ಬೆಂಗಳೂರು,ಫೆ.21-
IPS ಅಧಿಕಾರಿ ಡಿ.ರೂಪಾ (D Roopa) ಮತ್ತು IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ಕೂಡ ನಡೆಯುತ್ತಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಇಬ್ಬರಿಗೂ ನೋಟೀಸ್ ನೀಡಿ, ಇನ್ನು ಮುಂದೆ ಬಹಿರಂಗವಾಗಿ ಯಾವುದೇ ಹೇಳಿಕೆಗಳನ್ನು ನೀಡದಂತೆ ಇಬ್ಬರ ಬಾಯಿಗೆ ಬೀಗ ಹಾಕಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದಾರೆ.
ಅದರಲ್ಲೂ ಬಹುತೇಕರು ಡಿ.ರೂಪಾ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ರೂಪಾ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಗಳನ್ನು ಉಲ್ಲೇಖಿಸಿ ಪ್ರಶ್ನೆ ಕೇಳಿದ್ದಾರೆ. ಗಮನಾರ್ಹ ಸಂಗತಿಯೇನಂದರೆ ರೂಪಾ ಅವರು ತಾವು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರವನ್ನು ಕೂಡಾ ತಮ್ಮ ಫೇಸ್‌ಬುಕ್ ವಾಲ್ (Facebook) ನಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಕೆಲವು ಗಂಭೀರವಾದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಕೆಲವು ವಿಷಯಗಳು ಅದರಲ್ಲಿವೆ. ಆದರೆ ಈ ಪೋಸ್ಟ್ ಗೆ ಅಂತಹ ದೊಡ್ಡ ಪ್ರಮಾಣದ ಪ್ರತಿಕ್ರಿಯೆ ಬಂದಿಲ್ಲ.
ಇದರ ಬದಲಾಗಿ IAS ಅಧಿಕಾರಿಗಳಿಗೆ ಕಳುಹಿಸಿದ ಪೋಟೋ, ನಗ್ನ ಚಿತ್ರಗಳ ಕುರಿತಾದ ಪೋಸ್ಟ್ ಗೆ ಹೆಚ್ಚಿನ ಪ್ರತಿಕ್ರಿಯೆ ಬಂದಿವೆ. ತಮ್ಮ ಫೇಸ್‌ಬುಕ್‌ನಲ್ಲಿ ಮೆಸೇಜ್ ಡಿಲೀಟ್ ಆಗಿರುವ ಚಿತ್ರಗಳ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಡಿ.ರೂಪಾ, ‘Get well soon ಅಂತಾ ನನಗೆ ಹೇಳಿದ್ದಾರಲ್ಲ ಪತ್ರಿಕಾಗೋಷ್ಠಿಯಲ್ಲಿ ಇವತ್ತು ರೋಹಿಣಿ ಸಿಂಧೂರಿ , ಅವರ ಡಿಲೀಟ್ ಮಾಡಿರುವ ನಗ್ನ ಚಿತ್ರಗಳ ಬಗ್ಗೆ ಮಾತನಾಡುತ್ತಾರಾ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಈ ಪೋಸ್ಟ್‌ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ರೋಹಿಣಿ ಸಿಂಧೂರಿ ಅವರು ಈ ಸಂದೇಶವನ್ನು ಯಾರಿಗೆ ಕಳುಹಿಸಿದ್ದರು ಎಂಬುದನ್ನು ನೀವೇಕೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ರೋಹಿಣಿ ಸಿಂಧೂರಿ ಅವರು ಕಳುಹಿಸಿದ ಸಂದೇಶಗಳು ರೂಪಾ ಅವರಿಗೆ ಸಿಕ್ಕಿದ್ದು ಹೇಗೆ? ರೂಪಾ ಅವರಿಗೆ ಇದನ್ನು ಹಂಚಿಕೊಂಡವರು ಯಾರು? ರೂಪಾ ಅವರ ಅತ್ಯಾಪ್ತರಿಗೆ ಸಿಂಧೂರಿ ಈ ಸಂದೇಶ ಕಳುಹಿಸಿರಬಹುದಾ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಆದರೆ ಸಂದೇಶ ಯಾರಿಗೆ ಕಳುಹಿಸಲಾಗಿದೆ ಎಂಬ ಕುರಿತು ರೂಪಾ ಇದುವರೆಗೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಈಗ ಇವುಗಳಿಗೆ ಅವರು ಉತ್ತರ ನೀಡುವುದು ಸಾಧ್ಯಾವಾ ಎನ್ನುವುದು ಪ್ರಶ್ನೆ. ಯಾಕೆಂದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ. ಹಾಗಾಗಿ ಇನ್ನಷ್ಟು ಕಾಲ ಇವುಗಳ ಬಗ್ಗೆ ಚರ್ಚೆಯಂತೂ ನಡೆಯಲಿದೆ.