೇಶ (Andhra Pradesh) ಕ್ಕೆ ಹೋದಾಗಲೂ ವೈ ಕೆಟಗರಿ ಭದ್ರತೆಯನ್ನು ಪಡೆಯಲಿದ್ದಾರೆ.