ಬೆಂಗಳೂರು,ಜು.3- ಎಳನೀರು ವ್ಯಾಪಾರಿಯೊಬ್ಬರು ರಸ್ತೆ ಬದಿ ಇರಿಸಿದ್ದ 1,300 ಎಳನೀರು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾವರೆಕೆರೆಯ ಮೋಹನ್ (23) ಬಂಧಿತ ಆರೋಪಿಯಾಗಿದ್ದು, ಆತನಿಂದ ಕೃತ್ಯಕ್ಕೆ ಬಳಸಲಾದ ಟಾಟಾ ಏಸ್ ವಾಹನ,10 ಸಾವಿರ ನಗದು ಜಪ್ತಿ ಮಾಡಲಾಗಿದೆ.
ಆರೋಪಿಯು ಕಳೆದ ಜೂ.28ರಂದು ರಾತ್ರಿ ಜಯನಗರ ನಾಲ್ಕನೇ ಟಿ ಬ್ಲಾಕ್‌ನ ಸುದರ್ಶನ್ ಪಾರ್ಕ್ ಬಳಿ ಇರಿಸಲಾಗಿದ್ದ 1300 ಎಳನೀರು ಕದ್ದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಜಯನಗರ 3ನೇ ಬ್ಲಾಕ್‌ನ ನಾಕಲು ಬಂಡೆ ನಿವಾಸಿ ಚಿಕ್ಕಮರಿಗೌಡ ಎಂಬುವರು ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ ಎಳನೀರು ಖರೀದಿಸಿ ಸುದರ್ಶನ ಪಾರ್ಕ್ ಬಳಿ ಇರಿಸಿಕೊಂಡು ವ್ಯಾಪಾರ ಮಾಡುತ್ತಾರೆ.
ಜೂ.28ರಂದು ಚಾಮರಾಜನಗರ ದಿಂದ1300 ಎಳನೀರು ಖರೀದಿಸಿ ತಂದಿದ್ದ ಚಿಕ್ಕಮರಿಗೌಡ, ಅನಾರೋಗ್ಯದ ಹಿನ್ನೆಲೆಯಲ್ಲಿ ಆ ಎಳನೀರನ್ನು ಸುದರ್ಶನ ಪಾರ್ಕ್ ಬಳಿ ಇಳಿಸಿ ವಿಶ್ರಾಂತಿಗಾಗಿ ಮನೆಗೆ ತೆರಳಿದ್ದರು. ಮಾರನೇ ದಿನ ಬೆಳಗ್ಗೆ ವ್ಯಾಪಾರ ಮಾಡಲು ಪಾರ್ಕ್ ಬಳಿ ಬಂದಾಗ ಎಳನೀರು ಇರಲಿಲ್ಲ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಸಾಲ ತೀರಿಸಲು ಕಳವು:
ಆರೋಪಿ ಮೋಹನ್ ಈ ಹಿಂದೆ ರಸ್ತೆ ಬದಿ ಎಳನೀರು ವ್ಯಾಪಾರ ಮಾಡುತ್ತಿದ್ದ. ಇತ್ತೀಚೆಗೆ ಟಾಟಾ ಏಸ್ ವಾಹನ ಖರೀದಿಸಿದ್ದ. ಕೆಲ ಕಡೆ ಸಾಲ ಮಾಡಿಕೊಂಡಿದ್ದ. ಒಂದು ಕಡೆ ವಾಹನದ ಇಎಂಐ ಮತ್ತೊಂದು ಕಡೆ ಕೈ ಸಾಲ ತೀರಿಸಬೇಕಿತ್ತು. ಹೀಗಾಗಿ ರಸ್ತೆ ಬದಿ, ಪಾರ್ಕ್ಗಳ ಬಳಿ ಎಳನೀರು ಕದಿಯಲು ಪ್ಲಾನ್ ಮಾಡಿದ್ದ. ಅದರಂತೆ ರಾತ್ರಿ ವೇಳೆ ಸುದರ್ಶನ ಪಾರ್ಕ್ ಬಳಿಗೆ ತನ್ನ ವಾಹನ ತಂದು ಎಳನೀರು ತುಂಬಿಕೊಂಡು ಪರಾರಿಯಾಗಿದ್ದ. ಆ ಎಳನೀರನ್ನು ಮುಂಜಾನೆ ಜಯನಗರದ ವಿವಿಧ ಪಾರ್ಕ್ಗಳ ಬಳಿ ತೆರಳಿ ಮಾರಾಟ ಮಾಡಿ ಹಣ ಪಡೆದುಕೊಂಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಸಾಲ ತೀರಿಸಲು ಎಳನೀರು ಕಳ್ಳತನಕ್ಕೆ ಇಳಿದಿದ್ದ ಆರೋಪಿ ಇದೀಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.
Previous Articleಸಿದ್ದರಾಮಯ್ಯ ಸರ್ಕಾರದಲ್ಲಿ YST ತೆರಿಗೆ
Next Article ಯಡಿಯೂರಪ್ಪ ಪಟ್ಟಿಗೆ ಬೆಚ್ಚಿದ ಹೈಕಮಾಂಡ್