ನವದೆಹಲಿ, ಏ.24-ಕುಖ್ಯಾತ ಗ್ಯಾಂಗ್ಸ್ಟರ್ ರವಿ ಕಾನಾ ತನ್ನ ಪ್ರೇಯಸಿ(ಗರ್ಲ್ಫ್ರೆಂಡ್) ಕಾಜಲ್ ಝಾ ಜೊತೆ ಥೈಲ್ಯಾಂಡ್ ನಲ್ಲಿ ಸಿಕ್ಕಿಬಿದ್ದಿದ್ದಾನೆ, ಹಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶ ಮೂಲದ ಗ್ಯಾಂಗ್ಸ್ಟರ್ ಕಾನಾ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು, ನೋಯ್ಡಾ ಪೊಲೀಸರು ಥಾಯ್ಲೆಂಡ್ ಪೊಲೀಸರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.
ಕಾನಾಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಥಾಯ್ಲೆಂಡ್ ಪೊಲೀಸರಿಗೆ ನೀಡಿದ್ದರು. ಜನವರಿಯಲ್ಲಿ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.
ಕಳೆದ ಜನವರಿ 2 ರಂದು ಗ್ರೇಟರ್ ನೋಯ್ಡಾದಲ್ಲಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ ನಂತರ ಆತನ ವಿರುದ್ಧ ಕಠಿಣ ಉತ್ತರ ಪ್ರದೇಶ ಗ್ಯಾಂಗ್ಸ್ಟರ್ ಮತ್ತು ಸಾಮಾಜಿಕ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಸ್ಕ್ರ್ಯಾಪ್ ವಸ್ತುಗಳ ಅಕ್ರಮ ಸಂಗ್ರಹಣೆ ಮತ್ತು ಮಾರಾಟದಲ್ಲಿ ತೊಡಗಿರುವ 16 ಸದಸ್ಯರ ಗ್ಯಾಂಗ್ ಅನ್ನು ನಡೆಸುತ್ತಿದ್ದ ಕಾನಾ ಹಾಗೂ ಆತನ ಸಹಚರರ ವಿರುದ್ಧ ಅಪಹರಣ ಮತ್ತು ಕಳ್ಳತನದ ಆರೋಪ ಸೇರಿದಂತೆ 11 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಗ್ಯಾಂಗ್‌ನ ಆರು ಸದಸ್ಯರನ್ನು ಈಗಾಗಲೇ ಬಂಧಿಸಲಾಗಿದೆ ಮತ್ತು ಗ್ರೇಟರ್ ನೋಯ್ಡಾದಾದ್ಯಂತ ಗ್ಯಾಂಗ್ ಬಳಸುತ್ತಿದ್ದ ಹಲವಾರು ಸ್ಕ್ರ್ಯಾಪ್ ಗೋಡೌನ್‌ಗಳನ್ನು ಸೀಲ್ ಮಾಡಲಾಗಿದೆ.
ಕಾನಾ ಮತ್ತು ಆತನ ಸಹಚರರ 120 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ನೋಯ್ಡಾ ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿ ಕಾನಾ ತನ್ನ ಗರ್ಲ್ಫ್ರೆಂಡ್ ಹೆಸರಿನಲ್ಲಿ 80 ಕೋರಿ ರೂ. ಮೌಲ್ಯದ ಬಂಗಲೆಯನ್ನು ಕಟ್ಟಿಸಿದ್ದಾನೆ. ಕಾಜಲ್ ಕವಿ ಕಾನಾ ಸ್ಕ್ರ್ಯಾಪ್ ಕಂಪನಿಯ ನಿರ್ದೇಶಕಿಯೂ ಆಗಿದ್ದಾರೆ.
ರವಿ ನಾಗರ್ ಅಲಿಯಾಸ್ ರವಿ ಕಾನಾ ಸ್ಕ್ರ್ಯಾಪ್ ಡೀಲರ್ ಆಗಿದ್ದ, ಈ ವರ್ಷದ ಜನವರಿ 2 ರಂದು ಗ್ರೇಟರ್ ನೋಯ್ಡಾದ ಬೀಟಾ 2 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2023ರ ಡಿಸೆಂಬರ್ 28ರಂದು ಕಾನಾ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣವೂ ದಾಖಲಾಗಿತ್ತು.
ಆತನನ್ನು ಬಂಧಿಸುತ್ತಿದ್ದಂತೆ ಆತನಿಗೆ ಸೇರಿದ ಕಾರ್ಖಾನೆಗಳು, ಕಚೇರಿಗಳು, ವಾಹನಗಳು ಸೇರಿದಂತೆ 200 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸೀಲ್ ಮಾಡಲಾಗಿದೆ.
ಕಳೆದ ಜನವರಿಯಲ್ಲಿ ಪೊಲೀಸರು ಬೀಟಾ 2 ಹಾಗೂ ಇಕೋಟೆಕ್ 1 ಪ್ರದೇಶದ ಮೇಲೆ ದಾಳಿ ನಡೆಸಿದ್ದರು. ಇದಾದ ಬಳಿಕ ಇಕೋಟೆಕ್ ಪ್ರದೇಶದಲ್ಲಿ 5 ಕೋಟಿ ಮೌಲ್ಯದ ಸ್ಕ್ರ್ಯಾಪ್ ಮತ್ತು 30 ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. 20 ಖಾಲಿ ಟ್ರಕ್ ಹಾಗೂ 5 ಕೋಟಿ ರೂ. ಮೌಲ್ಯದ ಸ್ಕ್ರ್ಯಾಪ್ ತುಂಬಿದ ಎರಡು ಟ್ರಕ್ಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. 60 ದೊಡ್ಡ ವಾಹನಗಳನ್ನು ಕೂಡ ಸೀಲ್ ಮಾಡಲಾಗಿದೆ.