(ಸುದ್ದಿ ವಿಶ್ಲೇಷಣೆ-ಆರ್.ಎಚ್.ನಟರಾಜ್,ಹಿರಿಯ ಪತ್ರಕರ್ತ)
ಕಳೆದ ಒಂಬತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ BJP ಗುಜರಾತ್ ಮತ್ತು ಉತ್ತರ ಪ್ರದೇಶ ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ತನ್ನ ಸ್ವಂತ ಕಾಲ ಬಲದ ಮೇಲೆ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಜಗತ್ತಿನಲ್ಲೇ ಅತ್ಯಧಿಕ ಸದಸ್ಯರನ್ನು ಹೊಂದಿರುವ ಪಕ್ಷ ಎಂಬ ಹೆಗ್ಗಳಿಕೆ ಪಡೆದಿರುವ ಪಕ್ಷಕ್ಕೆ ಇದೊಂದು ದೊಡ್ಡ ಹೊಡತವೇ.
ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದೆ.ಜಗತ್ತಿನ ಗಮನ ಸೆಳೆದಿರುವ ಪ್ರಧಾನಿ ನರೇಂದ್ರ ಮೋದಿ ಅವರಂತಹ ಜನಪ್ರಿಯ ನಾಯಕ ಈ ಪಕ್ಷದ ದಂಡನಾಯಕ.ರಾಜಕೀಯ ಚಾಣಾಕ್ಷ ಎಂದೇ ಖ್ಯಾತರಾದ ಅಮಿತ್ ಶಾ ಈ ಪಕ್ಷದ ಪ್ರಮುಖ ಸೇನಾನಿ.ಹೀಗಿದ್ದರೂ, ರಾಜ್ಯಗಳ ಅಧಿಕಾರ ಚುಕ್ಕಾಣಿ ಹಿಡಿಯಲು ಅಗತ್ಯವಿರುವ ಬಹುಮತ ಗಳಿಸಲು ಸಾಧ್ಯವಾಗದೆ ಮೈತ್ರಿ ಇಲ್ಲವೇ ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯಲಾಗಿದೆ.
ಇಂತಹ ಅಪವಾದ ಕಳಚಿಕೊಂಡು ಹೊರ ಬರುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ಭರ್ಜರಿ ಮುನ್ನುಡಿ ಬರೆಯಬೇಕೆಂಬ ಲೆಕ್ಕಾಚಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಎದುರಿಸಿದ ಬಿಜೆಪಿ ಮುಗ್ಗರಿಸಿ ಬಿದ್ದಿದೆ.ಬಿದ್ದಿರುವ ಹೊಡೆತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತಿದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ರಾಜಕೀಯ ಪಕ್ಷ ಇಂತಹ ಸ್ಥಿತಿ ತಲುಪಬಾರದು.ಚುನಾವಣೆ ರಾಜಕಾರಣದಲ್ಲಿ ಸೋಲು-ಗೆಲುವು ಎನ್ನುವುದು ಒಂದು ಭಾಗ.ಈ ವಿಷಯದಲ್ಲಿ ಈ ಮೊದಲು ಬಿಜೆಪಿ ನಡವಳಿಕೆ ಎಲ್ಲಾ ಪಕ್ಷಗಳಿಗೆ ಮಾದರಿಯಾಗಿತ್ತು. ಸೋಲು- ಗೆಲುವಿನಿಂದ ಹಿಗ್ಗದೆ,ಕುಗ್ಗದೆ ಸಮಾನವಾಗಿ ಸ್ವೀಕರಿಸುವ ಮೂಲಕ ಮುನ್ನಡೆಯುತಿತ್ತು.
ಸೋಲಿನ ಆಘಾತಕ್ಕೆ ಸಿಲುಕಿದರೂ ಮರುದಿನವೇ ಚೇತರಿಸಿಕೊಂಡು ಮುನ್ನಡೆಯುತ್ತಿತ್ತು.
ಆದರೆ ಮೊನ್ನೆ ನಡೆದ ವಿಧಾನಸಭೆ ಚುನಾವಣೆಯ ಸೋಲು ಈ ಪಕ್ಷಕ್ಕೆ ಚೇತರಿಸಿಕೊಳ್ಳಲಾಗದಂತಹ ಆಘಾತವಾಗಿ ಪರಿಣಮಿಸಿದೆ.
ಚುನಾವಣೆಯ ಹೀನಾಯ ಫಲಿತಾಂಶವನ್ನು ಹೇಗೆ ಸ್ವೀಕರಿಸಬೇಕು ಎನ್ನುವ ಗೊಂದಲದಿಂದ ರಾಜ್ಯ ಬಿಜೆಪಿ ಇನ್ನೂ ಹೊರಬಂದಿಲ್ಲ. ಚುನಾವಣೆಯ ಸೋಲನ್ನು ಯಾರ ಹೆಗಲಿಗೆ ಹಾಕಬೇಕು ಎನ್ನುವ ಚರ್ಚೆಯೇ ಪಕ್ಷದೊಳಗೆ ಪೂರ್ಣಗೊಂಡಂತಿಲ್ಲ.
ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಸೋಲಿನ ಹೊಣೆಯನ್ನು ಹೊತ್ತುಕೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಆದರೆ ಈವರೆಗೆ ಆ ಹೊಣೆಯನ್ನು ಅವರು ಯಾವ ರೀತಿಯಲ್ಲಿ ಹೊತ್ತುಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.
ಈ ಹಿಂದೆ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿ ನಾಯಕರು ಸಭೆ ಸೇರಿ ಸೋಲು ಗೆಲುವಿನ ಆತ್ಮಾವಲೋಕನ ಮಾಡುತ್ತಿದ್ದರು ಆನಂತರ ಪಕ್ಷವನ್ನು ಮುಂದೆ ಹೇಗೆ ಸಂಘಟಿಸಬೇಕು ಎಂದು ಚರ್ಚಿಸಿ ಕಾರ್ಯತಂತ್ರ ರೂಪಿಸುತ್ತಿದ್ದರು ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆ ಆಗಬಾರದು ಎಂದು ನಿರ್ಣಯಿಸಿ ಅದಕ್ಕೆ ತಕ್ಕಂತೆ ಹೊಸ ನಾಯಕತ್ವ ಕ್ಕೆ ಪಟ್ಟ ಕಟ್ಟಿ ಮುನ್ನಡೆಯುತ್ತಿದ್ದರು.
ಆದರೆ ಈಗ ಫಲಿತಾಂಶ ಹೊರಬಿದ್ದು ತಿಂಗಳುಗಳ ಕಳೆದಿದೆ ಇಲ್ಲಿವರೆಗೆ ಸರಿಯಾದ ರೀತಿಯಲ್ಲಿ ಆತ್ಮಾವಲೋಕನ ನಡೆದಿಲ್ಲ. ಅಧಿಕೃತ ಪ್ರತಿಪಕ್ಷ ಎಂಬ ಮಾನ್ಯತೆ ಪಡೆದಿದ್ದರೂ ಇಲ್ಲಿಯವರೆಗೆ ಪ್ರತಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆ ಆರಂಭವಾಗಿಲ್ಲ ರಾಜ್ಯ ಅಧ್ಯಕ್ಷರ ಅಧಿಕಾರ ಅವಧಿ ಪೂರ್ಣಗೊಂಡು ವರ್ಷಗಳೇ ಕಳೆದರೂ ನೂತನ ಅಧ್ಯಕ್ಷರ ನೇಮಕಾತಿ ಕುರಿತಂತೆ ಚರ್ಚೆ ನಡೆದಿಲ್ಲ ಇದು ಪಕ್ಷ ಸದ್ಯ ನಡೆಯುತ್ತಿರುವ ದಾರಿಯನ್ನು ತೋರಿಸುತ್ತದೆ.
ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಅತ್ಯಂತ ಪ್ರಮುಖ ಕಾರಣಗಳಲ್ಲಿ ಒಂದಾದ ಅಸಂಬದ್ಧ, ಅಪ್ರಭುದ್ಧ ಹಾಗೂ ಪ್ರಚೋದನಕಾರಿ ಹೇಳಿಕೆಗಳು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ ಈಗ ಚುನಾವಣೆ ಮುಗಿದು ಜನ ತೀರ್ಪು ಕೊಟ್ಟಿದ್ದಾರೆ ಆದರೂ ನಾಯಕರು ಪಾಠ ಕಲಿತಿಲ್ಲ ಚುನಾವಣೆಗೆ ಪೂರ್ವದಲ್ಲಿ ನೀಡುತ್ತಿದ್ದ ಬೇಜವಾಬ್ದಾರಿ ಹೇಳಿಕೆಗಳನ್ನು ಅವರು ಮುಂದುವರಿಸಿದ್ದಾರೆ.
ಯಾಕೆ ಹೀಗೆ ಅಂದರೆ ಬಾಯಿಗೆ ಬಂದಂತೆ ಮಾತನಾಡುವ ಶಾಸಕರು ನಾಯಕರು ಮತ್ತು ಕಾರ್ಯಕರ್ತರ ಬಾಯಿಗೆ ಬೀಗ ಹಾಕುವ ನಾಯಕತ್ವ ಇಲ್ಲವಾಗಿದೆ ಯಾರು ಏನು ಮಾಡಿದರೂ ಕೇಳುವರು ಇಲ್ಲ ಎಂಬ ಸ್ಥಿತಿಗೆ ರಾಜ್ಯ ಬಿಜೆಪಿ ತಲುಪಿದೆ ಹೀಗಾಗಿ ಹಲವರು ಬೇಜವಾಬ್ದಾರಿ ಕರೆಗಳನ್ನು ನೀಡುತ್ತಾ, ಪಕ್ಷದ ಹೋದ ಮಾನವನ್ನು ಸಾರ್ವಜನಿಕವಾಗಿ ಇನ್ನಷ್ಟು ಹರಾಜಿಗಿಡುತ್ತಿದ್ದಾರೆ. ಸರಿಯಾದ ನಾಯಕರನ್ನು ಪಕ್ಷ ಆರಿಸದೇ ಇರುವ ಕಾರಣದಿಂದ, ಎಲ್ಲರೂ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಭಾರಿ ಬಹುಮತ ಗಳಿಸಿ ಅತ್ಯುತ್ಸಾಹದಿಂದ ಮುನ್ನಡೆಯುತ್ತಿರುವ ಆಡಳಿತ ಪಕ್ಷದ ತಪ್ಪುಗಳನ್ನು ಎತ್ತಿ ತೋರಿಸಿ,ಸರಿದಾರಿಗೆ ತರುವ ಜವಾಬ್ದಾರಿ ಪ್ರತಿಪಕ್ಷದ ಮೇಲೂ ಇದೆ.ಅತ್ಯುತ್ಸಾಹದಿಂದ ಮುನ್ನಡೆಯುತ್ತಿರುವ ಸರ್ಕಾರ ತಪ್ಪು ಹೆಜ್ಜೆ ಇಡದಂತೆ ನೋಡಿಕೊಳ್ಳಬೇಕು.ಹಿಂದಿನ ಸರ್ಕಾರ, ಕಾಮಗಾರಿ ಗುತ್ತಿಗೆಗಳಲ್ಲಿ ಅಕ್ರಮ ನಡೆಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಲವು ಗುತ್ತಿಗೆ ಕಾಮಗಾರಿಗಳನ್ನು ರದ್ದುಪಡಿಸಲಾಗಿದೆ ಜೊತೆಗೆ ಗುತ್ತಿಗೆದಾರರಿಗೆ ನೀಡಬೇಕಿರುವ ಬಾಕಿ ಬಿಲ್ ಪಾವತಿಸದಂತೆ ನಿರ್ಬಂಧ ವಿಧಿಸಲಾಗಿದೆ.
ಅಕ್ರಮ ತಡೆಗಟ್ಟುವ ದೃಷ್ಟಿಯಿಂದ ಇದೊಂದು ಉತ್ತಮ ನಿರ್ಧಾರ ಎನ್ನಬಹುದಾದರೂ ನ್ಯಾಯಯುತವಾಗಿ ಕಾಮಗಾರಿ ಟೆಂಡರ್ ಪಡೆದು ಕೆಲಸ ಪೂರ್ಣಗೊಳಿಸಿರುವ ಗುತ್ತಿಗೆದಾರರು ತಾನು ಮಾಡಿದ ಕೆಲಸಕ್ಕೆ ಪಾವತಿಯಾಗದೆ ಇರುವುದರಿಂದ ತೊಂದರೆ ಅನುಭವಿಸುತ್ತಿದ್ದಾನೆ ಇದನ್ನು ಸರ್ಕಾರದ ಗಮನಕ್ಕೆ ತರಬೇಕಾದ ಪ್ರತಿಪಕ್ಷ ನಾವಿಕನಿಲ್ಲದ ದೋಣಿಯಂತಾಗಿದೆ.
ಸೋಲಿನಿಂದ ಚೇತರಿಸಿಕೊಂಡು ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಸಮರ್ಥ ರೀತಿಯಲ್ಲಿ ಸಂಘಟಿಸಬೇಕಾದ ಬಿಜೆಪಿ ನಾಯಕತ್ವ ಇನ್ನೂ ಚುನಾವಣೆಯ ಸೋಲಿನ ಗುಂಗಿನಿಂದ ಹೊರಬಂದಿಲ್ಲ ಈ ಸೋಲಿನ ಹೊಣೆಗಾರಿಕೆಯನ್ನು ಯಾರು ಹೊರಬೇಕು ಸೋಲಿನ ಹಿನ್ನೆಲೆಯಲ್ಲಿ ಯಾರ ತಲೆದಂಡವಾಗಬೇಕು. ಯಾರ ಹೆಗಲಿಗೆ ಈ ಸೋಲನ್ನು ಕಟ್ಟಬೇಕು ಎಂಬ ಪಿತೂರಿಯಲ್ಲಿಯೇ ನಾಯಕತ್ವ ಕಾಲ ಕಳೆಯುತ್ತಿದೆ.
ಮೊತ್ತ ಮೊದಲಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲು ತಕ್ಷಣ ರಾಜೀನಾಮೆ ನೀಡಬೇಕಾಗಿದೆ. ಯಾಕೆಂದರೆ, ಅವರು ನೆಪ ಮಾತ್ರಕ್ಕಷ್ಟೇ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಅವರನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿಯಲ್ಲಿ ಆಡಳಿತ ನಡೆಸಿದವರೇ ಬೇರೆ. ದೂರದ ದಿಲ್ಲಿಯಲ್ಲೋ, ನಾಗಪುರದಲ್ಲೋ ಬೆಂಗಳೂರಿನ ಕೇಶವಕೃಪದಲ್ಲೂ ಕುಳಿತು ನಿರ್ದೇಶನ ನೀಡಿದರು ಅದನ್ನು ಪಾಲನೆ ಮಾಡಿದ್ದಷ್ಟೇ ನಳಿನ್ ಕುಮಾರ್ ಕಟೀಲ್ ಅವರ ಕೆಲಸ.
ಅವರ ಈ ಕಾರ್ಯವೈಖರಿಯಿಂದಾಗಿ ಕಟೀಲ್
ಚುನಾವಣಾ ಫಲಿತಾಂಶದ ಬಳಿಕ ಕರಾವಳಿಯೂ ಸೇರಿದಂತೆ ರಾಜ್ಯ ಬಿಜೆಪಿಯೊಳಗೆ ಅವರು ತೀವ್ರ ನಗೆಪಾಟಲಿಗೀಡಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ವಿರುದ್ಧ ಸಂಘ ಪರಿವಾರ ಮತ್ತು ಬಿಜೆಪಿಯ ಕಾರ್ಯಕರ್ತರು ತೀವ್ರ ದಾಳಿಗಳನ್ನು ನಡೆಸುತ್ತಿದ್ದಾರೆ.
ಆದರೆ ಚುನಾವಣೆಯ ಸೋಲಿಗೆ ಯಾವ ಕಾರಣಕ್ಕೂ ನಳಿನ್ ಕುಮಾರ್ ಕಟೀಲರನ್ನು ಹೊಣೆ ಮಾಡುವಂತಿಲ್ಲ. ದುರ್ಬಲ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿಯ ನಿಯಂತ್ರಣವನ್ನು ಕೈಗೆತ್ತಿಕೊಂಡಿರುವುದು ಕೇಶವ ಕೃಪಾ ಮತ್ತು ದೆಹಲಿಯಲ್ಲಿ ಕುಳಿತ ಪ್ರಭಾವಿ ನಾಯಕರು.ನಳಿನ್ ಕುಮಾರ್ ಕಟೀಲು ಅವರನ್ನು ಮುಂದಿಟ್ಟುಕೊಂಡು, ಬಿಜೆಪಿಯ ಚುನಾವಣೆಯ ರೂಪುರೇಷೆಗಳನ್ನು ಮಾಡಿರುವುದು ಆರೆಸ್ಸೆಸ್. ಯಾರಿಗೆ ಟಿಕೆಟ್ ನೀಡಬೇಕು, ನೀಡಬಾರದು ಎನ್ನುವುದನ್ನು ಅಂತಿಮಗೊಳಿಸಿರುವುದು ಆರೆಸ್ಸೆಸ್‌ನ ಮುಖಂಡರು. ಇದರಲ್ಲಿ ರಾಜ್ಯಾಧ್ಯಕ್ಷರ ಯಾವ ಪಾತ್ರವೂ ಇಲ್ಲ ಎನ್ನುವುದು ಬಿಜೆಪಿಯ ತಳಮಟ್ಟದ ಕಾರ್ಯಕರ್ತರಿಗೂ ತಿಳಿದಿರುವ ಸತ್ಯ.
ಇನ್ನು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ ಸ್ಥಿತಿಯು ಇದೇ ರೀತಿಯಾಗಿಯೇ ಇತ್ತು. ಮುಖ್ಯಮಂತ್ರಿಯಾಗಿ ದೈನಂದಿನ ಆಡಳಿತ ನಿರ್ವಹಣೆ ಮಾಡಿದ್ದನ್ನು ಬಿಟ್ಟರೆ ಸ್ವತಂತ್ರವಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ಅವರಿಗೆ ಇರಲಿಲ್ಲ ಕೇಶವಕೃಪಾದಿಂದ ಬಂದ ಆದೇಶಗಳನ್ನು ಪಾಲಿಸುವುದು ಮತ್ತು ಆ ಬಗ್ಗೆ ವಿವಾದಗಳಾದರೆ ಅದನ್ನು ಸಮರ್ಥಿಸುವುದಷ್ಟೇ, ಮುಖ್ಯಮಂತ್ರಿಯ ಕೆಲಸವಾಗಿತ್ತು.
ಇನ್ನು ಚುನಾವಣೆಯ ಸಮಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಕೇವಲ ಉತ್ಸವ ಮೂರ್ತಿ ಆಗಿದ್ದರು. ಯಾವುದೇ ಅಭ್ಯರ್ಥಿಗಳ ಆಯ್ಕೆ ಇರಲಿ, ಚುನಾವಣಾ ಪ್ರಚಾರ ತಂತ್ರ ಇರಲಿ, ಎದುರಾಳಿಗಳನ್ನು ಮಣಿಸುವ ಕಾರ್ಯ ಯೋಜನೆ ಯಾಗಲಿ, ಯಾವುದರಲ್ಲೂ ಇವರ ಮಾತು ನಡೆಯುತ್ತಿರಲಿಲ್ಲ. ಆದರೂ ಚುನಾವಣೆ ಮುಗಿದ ನಂತರ ಬೊಮ್ಮಾಯಿ ಸೋಲಿನ ನೈತಿಕ ಹೊಣೆ ಹೊತ್ತುಕೊಂಡರು
ಹೀಗಾಗಿ ಚುನಾವಣೆಯ ಸೋಲಿಗೆ ಇವರು ಕೂಡ ಕಾರಣರಲ್ಲ ಹಾಗಾದರೆ ಸೋಲಿನ ಹೊಣೆಯನ್ನು ಹೊರಬೇಕಾದವರು ಯಾರು? ಚುನಾವಣೆಯ ನೇತೃತ್ವವನ್ನು ಕೇಂದ್ರ ವರಿಷ್ಠರು ಯಡಿಯೂರಪ್ಪ ತಲೆಗೆ ಕಟ್ಟಿದ್ದರು. ಇಲ್ಲಿಯೂ ಅವರು ಕೇವಲ ಉತ್ಸವ ಮೂರ್ತಿ ಅಷ್ಟೇ. ಯಾವುದರಲ್ಲೂ ಯಡಿಯೂರಪ್ಪ ಅವರ ಅಭಿಪ್ರಾಯ ಮತ್ತು ಕಾರ್ಯತಂತ್ರ ಗಳಿಗೆ ಮಾನ್ಯತೆ ಇರಲಿಲ್ಲ ಇದನ್ನು ಕಂಡ ಯಡಿಯೂರಪ್ಪ ತನ್ನನ್ನು ಆರೆಸ್ಸೆಸ್ ಹೆಸರಿನಲ್ಲಿ ಕೆಲವು ಕಾಣದ ಕೈಗಳು ಬಳಸಿಕೊಳ್ಳುತ್ತಿವೆ ಎನ್ನುವುದು ಸ್ಪಷ್ಟವಿದ್ದ ಕಾರಣ, ಪೂರ್ಣ ಪ್ರಮಾಣದಲ್ಲಿ ಯಡಿಯೂರಪ್ಪ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲಿಲ್ಲ.
ಈಗಾಗಲೇ ಗಲೇ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದ ಯಡಿಯೂರಪ್ಪ ಹೆಗಲಿಗಂತೂ ಸೋಲಿನ ಹೊಣೆಯನ್ನು ಹೊರಿಸುವಂತಿಲ್ಲ.
ಬಿಜೆಪಿಯನ್ನು ಗೆಲ್ಲಿಸುವ ದೃಷ್ಟಿಯಿಂದಲೇ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಪದೇ ಪದೇ ರಾಜ್ಯದಲ್ಲಿ ಪ್ರವಾಸ ಗೈದಿದ್ದರು. ಅಬ್ಬರದ ರೋಡ್ ಶೋಗಳನ್ನು ನಡೆಸಿದ್ದರು. ಈ ರೋಡ್ ಶೋ ಗಾಗಿ ಬಂದ ಜನರನ್ನು ನೋಡಿ ಪುಳಕಿತಗೊಂಡ ಪ್ರಧಾನಿ ಮೋದಿ ಅವರಂತೂ ಕರ್ನಾಟಕದಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ ಎಂದು ಭಾವಿಸಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತೂ ದ್ವೇಷ ಭಾಷಣಗಳ ಮೂಲಕ ಚುನಾವಣೆಯಲ್ಲಿ ಸುದ್ದಿಯಾದರು. ಮೋದಿ ಪ್ರವಾಸ, ಅವರ ನೇತೃತ್ವದ ರೋಡ್‌ಶೋ, ಸಮಾವೇಶಗಳು ಚುನಾವಣೆಯ ಫಲಿತಾಂಶವನ್ನು ಬದಲಿಸುತ್ತದೆ ಎಂದು ಬಿಜೆಪಿ ನಾಯಕರು ನಂಬಿದ್ದರು.
ಆದರೆ ಕರ್ನಾಟಕದ ಜನತೆ ಅಬ್ಬರದ ರೋಡ್ ಶೋ ಬೆಂಕಿ ಉಗುಳುವ ಮಾತು ಮತ್ತು ಅಹಂಕಾರದ ನಡವಳಿಕೆಯನ್ನು ಎಂದಿಗೂ ಸಹಿಸುವುದಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಹೀಗಾಗಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕೂಡ ಬಿಜೆಪಿಯ ಸೋಲಿನ ಪ್ರಮುಖ ಹೊಣೆಗಾರರು ಎನ್ನುವುದು ನಿರ್ವಿವಾದ.
ಸ್ಥಳೀಯ ನಾಯಕತ್ವ ಹಾಗೂ ಸ್ಥಳೀಯವಾಗಿ ಇರುವ ಸಮಸ್ಯೆಗಳ ಬಗ್ಗೆ ಗಮನಹರಿಸದೆ ರಾಜ ಮಹಾರಾಜರ ಕಾಲದಲ್ಲಿ ನಡೆಯುತ್ತಿದ್ದ ಅಶ್ವಮೇಧ ಯಾಗ ಇಲ್ಲವೇ ದಂಡೆತ್ತಿ ಬಂದ ರೀತಿಯಲ್ಲಿ ನಡೆಯುತ್ತದೆ ಎಂದು ಭಾವಿಸಿದ ಬಿಜೆಪಿ ನಾಯಕರಿಗೆ ರಾಜ್ಯದ ಮತದಾರ ಉತ್ತರ ನೀಡಿದ್ದಾನೆ.
ಮತದಾರ ನೀಡಿದ ಉತ್ತರವನ್ನು ತಾನು ಕಲಿತ ಪಾಠ ಎಂದು ತಿಳಿದು ಬಿಜೆಪಿ ನಾಯಕತ್ವ ಮುನ್ನಡೆಯಬೇಕಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿರುವ ಜನರ ನಾಡಿ ಮಿಡಿತ ಬಲ್ಲ ನಿಜವಾದ ಅರ್ಥದ ಜನನಾಯಕರಿಗೆ ಪಕ್ಷ ಮುನ್ನಡೆಸುವ ಪಟ್ಟ ಕಟ್ಟಬೇಕು.
ರಾಜಕೀಯ ಪಕ್ಷ ಎನ್ನುವುದು ಸಾಂಸ್ಕೃತಿಕ ಸಂಘಟನೆ ಅಲ್ಲ ಇದು ಸಂಪೂರ್ಣವಾಗಿ ರಾಜಕೀಯ ಕೇಂದ್ರೀಕೃತವಾದ ಚಟುವಟಿಕೆಗಳನ್ನು ನಡೆಸುವ ಸಂಘಟನೆ ಎಂಬುದನ್ನು ಮನಗಾಣಬೇಕು. ಸಂಘ ಪರಿವಾರ ಒಂದು ಸಾಂಸ್ಕೃತಿಕ ಸಂಘಟನೆ ಅದು ಎಂದಿಗೂ ರಾಜಕೀಯ ಸಂಘಟನೆಯಾಗಿ ರಾಜಕೀಯ ಹೈಕಮಾಂಡ್ ರೀತಿಯಲ್ಲಿ ವರ್ತಿಸಲು ಸಾಧ್ಯವಿಲ್ಲ.
ಹೀಗಾಗಿ ಸಂಘ ಪರಿವಾರ ಕೃಪಾಪೋಷಿತ ನಾಟಕ ಮಂಡಳಿಯ ಪಾತ್ರದಾರರಿಗೆ ಪಕ್ಷದ ನಾಯಕತ್ವ ನೀಡಿದಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ ಹೀಗೆ ಮಾಡಿದರೆ ಈ ರಾಜಕೀಯ ಪಕ್ಷವಾದ ಬಿಜೆಪಿ ಕೂಡ ಸಂಘ ಪರಿವಾರದ ರೀತಿಯಲ್ಲಿ ಒಂದು ಸಾಂಸ್ಕೃತಿಕ ಸಂಘಟನೆಯಾಗಿ ಕೆಲಸ ಮಾಡಲಿದೆ ನಿರ್ದಿಷ್ಟ ಕಾರ್ಯ ಸೂಚಿ ಸ್ಪಷ್ಟವಾದ ಸಿದ್ಧಾಂತ ಹೊಂದಿರುವ ಇಂತಹ ಸಂಘಟನೆಯಿಂದ ರಾಜಕೀಯ ನಾಯಕತ್ವ ನಿರೀಕ್ಷಿಸಲು ಸಾಧ್ಯವಿಲ್ಲ ಇದನ್ನು ಮನಗಂಡ ಬಿಜೆಪಿ ನಾಯಕತ್ವ ತತ್ವ ಸಿದ್ಧಾಂತದ ಜೊತೆಗೆ ಜನರ ಸಮಸ್ಯೆಗಳ ಉದ್ದ ಆಳದ ಅರಿವಿರಬೇಕು ಸಂಕಷ್ಟಕ್ಕೆ ಮರುಗುವ ತಾಯಿ ಹೃದಯ ಅನ್ಯಾಯದ ವಿರುದ್ಧ ಸಿಡಿದೇಳುವ ಸಿಂಹದಂತ ಧೈರ್ಯ ಇರುವ ನಾಯಕತ್ವಕ್ಕೆ ಪಟ್ಟ ಕಟ್ಟಬೇಕು.
ಬಿಜೆಪಿಯ ಪ್ರೇರಕ ಶಕ್ತಿಯಾಗಿರುವ ಸಂಘ ಪರಿವಾರ ಈ ಹಿಂದೆ ಇಂತಹದೇ ಮಾನದಂಡವನ್ನು ಅನುಸರಿಸುತ್ತಿತ್ತು ಆದರೆ ಪರಿಣಾಮವಾಗಿಯೇ ಬಿಬಿ ಶಿವಪ್ಪ, ಯಡಿಯೂರಪ್ಪ , ಅನಂತಕುಮಾರ್ ಈಶ್ವರಪ್ಪ, ಜಗದೀಶ್ ಶೆಟ್ಟರ್ ಸದಾನಂದ ಗೌಡ ಅವರಂತಹ ನಾಯಕರು ಪಕ್ಷದ ಚುಕ್ಕಾಣಿ ಹಿಡಿದು ಯಶಸ್ಸು ಗಳಿಸಿದ್ದಾರೆ ಅಷ್ಟೇ ಅಲ್ಲ ಜನರ ವಿಶ್ವಾಸಕ್ಕೂ ಪಾತ್ರರಾಗಿದ್ದಾರೆ.
ಇಂತಹ ನಾಯಕತ್ವ ಈಗ ಬಿಜೆಪಿಯ ಅಗತ್ಯವಾಗಿದೆ. ಯಾರದೋ ಅಣತಿಯಂತೆ ನಡೆಯುವ ಮತ್ಯಾರದೋ ಕೈ ಸನ್ನೆಗೆ ಕುಣಿಯುವ ನಾಯಕತ್ವ ರಾಜ್ಯದ ಜನತೆಗೆ ರುಚಿಸುವುದಿಲ್ಲ ಇಂತಹ ಉದ್ಭವ ಮೂರ್ತಿಗಳನ್ನು ರಾಜ್ಯದ ಜನತೆ ಎಂದಿಗೂ ಪ್ರೋತ್ಸಾಹಿಸುವುದಿಲ್ಲ ಹೀಗಾಗಿ ಜನರ ಮಧ್ಯ ಜನರಿಂದಲೇ ರೂಪಿತಕೊಳ್ಳುವ ವ್ಯಕ್ತಿಗಳಿಗೆ ನಾಯಕತ್ವ ನೀಡಬೇಕು ಇದು ಕೇವಲ ಬಿಜೆಪಿ ಅಗತ್ಯ ಮಾತ್ರವಲ್ಲ ಕರ್ನಾಟಕದ ಅಗತ್ಯವೂ ಕೂಡ ಆಗಿದೆ ಯಾಕೆಂದರೆ ಆಡಳಿತ ಪಕ್ಷ ಎಷ್ಟು ಪ್ರಬಲವಾಗಿರುತ್ತದೆಯೋ ಅಷ್ಟೇ ಪ್ರಬಲ ವಿರೋಧ ಪಕ್ಷದಿಂದ ಪ್ರಜಾತಂತ್ರದ ಸೌಂದರ್ಯವನ್ನು ಹೆಚ್ಚಿಸಲು ಸಾಧ್ಯ. ಬಿಜೆಪಿಗೆ ಇಂತಹ ಅವಕಾಶವಿದ್ದು ಅದನ್ನು ಕಾರ್ಯರೂಪಕ್ಕೆ ತರುವುದು ಅತ್ಯಗತ್ಯವಾಗಿದೆ.
1 ಟಿಪ್ಪಣಿ
снятие ломки недорого snyatie-lomki-narkolog.ru .