ಬೆಂಗಳೂರು, ಮೇ 30- ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ, ತಿರುಚಿದ ಪೋಟೋ, ಅನಗತ್ಯ ವಿವಾದ ಸೃಷ್ಟಿ, ಪ್ರಚೋದನಕಾರಿ ಬರಹ, ಸ್ಟೇಟಸ್ ಗಳನ್ನು ಹಾಕುವುದರ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇಂತಹ ವಿದ್ಯಮಾನಗಳ ಬಗ್ಗೆ ತೀವ್ರ ನಿಗಾ ಇಡುವಂತೆ ಪೊಲೀಸ್ ರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಮಾಹಿತಿಗಳು, ಫೋಟೋಗಳು, ವಿಡಿಯೋಗಳ ಅಬ್ಬರ ಹೆಚ್ಚುತ್ತಿದೆ.ನಾಯಕರ ಫೋಟೋಗಳನ್ನು, ಹೇಳಿಕೆಗಳನ್ನು ತಿರುಚಿ ಹರಿಯಬಿಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಅಪ ಪ್ರಚಾರ ಮಾಡುವ ಮೂಲಕ ಗೊಂದಲ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಸಾಮಾಜಿಕ ಜಾಲತಾಣ ದುರ್ಬಳಕೆ ವಿರುದ್ಧ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಿಯಮಗಳ ಆಧಾರದಲ್ಲಿ ಇಂತಹ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೈಬರ್ ಅಪರಾಧ ವಿಭಾಗಕ್ಕೆ ಸೂಚನೆ ನೀಡಲಾಗಿದೆ.
ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಶಾಸಕರಾದ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್, ಪ್ರಿಯಕೃಷ್ಣ ಸೇರಿದಂತೆ ಅನೇಕರು ಒಂದೆಡೆ ಕುಳಿತು ಊಟ ಮಾಡುತ್ತಿದ್ದರು. ಅವರ ತಟ್ಟೆಯಲ್ಲಿ ಸಸ್ಯಹಾರವಿತ್ತು. ಆದರೆ, ಈ ಫೋಟೋವನ್ನು ತಿರುಚಿ ಅವರೆಲ್ಲರೂ ಮಾಂಸಾಹಾರ ಸೇವನೆ ಮಾಡುತ್ತಿದ್ದಾರೆ ಎಂಬ ರೀತಿಯಲ್ಲಿ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದ.ಎಲ್ಲರ ತಟ್ಟೆಯಲ್ಲೂ ಮಾಂಸಾಹಾರವಿರುವಂತೆ ಬಿಂಬಿಸಲಾಗಿದೆ.
ಡಿ.ಕೆ.ಶಿವಕುಮಾರ್ ಟಿಪ್ಪು ಸಮಾಧಿಗೆ ನಮನ ಸಲ್ಲಿಸುತ್ತಿರುವ ಪೋಟೋ ಹರಿಯಬಿಟ್ಟ ಕಿಡಿಗೇಡಿಗಳು ಫಲಿತಾಂಶ ಬಂದ ಕೂಡಲೆ ಶಿವಕುಮಾರ್ ನಡೆ ನೋಡಿ ಎಂದು ಪ್ರಶ್ನಿಸಿದ್ದರು
ಜನರಿಗೆ ತಪ್ಪು ಮಾಹಿತಿ ನೀಡುವ ಸಲುವಾಗಿ ಈ ರೀತಿಯ ಫೋಟೋಗಳನ್ನು ತಿರುಚಲಾಗಿದೆ ಎಂಬ ಆರೋಪಗಳಿವೆ. ಮತ್ತೊಂದೆಡೆ ನಯನ ಮೋಟಮ್ಮ ಅವರ ಕುರಿತು ಆಕ್ಷೇಪಾರ್ಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇಂತಹ ಘಟನೆಗಳು ಹೆಚ್ಚುತ್ತಿರುವ ನಡುವೆ
ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಶಾಲೆ ಶಿಕ್ಷಕ ಶಿವಮೂರ್ತಿ ಎಂಬುವವರು ಸರ್ಕಾರದ ವಿರುದ್ಧ ಫೋಸ್ಟ್ ಮಾಡಿದ್ದ ಕಾರಣಕ್ಕಾಗಿ ಅಮಾನತುಗೊಂಡಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ 2.42 ಲಕ್ಷ ಕೋಟಿ ಸಾಲ ಮಾಡಿದೆ. ಇದರಿಂದ ಬಿಟ್ಟಿಭಾಗ್ಯ ಕೊಡದೆ ಇನ್ನೇನು ಮಾಡಲು ಸಾಧ್ಯ ಎಂದು ಅವರು ತಮ್ಮ ಫೋಸ್ಟ್‍ನಲ್ಲಿ ವ್ಯಾಖ್ಯಾನಿಸಿದರು.
ಇದು ಸರ್ಕಾರಿ ನೌಕರರ ದುರ್ನಡತೆ ಎಂದು ಪರಿಗಣಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜಿನಪ್ಪ, ಶಾಂತಮೂರ್ತಿ ಅವರನ್ನು ಅಮಾನತುಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದ್ದಕ್ಕಿದ್ದಂತೆ ಕಾಂಗ್ರೆಸ್ ವಿರುದ್ಧದ ಅಪಪ್ರಚಾರಗಳು ಹೆಚ್ಚಾಗಿವೆ.
ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಪ್ರಕಾರ, ಆಕ್ಷೇಪಾರ್ಹ ಮತ್ತು ಆಧಾರ ರಹಿತ ಟೀಕೆ, ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ.ಇದೇ ನಿಯಮ ಆಧರಿಸಿ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡಿರುವವರು ಎಚ್ಚರ ತಪ್ಪಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಸಂದೇಶ ರವಾನಿಸಲಾಗಿದೆ.
Previous Article50kmವರಗೆ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣವಂತೆ!
Next Article Dating App ಮೂಲಕ ವಂಚನೆ