ಬೆಂಗಳೂರು,ಡಿ.6 – ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕತ್ವದ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಬಿಜೆಪಿಯಲ್ಲಿನ ಕೆಲ ನಾಯಿ, ನರಿಗಳಿಂದ ಸ್ವಲ್ಪ ವ್ಯತ್ಯಾಸವಾಗಿ ಸಮಸ್ಯೆಯಾಗಿದೆ’ ಎಂದು ಆಪಾದಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಗುರುಭವನ ಲೋಕಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅರ್ಹತೆ ಯಾರ ಮನೆಯ ಸ್ವತ್ತಲ್ಲ. ಅರ್ಹತೆ ಇಲ್ಲದವರು ಹೇಗೆ ಬೇಕಾದರೂ ನಡೆದುಕೊಳ್ಳಬಾರದು ಎಂಬುದನ್ನು ಹೈಕಮಾಂಡ್ ಕೂಡಾ ಯೋಚನೆ ಮಾಡಬೇಕು ಎಂದು ಹೇಳಿದರು.
ಹೈಕಮಾಂಡ್‌ನವರು ಇದನ್ನು ಸರಿಪಡಿಸುವ ಚಿಂತನೆ ಮಾಡುತ್ತಾರೋ ಏನೋ ಗೊತ್ತಿಲ್ಲ. ನಾನು ತೆರೆದ ಪುಸ್ತಕ, ಓಡಿ ಹೋಗುವವನಲ್ಲ. ಅನಾವಶ್ಯಕವಾಗಿ ನನ್ನನ್ನು ಸಣ್ಣಪುಟ್ಟವರ ಜೊತೆ ಹೋಲಿಕೆ ಮಾಡಬೇಡಿ ಎಂದು ಹೇಳಿದರು.
ಕೆಲವು ಸಂದರ್ಭಗಳಲ್ಲಿ ನನ್ನ ದುರಹಂಕಾರ ನನಗೆ ತೊಂದರೆ ಕೊಟ್ಟಿದೆ. ಮೇಲೆ ಆಕಾಶವಿದೆ ಎಂದು ತಿಳಿಯದೆ ಅತ್ತ ಕಡೆಗೆ ಉಗುಳಿದೆ. ಅದು ನನ್ನ ಮೇಲೆ ಬಿದ್ದಿದೆ. ಅದನ್ನು ಒರೆಸಿಕೊಂಡು ಮುಂದೆ ಹೋಗುವ ಕೆಲಸ ಮಾಡುತ್ತೇನೆ’ ಎಂದರು.
ಬಿಜೆಪಿ ವರಿಷ್ಠರ ಭೇಟಿಗೆ ನ. 30ರಂದು ಸಮಯ ನೀಡಿದ್ದರು. ಅಂದು ಹೋಗಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ಮುಂದೆ ಏನಾಗುವುದೊ ಗೊತ್ತಿಲ್ಲ. ಆಗಿರುವ ತಪ್ಪುಗಳನ್ನು ಹೈಕಮಾಂಡ್ ಯಾವ ರೀತಿ ಸರಿಪಡಿಸಲಿದೆ ಎಂಬುದು ಗೊತ್ತಿಲ್ಲ. ಕೆಲ ದಿನಗಳು ನೋಡುತ್ತೇನೆ. ಎಲ್ಲವನ್ನೂ ಜನರ ಮುಂದೆ ಹೇಳುತ್ತೇನೆ. ನಂತರ ನಿರ್ಧಾರ ಮಾಡುತ್ತೇನೆ’ ಎಂದು ಹೇಳಿದರು.
ನಾನು ಒಂದಕ್ಕೆ ಅಂಟಿಕೊಂಡವನಲ್ಲ. ನನ್ನ ಅರ್ಹತೆ ಪಕ್ಷ ಗುರುತಿಸಿದ್ಯೋ ಇಲ್ಲವೋ ಎನ್ನುವುದನ್ನು ಈಗ ಮಾತನಾಡಲ್ಲ. ಆದರೆ ಒಂದಂತು ಸತ್ಯ. ಅರ್ಹತೆಗೆ ಈ ರೀತಿಯ ಮಾನದಂಡ ಆಗಬಾರದು. ಅರ್ಹತೆ ಅವಕಾಶ ವಂಚಿತ ಆಗಬಾರದು ಎಂದರು.