ಬೆಂಗಳೂರು, ಅ.16- ತರಿಗೆ ವಂಚನೆಯ ಖಚಿತ ಮಾಹಿತಿ ಆಧರಿಸಿ ಏಕಕಾಲದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ ಮತ್ತು ದೆಹಲಿಯ 55 ಸ್ಥಳಗಳಲ್ಲಿ ದಾಳಿ ನಡೆಸಿ ನಗದು ಸೇರಿ 102 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ.
ಕಳೆದ ಗುರುವಾರ ಬೆಳಿಗ್ಗೆಯಿಂದ ಆರಂಭವಾದ ಈ ಕಾರ್ಯಾಚರಣೆ ಸೋಮವಾರ ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಗುತ್ತಿಗೆದಾರರು, ಅವರ ಸಹಚರರು ಮತ್ತು ಉದ್ಯಮಿಗಳಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ ಈ ಐದು ದಿನಗಳ ಅವಧಿಯಲ್ಲಿ ವಿವಿಧ ಪ್ರದೇಶಗಳಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ದಾಳಿಮಾಡಿ, ಐದು ದಿನಗಳ ಕಾಲ ನಡೆಸಿದ ಶೋಧದಲ್ಲಿ 94 ಕೋಟಿ ರೂಪಾಯಿ ನಗದು ಸೇರಿದಂತೆ 102 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದೆ.
ಈ ದಾಳಿಯಲ್ಲಿ 8 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳು ಹಾಗೂ ವಿದೇಶಿ ನಿರ್ಮಿತ 30 ದುಬಾರಿ ಬೆಲೆಯ ಕೈ ಗಡಿಯಾರಗಳು ವಶಪಡಿಸಿಕೊಂಡ ಆಸ್ತಿಗಳಲ್ಲಿ ಸೇರಿವೆ. ವಾಚ್‌ಗಳನ್ನು ಖಾಸಗಿ ಕಂಪನಿಯೊಂದರ ನೌಕರನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮಂಡಳಿ ಮಾಹಿತಿ ನೀಡಿದೆ.
ಗುತ್ತಿಗೆದಾರರು ನಕಲಿ ಖರೀದಿ ಮತ್ತು ವೆಚ್ಚದ ದಾಖಲೆಗಳನ್ನು ಸೃಷ್ಟಿಸಿ ಆದಾಯವನ್ನು ಕಡಿಮೆ ತೋರಿಸಿ, ತೆರಿಗೆ ವಂಚಿಸುತ್ತಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಉಪ ಗುತ್ತಿಗೆದಾರರಿಂದ ಹೆಚ್ಚಿನ ದರದಲ್ಲಿ ಖರೀದಿ ಮಾಡಿದ ದಾಖಲೆಗಳನ್ನೂ ಸೃಷ್ಟಿಸಿರುವುದು ಪತ್ತೆಯಾಗಿದೆ’ ಎಂದು ತಿಳಿಸಿದೆ.
ಕಾಮಗಾರಿಗಳ ಗುತ್ತಿಗೆಯನ್ನು ಬಳಸಿಕೊಂಡು ಅಪಾರ ಪ್ರಮಾಣದ ಲೆಕ್ಕಪತ್ರವಿಲ್ಲದ ನಗದನ್ನು ಸಂಗ್ರಹಿಸಲಾಗಿದೆ. ಅಲ್ಲದೇ ಅಘೋಷಿತ ಆದಾಯವನ್ನು ಹೊಂದಲಾಗಿದೆ. ಸರಕುಗಳ ಸ್ವೀಕೃತಿಗೆ ಸಂಬಂಧಿಸಿದ ದಾಖಲೆಗಳಲ್ಲೂ ಅಕ್ರಮ ಪತ್ತೆಯಾಗಿದೆ. ದಾಖಲೆಯಲ್ಲಿರುವ ಖರೀದಿ ಪ್ರಮಾಣ ಮತ್ತು ಸಾಗಣೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿದೆ.
ಕೆಲವು ಗುತ್ತಿಗೆದಾರರು ಉಪ ಗುತ್ತಿಗೆದಾರರ ಜತೆ ವಹಿವಾಟು ನಡೆಸಿದಂತೆ ಬೋಗಸ್ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಕೆಲವರು ಕಾಮಗಾರಿಯೇತರ ವೆಚ್ಚವನ್ನು ಲೆಕ್ಕಪತ್ರದಲ್ಲಿ ತೋರಿಸಿದ್ದಾರೆ. ‘ಸಂಪರ್ಕ’ ವೆಚ್ಚವನ್ನೂ ಲೆಕ್ಕಪತ್ರಗಳಲ್ಲಿ ಉಲ್ಲೇಖಿಸಿರುವುದು ಪತ್ತೆಯಾಗಿದೆ ಎಂದು ತಿಳಿಸಿದೆ.
ಈ ಗುತ್ತಿಗೆದಾರರು, ಉದ್ಯಮಿಗಳು ಮತ್ತು ಅವರ ಸಹಚರರು ಭಾರಿ ಪ್ರಮಾಣದ ನಗದು ವಹಿವಾಟನ್ನು ಅಘೋಷಿತವಾಗಿ ನಡೆಸಿರುವುದಕ್ಕೆ ದಾಖಲೆಗಳು ಸಿಕ್ಕಿವೆ. ಅಂತಹ ವಹಿವಾಟಿನ ಕುರಿತು ಲೆಕ್ಕಪತ್ರಗಳಲ್ಲಿ ಯಾವುದೇ ಉಲ್ಲೇಖವಿಲ್ಲ. ತೆರಿಗೆದಾರರು, ಉಪ ಗುತ್ತಿಗೆದಾರರು ಮತ್ತು ಕೆಲವು ನಗದು ನಿರ್ವಾಹಕರ ಬಳಿ ಈ ರೀತಿಯ ಅಕ್ರಮಕ್ಕೆ ಸಾಕ್ಷ್ಯಗಳು ಲಭಸಿವೆ ಎಂದು ಮಾಹಿತಿ ನೀಡಿದೆ.
ತೆರಿಗೆ ವಂಚನೆ, ಅಘೋಷಿತ ನಗದು ವಹಿವಾಟು, ಗುತ್ತಿಗೆಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರದ ಹಾಳೆಗಳು, ಪುಸ್ತಕಗಳು, ಡಿಜಿಟಲ್ ಡೇಟಾ ಸೇರಿದಂತೆ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.