ಬೆಂಗಳೂರು, ಅ.16- ರಾಜ್ಯ ಸರ್ಕಾರದಲ್ಲಿ ಮತ್ತೊಂದು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಆಗ್ರಹ ಮಾಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಆಪ್ತ ಶಾಸಕರೊಂದಿಗೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು,ಆದರೆ ಹೈಕಮಾಂಡ್ ಇದಕ್ಕೆ ಬ್ರೇಕ್ ಹಾಕಿದೆ.
ಶಕ್ತಿ ಪ್ರದರ್ಶನದ ಭಾಗವಾಗಿ ತಮ್ಮ ಆಪ್ತ ವಲಯದ 20ಕ್ಕೂ ಹೆಚ್ಚು ಶಾಸಕರೊಂದಿಗೆ ವಿಶ್ವ ವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ತೆರಳಲು ಸಿದ್ಧತೆ ನಡೆಸಿದ್ದರು. ಶಾಸಕರನ್ನು ಕರೆದುಕೊಂಡು ಹೋಗಲು ಬಸ್ ಕೂಡಾ ಸಿದ್ದವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಹೈಕಮಾಂಡ್, ಸತೀಶ್ ಜಾರಕಿಹೊಳಿ ಅವರ ನಡೆಗೆ ತಡೆ ಒಡ್ಡಿದೆ
ಗುಂಪಾಗಿ ಹೋಗದಂತೆ ಸೂಚನೆ ನೀಡಿದೆ ಎಂದು ಗೊತ್ತಾಗಿದೆ.
ಬಸ್ ನಲ್ಲಿ ಶಾಸಕರನ್ನು ಒಗ್ಗೂಡಿಸಿಕೊಂಡು ಹೋಗುವುದು ಬೇಡ. ಇದು ವಿರೋಧ ಪಕ್ಷಗಳಿಗೆ ಆಹಾರ ಕೊಟ್ಟಂತೆ ಆಗಲಿದೆ ಎಂದು ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮೈಸೂರಿಗೆ ತೆರಳುವುದನ್ನು ಸತೀಶ್ ಜಾರಕಿಹೊಳಿ ಕೈಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ವಿವಿಧ ಪಕ್ಷಗಳ ಶಾಸಕರುಗಳು ಹಲವು ಕಡೆ ಪ್ರವಾಸ ಮಾಡಿದ್ದಾರೆ. ಈ ಬಗ್ಗೆ ನಮ್ಮ ಶಾಸಕರು ಕೂಡ ಪದೇಪದೇ ಪ್ರಸ್ತಾಪಿಸುತ್ತಿದ್ದಾರೆ ಹೀಗಾಗಿ ಪ್ರವಾಸ ಆಯೋಜಿಸಲಾಗಿತ್ತು ಎಂದು ಹೇಳಿದರು.
ಇದು ಬಣ ರಾಜಕೀಯವಲ್ಲ. ಕಾಂಗ್ರೆಸ್‍ನ ಶಾಸಕರು ಮಾತ್ರವೇ ಹೋಗುತ್ತೇವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿಯೇ ಪ್ರವಾಸ ಮಾಡುತ್ತೇವೆ. ಮೈಸೂರು ದಸರಾ ನೋಡಲು ಬನ್ನಿ ಎಂದು ಆ ಭಾಗದ ಶಾಸಕರು ಆಹ್ವಾನ ನೀಡಿದ್ದರು. ಅದರಂತೆ ನಮ್ಮ ಆಪ್ತರು, ನಮ್ಮ ಭಾಗದ ಶಾಸಕರು, ಸಮಾನ ಮನಸ್ಕರು ಹೋಗಲು ನಿರ್ಧರಿಸಿದ್ದೆವು. ಆದರೆ ಅದಕ್ಕೆ ಸಮಯ ಸಿಗಲಿಲ್ಲ. ನಮ್ಮ ಭಾಗದಲ್ಲೇ ಕೆಲವು ಹಬ್ಬಗಳಿರುವುದರಿಂದ ಎಲ್ಲರಿಗೂ ಸಮಯ ಆಗಲಿಲ್ಲ. ಆದರೆ ಮುಂದೊಂದು ದಿನ ಸಮಯ ನಿಗದಿ ಮಾಡಿಕೊಂಡು ಪ್ರವಾಸ ಮಾಡುತ್ತೇವೆ ಎಂದರು