ಬೆಂಗಳೂರು – ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಹಾಗೂ ಯಶವಂತಪುರ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ (ST Somashekar) ಬಿಜೆಪಿಗೆ ಕೈಕೊಟ್ಟಿದ್ದಾರೆ.
ಈ ಚುನಾವಣೆಯಲ್ಲಿ ಸೋಮಶೇಖರ್ ಅವರು ಅಡ್ಡ ಮತದಾನ ಮಾಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿ ನಾರಾಯಣ ಸಾ ಬಾಂಡೆಗೆ ಅವರ ಗೆಲುವಿಗಾಗಿ ಹೆಚ್ಚುವರಿ ಮತಗಳನ್ನು ನಿಯೋಜಿಸಿದ್ದರು.
ರಾಜ್ಯ ವಿಧಾನಸಭೆಯಲ್ಲಿ 223 ಸದಸ್ಯರಿದ್ದು ಒಬ್ಬ ಅಭ್ಯರ್ಥಿ ಗೆಲುವಿಗೆ 45 ಮತಗಳ ಅಗತ್ಯವಿದೆ. ಬಿಜೆಪಿ ತನ್ನ ಸಂಖ್ಯಾಬಲದ ಆಧಾರದಲ್ಲಿ ಸುಲಭವಾಗಿ ಒಂದು ಕ್ಷೇತ್ರ ಗಳಿಸಬಹುದಾಗಿದೆ. ಇದರ ನಂತರ ತನ್ನಲ್ಲಿರುವ ಹೆಚ್ಚುವರಿ ಮತಗಳನ್ನು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಜೆ ಡಿ ಎಸ್ ಕುಪೇಂದ್ರ ರೆಡ್ಡಿ ಅವರಿಗೆ ಹಂಚಿಕೆ ಮಾಡಿದೆ. ಅದರಂತೆ ತಮ್ಮ ಪಕ್ಷದ ಶಾಸಕರಾಗಿರುವ ಸೋಮಶೇಖರ್ ಅವರಿಗೆ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಸೂಚಿಸಲಾಗಿತ್ತು. ಪಕ್ಷ ಸೂಚಿಸಿದಂತೆ ಸೋಮಶೇಖರ್ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ
ಆದರೆ ಅವರು ಬಿಜೆಪಿ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿಲ್ಲ ಎಂದು ಬಿಜೆಪಿಯ ಚುನಾವಣಾ ಏಜೆಂಟ್ ತಿಳಿಸಿದ್ದಾರೆ .
ಆತ್ಮಸಾಕ್ಷಿ ಮತ:
ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್ ಅವರು ಚುನಾವಣೆಯಲ್ಲಿ ಆತ್ಮಸಾಕ್ಷಿಯ ಮತ ಹಾಕಿದ್ದೇನೆ’ ಎಂದು ಹೇಳಿದರು.
ನಿಯಮಾವಳಿ ಪ್ರಕಾರ ತಾವು ಮತ ಚಲಾಯಿಸಿ ಏಜೆಂಟ್ ಗೆ ತೋರಿಸಬೇಕು ಅದರಂತೆ ತಾವು ತಮ್ಮ
ಆತ್ಮಸಾಕ್ಷಿಯಂತೆ ಮತ ಚಲಾಯಿಸಿ, ಮತ ಪತ್ರವನ್ನು ಚುನಾವಣಾ ಏಜೆಂಟ್ ಗೆ ತೋರಿಸಿದ್ದೇನೆ’ ಎಂದರು.
ಸೋಮಶೇಖರ್ ಅವರು ಅಡ್ಡ ಮತದಾನದ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ. ಆದರೆ, ಅವರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿರುವ ಸಾಧ್ಯತೆ ಇದೆ ಎಂಬ ಚರ್ಚೆ ಶಾಸಕರ ಮಧ್ಯೆ ನಡೆದಿದೆ.
ಮತ ಚಲಾಯಿಸುವ ಮೊದಲು ಮಾತನಾಡಿದ್ದ ಸೋಮಶೇಖರ್, ಕ್ಷೇತ್ರದ ಹಲವು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತಂತೆ ತಾವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಮಾಡಲು ಪ್ರಯತ್ನಿಸಿದ್ದೆ. ಆದರೆ ಅವರು ಕಾಲಾವಕಾಶ ನೀಡಲಿಲ್ಲ’ ಎಂದು ದೂರಿದರು.
ಅಭಿವೃದ್ಧಿಗೆ ಯಾರು ಅನುದಾನ ಕೊಡುತ್ತಾರೋ ಅವರಿಗೆ ಮತ ಹಾಕುತ್ತೇನೆ’ ಎಂದು ಹೇಳಿದ್ದರು.
ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕತ್ವದ ವಿರುದ್ಧ ಮೂನಿಸಿಕೊಂಡಿರುವ ಸೋಮಶೇಖರ್ ಅವರು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜೊತೆ ಗುರುತಿಸಿಕೊಂಡಿದ್ದಾರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮೈಸೂರು ಇಲ್ಲವೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ.