ಬೆಂಗಳೂರು,ಫೆ.24- ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿರುವ ಶೇಕಡ 40ರಷ್ಟು ಕಮಿಷನ್ ಆರೋಪ ಹಾಗೂ ಸಾಲು ಸಾಲಾಗಿ ಹೊರಬರುತ್ತಿರವ ಹಗರಣಗಳನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ವಿರುದ್ಧ ಇವರು ಮಾಡುತ್ತಿರುವ ಆರೋಪಗಳು ನಿಜವಾಗಿದ್ದರೆ ಇಷ್ಟು ದಿನಗಳ ಕಾಲ ಏನು ಮಾಡುತ್ತಿದ್ದರು ಜೈಲಿಗೆ ಯಾಕೆ ಹಾಕಲಿಲ್ಲ ಎಂದು ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ತಾವಿಲ್ಲದ ಸಮಯದಲ್ಲಿ ಅವರು ಮಾಡಿರುವ ಯಾವ ಆರೋಪಗಳಿಗೂ ಆಧಾರವಿಲ್ಲ ಎಂದು ಸ್ಪಷ್ಟ ಪಡಿಸಿದರು.
2003ರಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣ ಪ್ರಾರಂಭವಾಯಿತು.ನಾನು ಅಧಿಕಾರಕ್ಕೆ ಬರುವ ಮೊದಲೇ 2,750 ಎಕರೆ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ನಂತರ 1,919 ಎಕರೆ 13 ಗುಂಟೆ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಅದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಹೈಕೋರ್ಟ್ ಆದೇಶದಂತೆ ಭೂಸ್ವಾಧೀನ ಪ್ರಕ್ರಿಯೆ ಕುರಿತು ಪರಿಶೀಲನೆಗೆ ಅಧಿಕಾರಿಗಳ ತಂಡ ರಚಿಸಲಾಗಿತ್ತು’ ಎಂದರು.
‘ಅಧಿಕಾರಿಗಳು ವರದಿ ನೀಡುವಾಗ ಚುನಾವಣಾ ನೀತಿಸಂಹಿತೆ ಜಾರಿಗೆ ಬಂದಿತ್ತು. ಆದ್ದರಿಂದ ಅವರು ಕಡತವನ್ನು ಅನುಮೋದಿಸಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಹೈಕೋರ್ಟ್‌ನಲ್ಲಿ ಒಂದು ಅರ್ಜಿ ಬಾಕಿ ಇತ್ತು. ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾನದಂಡಗಳ ಆಧಾರದಲ್ಲಿ ಪರಿಷ್ಕೃತ ಯೋಜನೆ ರೂಪಿಸಿರುವುದಾಗಿ ಅಧಿಕಾರಿಗಳು ವಿವರಿಸಿದರು. ಆ ಬಳಿಕ ನಾನು ಕಡತಕ್ಕೆ ಅನುಮೋದನೆ ನೀಡಿದೆ’ ಎಂದು ಹೇಳಿದರು.
‘ಅದು ರೀ–ಡೂ ಅಲ್ಲ. ರೀ ಮಾಡಿಫೈಡ್ ಸ್ಕೀಂ. ನಮ್ಮ ಅವಧಿಯಲ್ಲಿ ಯಾವುದೇ ಜಮೀನಿನ ಡಿನೋಟಿಫಿಕೇಷನ್ ನಡೆದಿರಲಿಲ್ಲ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಗಿನ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪ ಮಾಡಿದ್ದರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಅಧ್ಯಕ್ಷತೆಯಲ್ಲಿ ವಿಚಾರಣಾ ಆಯೋಗ ರಚಿಸಿದ್ದೆ. ಯಾವ ಅಕ್ರಮವೂ ನಡೆದಿಲ್ಲ ಎಂದು ಆಯೋಗ ಹೇಳಿದೆ. ಇದೆಲ್ಲವೂ ತಿಳಿಯದವರಂತೆ ಬೊಮ್ಮಾಯಿ ಆರೋಪ ಮಾಡಿದ್ದಾರೆ’ ಎಂದರು.
ಕೆಂಪಣ್ಣ ಆಯೋಗದ ವರದಿ ಪರಿಶೀಲನೆಗಾಗಿ ನಿವೃತ್ತ ನ್ಯಾಯಮೂರ್ತಿ ಕೇಶವ ನಾರಾಯಣ ಅಧ್ಯಕ್ಷತೆಯಲ್ಲಿ ಹೈಕೋರ್ಟ್ ಸಮಿತಿ ನೇಮಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಸಂದೀಪ್ ದವೆ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಎನ್.ಎಸ್. ಮೇಘರಿಕ್ ಸಮಿತಿಯಲ್ಲಿದ್ದಾರೆ. ವಿಷಯ ಈಗ ಸಮಿತಿಯ ಮುಂದಿದೆ. ಇಂತಹ ಸಂದರ್ಭದಲ್ಲಿ ಸುಳ್ಳು ಆರೋಪ ಮಾಡುವುದು ಸರಿಯೆ ಎಂದು ಪ್ರಶ್ನಿಸಿದರು.
‘ಬಿಜೆಪಿ ಸರ್ಕಾರದ ಹಗರಣಗಳನ್ನು ನಿರಂತರವಾಗಿ ಬಯಲಿಗೆ ತರುತ್ತಿದ್ದೇವೆ. ಇದರಿಂದ ತಪ್ಪಿಸಿಕೊಳ್ಳಲು ಬೊಮ್ಮಾಯಿ ಸದನದಲ್ಲಿ ವೀರಾವೇಶದ ಮಾತುಗಳನ್ನು ಆಡಿದ್ದಾರೆ. ನಾನು ಸದನದಲ್ಲಿ ಇಲ್ಲದ ಸಂದರ್ಭದಲ್ಲಿ ಆಧಾರರಹಿತ ಆರೋಪ ಮಾಡಿದ್ದಾರೆ. ನಾವು ಅಕ್ರಮ ಎಸಗಿದ್ದರೆ ಇವರ ಅಧಿಕಾರದ ಅವಧಿಯಲ್ಲಿ ತನಿಖೆ ನಡೆಸಿ, ಕ್ರಮ ಜರುಗಿಸಲು ಅವಕಾಶ ಇತ್ತಲ್ಲವೆ’ ಎಂದು ಕೇಳಿದರು