ಬೆಂಗಳೂರು – ಜಾತ್ಯತೀತ ಜನತಾದಳದ ಭದ್ರಕೋಟೆ ಹಾಸನದ ರಾಜಕಾರಣ ಕುತೂಹಲಕರ ಘಟ್ಟ ತಲುಪಿದೆ.ಹಾಸನ ಕ್ಷೇತ್ರದ BJP ಶಾಸಕ ಪ್ರೀತಂಗೌಡ ಒಡ್ಡಿರುವ ಸವಾಲು ಸ್ವೀಕರಿಸಿರುವ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಇದನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ ಅದರಲ್ಲೂ ಶಾಸಕ ಪ್ರೀತಂಗೌಡ ಅವರ ಮಾತು ಹಾಗೂ ಕೃತಿ ರೇವಣ್ಣ ಅವರ ಪತ್ನಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಭವಾನಿ ಅವರನ್ನು ಕೆರಳುವಂತೆ ಮಾಡಿದೆ.ತಮ್ಮ ತಾಯಿಯ ಬೆಂಬಲಕ್ಕೆ ಪುತ್ರರಾದ ಸಂಸದ ಪ್ರಜ್ವಲ್,ವಿಧಾನ ಪರಿಷತ್ ಸದಸ್ಯ ಸೂರಜ್ ನಿಂತಿದ್ದಾರೆ.
ಶಾಸಕರ ಸವಾಲು ಸ್ವೀಕರಿಸಿರುವ ತಮ್ಮ ಪತಿಯ ಬೆಂಬಲಕ್ಕೆ ಧಾವಿಸಿರುವ ಭವಾನಿ ಹಾಸನ ವಿಧಾನಸಭಾ ಕ್ಷೇತ್ರದಿಂದ ತಾವೇ ಕಣಕ್ಕಿಳಿಯುವುದಾಗಿ ಘೋಷಿಸಿ,ಬೆಂಬಲಿಗರು,ಪಕ್ಷದ ಕಾರ್ಯಕರ್ತರೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ್ದಾರೆ.
ಇದರ ನಡುವೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಲ್ಲಿನ ಆಂತರಿಕ ಕಲಹ ಬೆಳಕಿಗೆ ಬಂದಿದೆ. ಹಿಂದಿನಿಂದಲೂ ಭವಾನಿ ರೇವಣ್ಣ ಅವರ ರಾಜಕೀಯ ನಡೆಯನ್ನು ವಿರೋಧಿಸುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಲೂ ಅವರ ಸ್ಪರ್ಧೆ ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಈ ಕ್ಷೇತ್ರದಲ್ಲಿ ಮಾಜಿ ಶಾಸಕ ದಿವಂಗತ ಎಚ್.ಎಸ್.ಪ್ರಕಾಶ್ ಅವರ ಪುತ್ರ ಎಚ್.ಪಿ.ಸ್ವರೂಪ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.ಈ ವಿಷಯ ದೇವೇಗೌಡರ ಸಮ್ಮುಖದಲ್ಲಿ ಹಲವು ಬಾರಿ ಚರ್ಚೆಗೆ ಬಂದಿದೆ. ಆದರೆ ಯಾವುದೇ ಒಮ್ಮತದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.ಈ ನಡುವೆ ಸಾಮಾನ್ಯ ಕಾರ್ಯಕರ್ತ ಈ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ ಪ್ರಕಟಿಸಿದ್ದು ರೇವಣ್ಣ ಕುಟುಂಬವನ್ನು ಕೆರಳುವಂತೆ ಮಾಡಿದೆ.
ಇದರ ಪರಿಣಾಮವಾಗಿ ಹಾಸನ ಕ್ಷೇತ್ರದಿಂದ ತಮ್ಮ ಪತ್ನಿ ಭವಾನಿ ರೇವಣ್ಣ ಅವರಿಗೆ ಜೆಡಿಎಸ್ ಟಿಕೆಟ್ ಸಿಗದಿದ್ದರೆ ಅವರನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಮಾಜಿ ಸಚಿವ ರೇವಣ್ಣ ಮುಂದಾಗಿದ್ದಾರೆ.
ಹಾಸನ ಜೆಡಿಎಸ್‌ನ ಭದ್ರಕೋಟೆಯಾಗಿದೆ. ಅಲ್ಲಿ Bjpಯ ಪ್ರೀತಂಗೌಡ ಅವರನ್ನು ಸೋಲಿಸಲೇಬೇಕು. ಹಾಗಾಗಿ, ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಒಂದು ವೇಳೆ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನಿರಾಕರಿಸಿದರೆ ಸ್ವತಂತ್ರವಾಗಿ ಕಣಕ್ಕಿಳಿಸುವುದಾಗಿ ರೇವಣ್ಣ, ಕುಮಾರಸ್ವಾಮಿಯವರಿಗೆ ನೇರವಾಗಿಯೇ ಹೇಳಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ, ಹಾಸನ ಅಭ್ಯರ್ಥಿ ಆಯ್ಕೆ ಜೆಡಿಎಸ್‌ಗೆ ತಲೆನೋವು ತಂದಿದೆ.
ಇದರ ಬೆನ್ನಲ್ಲೇ ಭವಾನಿ ಅವರು ಕ್ಷೇತ್ರದ ಹಲವು ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದು ವಿದ್ಯಮಾನಗಳು ಕುತೂಹಲಕಾರಿ ತಿರುವು ಪಡೆದುಕೊಂಡಿವೆ.